ಧಾರವಾಡ: ಕೊಂಕಣಿಯನ್ನು ಶಾಲಾ-ಕಾಲೇಜುಗಳಲ್ಲಿ ತೃತೀಯ ಭಾಷೆಯಾಗಿ ಅಳವಡಿಸಬೇಕು ಎಂದು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಆರ್.ಪಿ. ನಾಯ್ಕ ಹೇಳಿದರು. ನಗರದ ರಂಗಾಯಣದ ಸಾಂಸ್ಕೃತಿಕ ಸಮುತ್ಛಯ ಭವನದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕೊಂಕಣಿ ಮಾನ್ಯತಾ ಬೆಳ್ಳಿಹಬ್ಬ ವರ್ಷ ಪ್ರಯುಕ್ತ ನಡೆದ ಕೊಂಕಣಿ ಭಾಷೆ-ಸಂಸ್ಕೃತಿ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೊಂಕಣಿ ಮಾತನಾಡುವ ಬೇರೆ ಬೇರೆ ಭಾಗದ ಜನರೆಲ್ಲ ಸೇರಿ ಕೊಂಕಣಿ ಭಾಷೆಯನ್ನು ಜನಪ್ರಿಯಗೊಳಿಸಿ ಮುಂಬರುವ ದಿನಗಳಲ್ಲಿ ಕೊಂಕಣಿ ಭಾಷೆಗೆ ಪ್ರತ್ಯೇಕ ಲಿಪಿ ಆಗಬೇಕು. ಕೊಂಕಣಿ ಭಾಷೆಗೆ ಸಂವಿಧಾನ ಮಾನ್ಯತೆ ನೀಡಿ 25 ವರ್ಷ ಸಂದಿದ್ದು ನಾಡಿನಾದ್ಯಂತ 25 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ಧಲಿಂಗೇಶ ರಂಗಣ್ಣವರ ಮಾತನಾಡಿ, ಮುಂದಿನ ಜನಾಂಗಕ್ಕೆ ಸಂಸ್ಕೃತಿ ಉಳಿಯಲು ಭಾಷೆ ಬಹಳ ಪ್ರಾಮುಖ್ಯತೆ ಹೊಂದಿದೆ. ಕೊಂಕಣಿ ವೈವಿಧ್ಯತೆಯಿಂದ ಕೂಡಿದ ಭಾಷೆಯಾಗಿದೆ ಎಂದರು. ಕಿಟೆಲ್ ಮಹಾವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಡಾ| ಎಂ.ವೈ. ಸಾವಂತ ಮಾತನಾಡಿ, ಕೊಂಕಣಿ ಭಾಷೆಯ ಗ್ರಂಥ ಗಳನ್ನು ಪೋರ್ಚುಗೀಸರು ನಾಶಪಡಿಸಿ ಕೊಂಕಣಿ ಭಾಷೆಗೆ ದೊಡ್ಡ ಪೆಟ್ಟು ನೀಡಿದ್ದಾರೆ.
ಕವಿವಿಯಲ್ಲಿ ಕೊಂಕಣಿ ಅಧ್ಯಯನ ಪೀಠ ಪ್ರಾರಂಭಿಸುವಂತೆ ಒತ್ತಾಯಿಸಿದರು. ಸಾಧನಾ ಮಾನವ ಹಕ್ಕುಗಳ ಸಂಸ್ಥೆಯ ಸಂಸ್ಥಾಪಕಿ ಡಾ| ಇಸಬೆಲ್ಲಾದಾಸ ಕ್ಸೇವಿಯರ್ ಮಾತನಾಡಿದರು. ನಂತರ ಕೊಂಕಣಿ ಭಾಷಾ ಉಪನ್ಯಾಸ, ಕವನ ವಾಚನ ಮತ್ತು ಪ್ರಶಂಸೆ, ಕೊಂಕಣಿ ಹಾಡು ನೃತ್ಯ ಮತ್ತು ಪ್ರಾತ್ಯಕ್ಷಿತೆ ನಡೆಯಿತು.
ಪ್ರಜ್ವಲ ಹವ್ಯಾಸಿ ಕನ್ನಡ ಹಾಗೂ ಕೊಂಕಣಿ ಕಲಾ ಸಂಘದ ಉಪಾಧ್ಯಕ್ಷ ಕೃಷ್ಣಾನಂದ ಮಹಾಲೆ ಇತರರಿದ್ದರು. ರಿಜಿಸ್ಟಾರ್ ಡಾ| ಬಿ. ದೇಡದಾಸ ಪೈ ಸ್ವಾಗತಿಸಿದರು. ಸಂಚಾಲಕ ಸಂತೋಷ ಮಹಾಲೆ ವಂದಿಸಿದರು.