ವಿಜಯಪುರ: ಜಿಲ್ಲೆಯ ಸರ್ಕಾರಿ ಉರ್ದು ಶಾಲೆಯೊಂದರ ದೈಹಿಕ ಶಿಕ್ಷಕಿ ವಿದ್ಯಾರ್ಥಿನಿಯರಿಂದ ಶಾಲೆಯ ನೆಲ ಸ್ವಚ್ಛಗೊಳಿಸುವ ಕೆಲಸ ಮಾಡಿಸುವ ಮೂಲಕ ಪಾಲಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಸರ್ಕಾರಿ ಉರ್ದು ಶಾಲೆಯ ದೈಹಿಕ ಶಿಕ್ಷಕಿ ವಿರುದ್ಧ ಈ ದೂರು ಕೇಳಿ ಬಂದಿದೆ. ತಮ್ಮ ಮಕ್ಕಳು ಟ್ಯಾಂಕ್ ನಿಂದ ಬಕೆಟ್ ನಲ್ಲಿ ನೀರು ತಂದು ಶಾಲೆಯ ನೆಲವನ್ನು ಸ್ವಚ್ಛಗೊಳಿಸುವುದನ್ನು ಸಾರ್ವಜನಿಕರೊಬ್ಬರು ವಿಡಿಯೋ ಮಾಡಿದ್ದು, ಸಾರ್ವಜನಿವಾಗಿ ಬಹಿರಂಗವಾಗಿತ್ತು.
ಇದನ್ನು ನೋಡಿದ ಮಕ್ಕಳ ಪಾಲಕರು ಶಾಲೆಗೆ ಆಗಮಿಸಿ ದೈಹಿಕ ಶಿಕ್ಷಕಿ ವಿರುದ್ಧ ಹರಿಹಾಯ್ದರಲ್ಲದೇ, ಬಡವರ ಮಕ್ಕಳು ಎಂಬ ಕಾರಣಕ್ಕೆ ಶಾಲೆಗಳಲ್ಲಿ ಅವರಿಂದ ನೀರು ಹೊತ್ತು ತರುವ, ಬಂಡೆ ಸ್ವಚ್ಛಗೊಳಿಸುವಂಥ ಕಾರ್ಯಕ್ಕೆ ಮುಂದಾಗಿದ್ದೀರಿ ಎಂದು ಹರಿಹಾಯ್ದರು.
ಬಡವರು ಆರ್ಥಿಕ ದುಸ್ಥಿತಿಯ ಕಾರಣಕ್ಕೆ ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಶಿಕ್ಷಣಕ್ಕಾಗಿ ಕಳಿಸಿದರೆ, ಇಂಥ ಕಸ ಗೂಡಿಸುವ, ನೆಲ ಸ್ವಚ್ಛಗೊಳಿಸುವ ಕೆಲಸ ಮಾಡಿಸಿದರೆ ಹೇಗೆ. ಬಡವರ ಮಕ್ಕಳು ಎಂಬ ಕಾರಣ ಇಂಥ ವರ್ತನೆ ತೋರುತ್ತಿದ್ದೀರಿ ಎಂದು ವಾಗ್ದಾಳಿ ನಡೆಸಿದರು.
ಆದರೂ ಶಿಕ್ಷಕರು ಸಬೂಬು ಹೇಳಲು ಮುಂದಾಗಿದ್ದು, ಶಾಲೆಯ ಮುಖ್ಯೋಪಾದ್ಯಾಯರು ಕೂಡ ಈ ಬಗ್ಗೆ ಪಾಲಕರಿಗೆ ಸೂಕ್ತ ಸಮಜಾಯಿಸಿ ನೀಡಿಲ್ಲ ಎಂದು ಮಕ್ಕಳ ಪಾಲಕರು, ಸಂಬಂಧಿಸಿದ ಶಿಕ್ಷಕರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.