ದಿಲ್ಲಿಯಲ್ಲಿನ ಪಾಕಿಸ್ಥಾನಿ ರಾಯಭಾರ ಕಚೇರಿಯಲ್ಲಿ 50 ಪ್ರತಿಶತ ಸಿಬಂದಿಯನ್ನು ಕಡಿಮೆ ಮಾಡುವಂತೆ ಭಾರತೀಯ ವಿದೇಶಾಂಗ ಇಲಾಖೆ ಪಾಕಿಸ್ಥಾನಕ್ಕೆ ಸೂಚನೆ ನೀಡಿರುವುದಷ್ಟೇ ಅಲ್ಲದೇ, 7 ದಿನಗಳಲ್ಲೇ ಈ ಕೆಲಸ ಮಾಡುವಂತೆ ಗಡುವು ನೀಡಿದೆ. ಅಲ್ಲದೇ, ಇಸ್ಲಾಮಾಬಾದ್‌ನಲ್ಲಿರುವ ಭಾರತ ರಾಯಭಾರ ಕಚೇರಿಯ 50 ಪ್ರತಿಶತದಷ್ಟು ಸಿಬಂದಿಯನ್ನು ವಾಪಸ್ ಕರೆಸಿಕೊಳ್ಳಲು ಮುಂದಾಗಿದೆ. ನಿರೀಕ್ಷೆಯಂತೆಯೇ, ಭಾರತದ ಈ ನಡೆಗೆ ಪಾಕಿಸ್ಥಾನ ತಗಾದೆ ತೆಗಿದಿದೆ. “ಚೀನದೊಂದಿಗೆ ಗಡಿ ಭಾಗದಲ್ಲಿ ನಡೆದಿರುವ ವಿವಾದದಿಂದ ವಿಪಕ್ಷಗಳ ಗಮನವನ್ನು ಬೇರೆಡೆ ಸೆಳೆಯಲು ಭಾರತ ಸರಕಾರ ಹೀಗೆ ಮಾಡುತ್ತಿದೆ’ ಎಂದು ಪಾಕ್ ವಿದೇಶಾಂಗ ಸಚಿವ ಕಿಡಿಕಾರುತ್ತಿದ್ದಾರೆ.
ಪಾಕಿಸ್ಥಾನದ ರಾಯಭಾರ ಕಚೇರಿಯ ಸಿಬಂದಿಯ ಅನುಮಾನಾಸ್ಪದ ಚಲನವಲನಗಳ ಮೇಲೆ ಭಾರತ ಮೊದಲಿನಿಂದಲೂ ಹದ್ದಿನಗಣ್ಣಿಟ್ಟಿತ್ತು. ಇದಕ್ಕೆ ಪುಷ್ಟಿನೀಡುವಂತೆ ಪಾಕ್ ರಾಯಭಾರ ಕಚೇರಿಯ ಸಿಬ್ಬಂದಿ ಬೇಹುಗಾರಿಕೆಯಲ್ಲಿ ಭಾಗಿಯಾಗಿದ್ದು ಪತ್ತೆಯಾಗಿತ್ತು. ಆಗ ಸಿಬ್ಬಂದಿಯನ್ನು ಬಂಧಿಸಿ, ಅನಂತರ ಪಾಕಿಸ್ಥಾನಕ್ಕೆ ಕಳುಹಿಸಲಾಗಿತ್ತು. ಒಟ್ಟಲ್ಲಿ ಪಾಕ್‌ನ ದುವ್ಯìವಹಾರಗಳಿಗೆ ಭಾರತ ಕತ್ತರಿಹಾಕುತ್ತಿದ್ದಂತೆಯೇ, ಆ ದೇಶ ಪರದಾಡಿಬಿಡುತ್ತದೆ.
ಸತ್ಯವೇನೆಂದರೆ, ಭಾರತಕ್ಕೆ ತೊಂದರೆ ಉಂಟುಮಾಡುವುದನ್ನೇ ತನ್ನ ಧ್ಯೇಯೋದ್ದೇಶ ಮಾಡಿಕೊಂಡಿರುವ ಪಾಕಿಸ್ಥಾನಕ್ಕೆ ಕಳೆದ ಕೆಲವು ವರ್ಷಗಳಿಂದ ಭಾರತ ದೊಡ್ಡ ಪಾಠಗಳನ್ನೇ ಕಲಿಸಲಾರಂಭಿಸಿದೆ. ಅದರಲ್ಲೂ ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದತಿಯಾಗಿದ್ದು ಹಾಗೂ ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗಿರುವುದನ್ನು ಪಾಕಿಸ್ಥಾನಕ್ಕೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಲೇ ಇಲ್ಲ. ಈ ಕಾರಣಕ್ಕಾಗಿಯೇ, ಗಡಿ ಭಾಗದಲ್ಲಿ ಉಗ್ರರು ಅಥವಾ ತನ್ನ ಸೇನೆಯ ಮೂಲಕ ನಿತ್ಯ ತೊಂದರೆಯೊಡ್ಡಲು ಪ್ರಯತ್ನಿಸುತ್ತಲೇ ಇರುತ್ತದೆ. ಗಡಿ ಭಾಗದಲ್ಲಂತೂ ನಿತ್ಯವೂ ಗುಂಡಿನ ದಾಳಿ ನಡೆಸುತ್ತಲೇ ಇರುತ್ತದೆ. ಸೋಮವಾರ ರಾಜೌರಿ ಮತ್ತು ನೌಶಾರಾ ಭಾಗದಲ್ಲಿ ಪಾಕ್ ಸಿಡಿಸಿದ ಮೋರ್ಟಾರ್‌ಗಳಿಂದಾಗಿ ಭಾರತೀಯ ಯೋಧರೊಬ್ಬರು ಮೃತಪಟ್ಟಿದ್ದಾರೆ.
ಭಾರತದಲ್ಲಿ ಪಾಕ್ ಉಗ್ರರನ್ನು ನುಸುಳಿಸಲು ಪ್ರಯತ್ನಿಸುವಾಗೆಲ್ಲ ಹೀಗೆ ಗುಂಡಿನ ದಾಳಿ ಮಾಡುತ್ತಿರುತ್ತದೆ. ಆದರೆ, ಕಳೆದ 2 ವರ್ಷಗಳಿಂದ ನಮ್ಮ ಸೇನೆ ಹಾಗೂ ಗುಪ್ತಚರ ಏಜೆನ್ಸಿಗಳ ಸಹಭಾಗಿತ್ವದ ಕಾರ್ಯಾಚರಣೆಗಳು ಎಷ್ಟು ಪರಿಣಾಮಕಾರಿಯಾಗಿ ಬದಲಾಗಿವೆಯೆಂದರೆ, ಪಾಕ್‌ನ ತಂತ್ರಗಳೆಲ್ಲ ನೆಲಕಚ್ಚುತ್ತಿವೆ, ಅದು ಪೋಷಿಸಿದ ಉಗ್ರರೆಲ್ಲ ನಾಶವಾಗುತ್ತಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ, ಕೇಂದ್ರ ಸರಕಾರವೀಗ ಕಾಶ್ಮೀರದ ಪ್ರತ್ಯೇಕತಾವಾದಿಗಳನ್ನು ಕಟ್ಟಿಹಾಕಿದೆ. ಪಾಕಿಸ್ಥಾನದ ಕುಮ್ಮಕ್ಕಿನಿಂದಾಗಿ ಈ ಪ್ರತ್ಯೇಕತಾವಾದಿ ನಾಯಕರು ಸ್ಥಳೀಯ ಯುವಕರನ್ನು ದೇಶದ ವಿರುದ್ಧ ಎತ್ತಿಕಟ್ಟುವ ಪ್ರಯತ್ನ ಮಾಡುತ್ತಾ ಬಂದಿದ್ದರು. ಈಗ ಅವರೆಲ್ಲರೂ ಮೆತ್ತಗಾಗಿರುವುದರ ಪರಿಣಾಮವಾಗಿಯೇ, ಕಲ್ಲುತೂರಾಟ ಘಟನೆಗಳೂ ನಿಂತಿವೆ. ಸಹಜವಾಗಿಯೇ, ಇದೆಲ್ಲದರಿಂದಾಗಿ ಪಾಕಿಸ್ತಾನಿ ಸೇನೆ ಹುಚ್ಚುಹಿಡಿದಂತೆ ವರ್ತಿಸುತ್ತಿದೆ.
ಒಟ್ಟಲ್ಲಿ ಪಾಕ್‌ನ ಕುತಂತ್ರಗಳನ್ನೆಲ್ಲ ಭಾರತವು ಅತ್ಯಂತ ಚಾಣಾಕ್ಷವಾಗಿ ಬೇರುಮಟ್ಟದಲ್ಲೇ ತುಂಡರಿಸುತ್ತಾ ಸಾಗುತ್ತಿರುವುದು ನಿಜಕ್ಕೂ ಶ್ಲಾಘನೀಯ ವಿಚಾರವೇ ಸರಿ. ಆದರೂ, ಹೀಗೆ ಗಡಿಯಾಚೆಯಿಂದ ಪಾಕಿಸ್ಥಾನ ನಡೆಸುವ ದಾಳಿಗಳಿಂದಾಗಿ ನಮ್ಮ ಸೈನಿಕರ ಜೀವಹಾನಿಯಾಗುತ್ತಿರುವುದನ್ನು ತಪ್ಪಿಸಬೇಕಾಗಿದೆ.