ಬೆಂಗಳೂರು: ಹಣ ಅಧಿಕಾರಕ್ಕಾಗಿ ಓದದೇ ಉತ್ತಮ ಜೀವನ ರೂಪಿಸಿಕೊಳ್ಳುವ ಮೌಲ್ಯ ವಿದ್ಯಾರ್ಥಿಗಳಿಗೆ ಸಿಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶಿಕ್ಷಕ ಸಮುದಾಯಕ್ಕೆ ಸಲಹೆ ನೀಡಿದರು.
ನಗರ ಅಂಬೇಡ್ಕರ್ ಭವನದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಸಾಧಕ ಶಿಕ್ಷಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು. ಡಾ. ಎ.ಪಿ.ಜೆ. ಅಬ್ದುಲ್ ಕಲಾಂ, ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರು ಕಂಡ ಕನಸನ್ನು ನಾವು ಸಾಕಾರಗೊಳಿಸಬೇಕಾಗಿದೆ. ಭ್ರಷ್ಟಾಚಾರವಿಲ್ಲದ, ಜಾತೀಯತೆ ಇಲ್ಲದ, ಭಯೋತ್ಪಾದಕತೆ ಇಲ್ಲದ ದೇಶವನ್ನು ಕಟ್ಟಬೇಕು. ಇದಕ್ಕೆ ಶಿಕ್ಷಕರ ಪಾತ್ರ ಅತಿಮುಖ್ಯ ಎಂದರು.
ಶಾಲಾ ಕಟ್ಟಡಗಳನ್ನು ಕಟ್ಟಲು ತಾವು ಕೊಟ್ಟ 30 ಕೋಟಿ ಹಣವನ್ನು ವಿನಿಯೋಗ ಮಾಡಲಾಗುವುದು. ಶಿಕ್ಷಕರ ಸಮಸ್ಯೆಗಳ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಆ ಸಮಸ್ಯೆಗಳ ಪರಿಹಾರಕ್ಕೆ ಇಲಾಖೆಗೆ ಒಳ್ಳೆಯ ಸಚಿವರನ್ನು ಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಸಚಿವರು, ಅದನ್ನು ಬಗೆ ಹರಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಸಚಿವ ಸುರೇಶ್ ಕುಮಾರ್ ಮಾತನಾಡಿ, ಶಿಕ್ಷಕರ ಎಲ್ಲ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸೇವೆ ಸಲ್ಲಿಸಲಿದ್ದೇವೆ. ಶಿಕ್ಷಕರ ವರ್ಗಾವಣೆ ಸಮಸ್ಯೆ ಬಗೆಹರಿಸಲು ಕಾಯ್ದೆಗೆ ತಿದ್ದುಪಡಿ ತರುವ ಉದ್ದೇಶದಿಂದ ವಿಧಾನ ಪರಿಷತ್ ಸದಸ್ಯರನ್ನು ಒಳಗೊಂಡ ಸಮಿತಿಯೊಂದನ್ನು ರಚಿಸಲಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಮಾತನಾಡಿ, ಶಿಕ್ಷಕರ ವರ್ಗಾವಣೆ ಒಂದು ಸಮಸ್ಯೆಯೇ ಅಲ್ಲ. ಆದರೆ ಹಿಂದಿನ ಸರ್ಕಾರಗಳು ಗ್ರಾಮೀಣ, ನಗರ ಎಂದು ಭಾಗ ಮಾಡಿದೆ. ಇದರಿಂದ ವರ್ಗಾವಣೆ ವ್ಯವಸ್ಥೆ ಹಾಳಾಗಿದೆ. ಕಳೆದ 14 ತಿಂಗಳು ಅಧಿಕಾರಿಗಳು ನಮ್ಮ ಫೋನ್ ಎತ್ತುತ್ತಿರಲಿಲ್ಲ. ಬದಲಾವಣೆ ಮಾಡುವ ಸಚಿವರು ಬರಲೇ ಇಲ್ಲ. ಹಿಂದಿನ ಶಿಕ್ಷಣ ಇಲಾಖೆ ಭ್ರಷ್ಟಾಚಾರದಿಂದ ದರಿದ್ರವಾಗಿತ್ತು. ಆದರೆ ಈಗ ಉತ್ತಮ ಸಚಿವರು ಬಂದಿದ್ದಾರೆ. ಇಲಾಖೆಯ ಡಿಡಿಪಿಐ ಹಾಗೂ ಬಿಇಒ ಕಚೇರಿಗಳು ನರಕಗಳಾಗಿ ಹೋಗಿವೆ. ಈ ಹಿಂದೆ ಇಲಾಖೆ ಬ್ರಹ್ಮಾಂಡ ಭ್ರಷ್ಟಾಚಾರ ಆಗಿತ್ತು. ಶಿಕ್ಷಕರು ಒಂದು ರೂಪಾಯಿ ಭ್ರಷ್ಟಾಚಾರ ಮಾಡಲ್ಲ. ಶಿಕ್ಷಕರನ್ನು ತುಳಿಯಬೇಡಿ, ಹಿರಿಯ ಅಧಿಕಾರಿಗಳನ್ನ ನಿಯಂತ್ರಿಸಿ ಎಂದು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.