ಮಹಾನಗರ: ಶಿಕ್ಷಕ ವೃತ್ತಿ ಅತ್ಯಂತ ಗೌರವಯುತವಾದುದು. ಶಿಕ್ಷಕರು ಪ್ರಾಮಾಣಿಕತೆಯಿಂದ, ಮಾನ ವೀಯ ಮೌಲ್ಯ ಬೆಳೆಸಿಕೊಳ್ಳುತ್ತಾ, ವೃತ್ತಿ ಧರ್ಮದ ಗೌರವ ಮತ್ತು ಘನತೆ ಎತ್ತಿ ಹಿಡಿಯಬೇಕು ಎಂದು ಬಿಜೈ ಸೆಂಟ್ರಲ್ ಸ್ಕೂಲಿನ ಪ್ರಾಂಶುಪಾಲ ವಂ| ರಾಬರ್ಟ್ ಡಿ’ಸೋಜಾ ಹೇಳಿದರು.
ಶಾಲೆಯಲ್ಲಿ ಇತ್ತೀಚೆಗೆ ಶಿಕ್ಷಕರಿಗೆ ಆಯೋಜಿಸಿದ್ದ ಐದು ದಿನಗಳ ಶಿಕ್ಷಕರ ಪುನಶ್ಚೇತನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಶಿಬಿರದಲ್ಲಿ ವಿವಿಧ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿ ಬೇರೆ ಬೇರೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು. ಶಾಲಾ ಶಿಸ್ತು, ನಿಯಮ ಪಾಲನೆ ಇತ್ಯಾದಿ ವಿಷಯಗಳ ಬಗ್ಗೆ ಅನಿತಾ ಥೋಮಸ್ ವಿವರಿಸಿದರು. ತರಗತಿ ನಿರ್ವಹಣೆ, ಪಠ್ಯ – ಪಠ್ಯೇತರ ಚಟುವಟಿಕೆಗಳ ನಿಯಮಿತ ಆಯೋಜನೆ, ಕಾರ್ಯಕ್ರಮ ಆಯೋಜನೆ ಬಗ್ಗೆ ವಿದ್ಯಾ ಜೋಸೆಫ್ ತರಬೇತಿ ನೀಡಿದರು. ಶಿಕ್ಷಕರಲ್ಲಿ ನೈತಿಕ ಮೌಲ್ಯಗಳು – ವ್ಯಕ್ತಿತ್ವ ವಿಕಸನ ಸಕಾರಾತ್ಮಕ ಚಿಂತನೆಗಳನ್ನು ಅಳವಡಿಸುವುದರ ಬಗ್ಗೆ ರಜಿನಾ ದಿನೇಶ್ ವಿವರಿಸಿದರು. ಹಣಕಾಸು, ವಿನಿಯೋಗ, ಜೀವನ ಮೌಲ್ಯ, ನೈತಿಕತೆಯ ಬಗೆಗೆ ಕೆ. ನರಸಿಂಹ ಪ್ರಭು ಮಾಹಿತಿ ನೀಡಿದರು.
ಸಿ.ಬಿ.ಎಸ್.ಇ. ಸಹಯೋಗದೊಂದಿಗೆ ಹಮ್ಮಿಕೊಂಡ ‘ಮೌಲ್ಯ ಶಿಕ್ಷಣದಲ್ಲಿ ವಿದ್ಯಾರ್ಥಿಗಳ ಸಾಮರ್ಥ್ಯ ಬೆಳೆಸುವ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿ ಮನಿಲಾ ಕರ್ವಾಲೋ ಅವರು ‘ನೀತಿ ಶಿಕ್ಷಣದ ಮಹತ್ವ, ಅವುಗಳನ್ನು ಅಳವಡಿಸಿಕೊಳ್ಳುವ ವಿಧಾನ, ವೈಯಕ್ತಿಕ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮೌಲ್ಯಗಳನ್ನು ಬೆಳೆಸುವ ಬಗ್ಗೆ ವಿವರಿಸಿ, ಪ್ರಾತ್ಯಕ್ಷಿಕೆಯನ್ನೂ ನೀಡಿದರು.
ಸಮಾರೋಪ
ಸಮಾರೋಪದಲ್ಲಿ ಶಾಲೆಯ ವತಿ ಯಿಂದ ಪ್ರಾಂಶುಪಾಲರು ಸಂಪನ್ಮೂಲ ವ್ಯಕ್ತಿಗಳನ್ನು ಶಾಲು ಹೊದೆಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಉಪ ಪ್ರಾಂಶುಪಾಲೆ ಬೆಲಿಟಾ ಮಸ್ಕರೇನ್ಹಸ್ ಉಪಸ್ಥಿತರಿದ್ದರು.
ಗ್ರೆಟ್ಟಾ ಮಿನೇಜಸ್ ಸ್ವಾಗತಿಸಿ, ದೀಪಾ ಡಿ’ಸೋಜಾ ನಿರೂಪಿಸಿದರು. ಐವನ್ ಮಸ್ಕರೇನ್ಹಸ್, ಹೆನ್ರಿ ಮಸ್ಕರೇನ್ಹಸ್, ಶೈಲಾ ಪಿರೇರಾ, ವಿವಿಟಾ ಡಿ’ಸೋಜಾ ಸಹಕರಿಸಿದರು. ಲವೀನಾ ಸೆರಾವೋ ವಂದಿಸಿದರು.