Advertisement
ತಿರುವನಂತಪುರ ಬಳಿಯ ಅಂಬೂರಿ ಎಂಬ ಸಣ್ಣ ಹಳ್ಳಿಯ ಆ ಮನೆಯಲ್ಲಿ ಬೆಳಕಾಗುವುದು ಸ್ವಲ್ಪ ಬೇಗವೇ. ಹಳ್ಳಿಯ ಜನರಿನ್ನೂ ಎದ್ದು, ಮೈ ಮುರಿಯುತ್ತಿರುವಾಗಲೇ, ಆ ಮನೆಯಿಂದ ಸ್ಕೂಟರೊಂದು ಧೂಳೆಬ್ಬಿಸುತ್ತ ಸಾಗುತ್ತದೆ. ಅಂದರೆ, ಗಂಟೆ ಏಳಾಯ್ತು. ಟೀಚರಮ್ಮ ಹೊರಟರು ಅಂತ ಅರ್ಥ. ಮತ್ತೆ ಸಂಜೆ ಅವರು ಬರುವುದು, ಏಳರ ನಂತರವೇ ಅನ್ನೋದು ಎಲ್ಲರಿಗೂ ಗೊತ್ತು. ಮಳೆ ಸುರಿಯಲಿ, ಚಳಿ ಮೈ ಕೊರೆಯುತ್ತಿರಲಿ, ಈ ಶಿಕ್ಷಕಿಯ ಗಡಿಯಾರ ಚಲಿಸುವುದು ಹೀಗೆಯೇ.
ಅಗಸ್ತ್ಯ ಏಕೋಪಾಧ್ಯಾಯ ಶಾಲೆ ಇರುವುದು ಕುನ್ನತುಮಲ ಎಂಬ ಅರಣ್ಯ ಪ್ರದೇಶದಲ್ಲಿ. 1- 4ನೇ ತರಗತಿಯವರೆಗಿನ ಆ ಶಾಲೆಗೆ, ಉಷಾ ಒಬ್ಬರೇ ಶಿಕ್ಷಕಿ. ಅಲ್ಲಿಗೆ ಬರುವವರೆಲ್ಲರೂ ಬುಡಕಟ್ಟು ಜನಾಂಗದ ಮಕ್ಕಳು. ಈ ವರ್ಷ ದಾಖಲಾಗಿರುವ ಮಕ್ಕಳ ಸಂಖ್ಯೆ 14. ಅಡುಗೆಗೆ ಸಹಾಯಕಿ ಒಬ್ಬಳಿದ್ದಾಳೆ ಅನ್ನೋದನ್ನು ಬಿಟ್ಟರೆ, ಉಳಿದ ಎಲ್ಲ ಕೆಲಸವನ್ನೂ ಉಷಾ ಅವರೇ ನೋಡಿಕೊಳ್ಳಬೇಕು. ನಾಲ್ಕು ತರಗತಿಯ ಮಕ್ಕಳಿಗೆ ಮಲಯಾಳಂ, ಗಣಿತ, ಇಂಗ್ಲಿಷ್, ಪರಿಸರ ಅಧ್ಯಯನ ಪಾಠ ಮಾಡುವುದರ ಜೊತೆಗೆ, ಸರ್ಕಾರದಿಂದ ಬರುವ ಅಡುಗೆ ಸಾಮಗ್ರಿ, ಪುಸ್ತಕ, ಸಮವಸ್ತ್ರಗಳನ್ನು ಶಿಕ್ಷಣ ಇಲಾಖೆಯಿಂದ ಶಾಲೆಗೆ ತರುವ, ಅಡುಗೆಯ ಉಸ್ತುವಾರಿ ನೋಡಿಕೊಳ್ಳುವ, ದಾಖಲಾತಿಗಳನ್ನು ಬರೆಯುವ ಜವಾಬ್ದಾರಿಯೂ ಶಿಕ್ಷಕಿಯ ಹೆಗಲಿನ ಮೇಲೇ ಬೀಳುತ್ತದೆ. ಅಷ್ಟೇ ಅಲ್ಲ, ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳಲ್ಲಿಯೂ ಮಕ್ಕಳನ್ನು ತಯಾರು ಮಾಡಬೇಕು. ಇಲ್ಲಿಂದ ಪಾಸ್ ಆಗಿ, ಬೇರೆ ಶಾಲೆಗೆ ಹೋದಾಗ, ನನ್ನ ಮಕ್ಕಳು ಯಾವ ವಿಷಯದಲ್ಲೂ ಹಿಂದೆ ಬೀಳಬಾರದು ಎಂಬುದು ಉಷಾರ ಕಾಳಜಿ. ಹಾಗಾಗಿ, ಮಕ್ಕಳನ್ನು ಸ್ಪರ್ಧಾತ್ಮಕವಾಗಿ ರೂಪಿಸುವಲ್ಲಿಯೂ ಇವರು ಹಿಂದೆ ಬಿದ್ದಿಲ್ಲ.
Related Articles
ಬಡ ಮಕ್ಕಳು ಶಾಲೆಯಿಂದ ದೂರ ಸರಿಯುತ್ತಿರುವುದನ್ನು ಗಮನಿಸಿದ ಕೇರಳ ಸರ್ಕಾರ, 1997ರಲ್ಲಿ ಡಿಸ್ಟ್ರಿಕ್ಟ್ ಪ್ರೈಮರಿ ಎಜುಕೇಶನ್ ಪ್ರೋಗ್ರಾಂ ಎಂಬ ಯೋಜನೆಯೊಂದನ್ನು ರೂಪಿಸಿತು. ಉಷಾ ಕುಮಾರಿ ಅವರು, ಆ ಯೋಜನೆಯ ಸ್ವಯಂ ಸೇವಕಿಯಾಗಿದ್ದರು. ಬುಡಕಟ್ಟು ಜನಾಂಗದವರಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುವ, ಆ ಮಕ್ಕಳನ್ನು ಶಾಲೆಗೆ ಕರೆ ತರುವ ಕೆಲಸ ಅವರದ್ದಾಗಿತ್ತು. ಕುನ್ನತುಮಲ ಸುತ್ತಮುತ್ತ ಸರ್ಕಾರಿ ಶಾಲೆ ಇಲ್ಲದಿರುವುದನ್ನು ಮನಗಂಡ ಸರ್ಕಾರ, 1999ರಲ್ಲಿ ಅಗಸ್ತ್ಯವನಂ ಎಂಬಲ್ಲಿ ಅಗಸ್ತ್ಯ ಏಕೋಪಾಧ್ಯಾಯ ಶಾಲೆ ತೆರೆಯಿತು. ಆಗ ಅಲ್ಲಿಗೆ ಉಷಾ, ಶಿಕ್ಷಕಿಯಾಗಿ ನೇಮಕವಾದರು. ಅವತ್ತು ಶುರುವಾದ ಪಯಣ, ಇಂದಿಗೂ ನಿಂತಿಲ್ಲ.
Advertisement
ಮನೆಮನೆಗೂ ಹೋಗಬೇಕಾಗಿತ್ತು… ಶಾಲೆಯೇನೋ ಶುರುವಾಯ್ತು. ಆದರೆ, ಶಾಲೆಗೊಂದು ಕಟ್ಟಡವೇ ಇರಲಿಲ್ಲ. ಮಕ್ಕಳೂ ಬರುತ್ತಿರಲಿಲ್ಲ. ಶಾಲೆಯಲ್ಲಿ ಕೊಟ್ಟ ಪಠ್ಯ ಪುಸ್ತಕಗಳನ್ನು ಒಲೆಗೆ ಎಸೆದು ಮಕ್ಕಳು ಕೂಲಿಗೆ ಹೋಗುತ್ತಿದ್ದರು. ಆಗ ಉಷಾ, ಮನೆಮನೆಗೂ ಹೋಗಿ, ಮಕ್ಕಳ ಮನವೊಲಿಸಬೇಕಾಗಿತ್ತು. ಕ್ರಮೇಣ ಅವರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾದ ಉಷಾ, ಬುಡಕಟ್ಟು ಜನಾಂಗದವರ ಮನವನ್ನೂ ಗೆದ್ದರು. ಮೊದಲ ಒಂದು ವರ್ಷ ಕಲ್ಲು ಬಂಡೆಯ ಮೇಲೆ, ಮರದ ಕೆಳಗೆ ಕುಳಿತೇ ಪಾಠ ಮಾಡಿದರು. ನಂತರ ಕಟ್ಟಡ ನಿರ್ಮಾಣವಾಯ್ತು, ಮಕ್ಕಳೂ ತಪ್ಪದೇ ಶಾಲೆಗೆ ಬರತೊಡಗಿದರು. ಸಂಬಳಕ್ಕಾಗಿ ದುಡಿಯುತ್ತಿಲ್ಲ
ಕೆಲವೊಮ್ಮೆ 2-3 ತಿಂಗಳಾದರೂ ಸಂಬಳ ಕೈ ಸೇರುವುದಿಲ್ಲ. ಮಕ್ಕಳ ಊಟದ ಸಾಮಗ್ರಿಗಳು ಬರುವುದಿಲ್ಲ. ಆಗೆಲ್ಲಾ ಉಷಾ, ತನ್ನ ಸ್ವಂತ ಹಣದಿಂದ ಮಕ್ಕಳಿಗೆ ಹಾಲು, ಮೊಟ್ಟೆ ತಂದು ಕೊಡುತ್ತಾರೆ. ಹಾಗಾಗಿಯೇ ಮಕ್ಕಳಿಗೆ, ಅವರ ಹೆತ್ತವರಿಗೆ ಉಷಾ ಟೀಚರ್ ಅಂದ್ರೆ ಅಚ್ಚುಮೆಚ್ಚು. ಹುಷಾರಿಲ್ಲದಿದ್ದರೂ ಶಾಲೆಗೆ ಬರುವ ಟೀಚರ್‌ಗೆ ವಾಪಸ್ ಮನೆಗೆ ಹೋಗಲಾಗದಿದ್ದರೆ, ವಿದ್ಯಾರ್ಥಿಗಳ ಮನೆಯಲ್ಲೇ ಉಪಚಾರ ಸಿಗುತ್ತದೆ. ಕಾಡುಪ್ರಾಣಿಗಳ ಭಯ
ಉಷಾ ಅವರು ಶಾಲೆಗೆ ಬರುವ ದಾರಿಯಲ್ಲಿ ಕೆಲವೊಮ್ಮೆ ಸಣ್ಣ ಪುಟ್ಟ ಕಾಡುಪ್ರಾಣಿಗಳು ಎದುರಾಗುತ್ತವಂತೆ. ಆನೆ, ಚಿರತೆ ಇರುವ ಅರಣ್ಯವಾಗಿದ್ದರೂ, ಅವು ಒಮ್ಮೆಯೂ ಎದುರಿಗೆ ಸಿಕ್ಕದಿರುವುದು ಅವರ ಪುಣ್ಯ. ಮಳೆಗಾಲದಲ್ಲಿ ನದಿ ತುಂಬಿ ಹರಿದಾಗ, ಮಳೆಯಿಂದಾಗಿ ದಾರಿಯಲ್ಲಿ ಭೂಕುಸಿತ ಉಂಟಾದಾಗ ಜೀವ ಕೈಯಲ್ಲಿ ಹಿಡಿದು ಓಡಾಡಬೇಕು. ಆದರೂ, ಶಾಲೆಗೆ ರಜೆ ಮಾಡಲು ಉಷಾರ ಮನಸ್ಸು ಒಪ್ಪುವುದಿಲ್ಲ. ನಾಲ್ಕನೇ ತರಗತಿಯವರೆಗೆ ಮಕ್ಕಳು ಚೆನ್ನಾಗಿ ಓದಿದರೆ, ಮುಂದೆ ಹೆತ್ತವರು ಬೋರ್ಡಿಂಗ್ ಶಾಲೆಗೆ ಕಳಿಸುವ ಮನಸ್ಸು ಮಾಡುತ್ತಾರೆ. ಹಾಗಾಗಿ ಅವರಿಗಾಗಿ ನಾನು ಯಾವುದೇ ಕಷ್ಟ ಎದುರಿಸಲು ಸಿದ್ಧ ಅಂತಾರೆ ಉಷಾ. ಬೇರೆ ಶಾಲೆಯ ಮಕ್ಕಳಂತೆ, ನನ್ನ ಮಕ್ಕಳೂ ಎಲ್ಲಾ ವಿಷಯದಲ್ಲೂ ಜಾಣರಾಗಬೇಕು. ಮುಂದೆ ಸಿಟಿಯ ಶಾಲೆಗೆ ಓದಲು ಹೋದಾಗ, ನನಗೇನೂ ಗೊತ್ತಿಲ್ಲ ಅನ್ನೋ ಕೀಳರಿಮೆ ಅವರನ್ನು ಕಾಡಬಾರದು. ಹಾಗಾಗಿ, ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲಿ ಅವರನ್ನು ಸಜ್ಜುಗೊಳಿಸುವುದು ನನ್ನ ಆದ್ಯತೆ. ಒಬ್ಬ ಶಿಕ್ಷಕರಿಂದ ಈ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ.
ಕೆ.ಆರ್. ಉಷಾ ಕುಮಾರಿ – ಪ್ರಿಯಾಂಕ ಎನ್.