ಹೊಸಕೋಟೆ: ದೇಶದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕೇಂದ್ರದ ಬಿಜೆಪಿ ಸರಕಾರ ಸಂಪೂರ್ಣ ವಿಫಲವಾಗಿದೆ ಎಂದು ಮಾಜಿ ಕೇಂದ್ರ ಸಚಿವ ಅಲ್ಲಂ ರಾಜು ಹೇಳಿದರು. ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಸುದ್ದಗೋಷ್ಠಿಯಲ್ಲಿ ಮಾತನಾಡಿದರು.
ಜಾರಿಗೊಳಿಸುತ್ತಿರುವ ಯೋಜನೆಗಳು ಕೇವಲ ಬಂಡವಾಳಶಾಹಿಗಳಿಗೆ ಅನುಕೂಲವಾಗಿದ್ದು ರಾಷ್ಟ್ರದ ಬೆಳವಣಿಗೆ ಕುಂಠಿತಗೊಳ್ಳುತ್ತಿದೆ. ನಿರುದ್ಯೋಗ ಸಮಸ್ಯೆ ತೀವ್ರಗೊಳ್ಳುತ್ತಿದ್ದು ಉದ್ಯೋಗ ಸೃಷ್ಟಿ ಬಗ್ಗೆ ನೀಡಿದ್ದ ಭರವಸೆಯನ್ನು ಇದುವರೆವಿಗೂ ಈಡೇರಿಸುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ.
ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಜನರು ತೀವ್ರ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ. ಸಾಮಾನ್ಯ ಕನಿಷ್ಠ ಸೌಲಭ್ಯಗಳನ್ನು ಕಲ್ಪಿಸಿಕೊಡಲು ವಿಫಲವಾಗಿದ್ದು ಆರ್ಥಿಕ ಬಿಕ್ಕಟ್ಟು ಸೃಷ್ಟಿಗೊಳಿಸಿರುವುದೇ ಪ್ರಮುಖ ಸಾಧನೆಯಾಗಿದೆ. ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ಸಮ್ಮಿಶ್ರ ಸರಕಾರವನ್ನು ಕುತಂತ್ರಗಳಿಂದಾಗಿ ಪದಚ್ಯುತಗೊಳಿಸಿ ಉಪಚುನಾವಣೆಗೆ ಬಿಜೆಪಿಯೇ ಕಾರಣವಾಗಿದೆ.
ರಾಜೀನಾಮೆ ನೀಡಿರುವ ಎಲ್ಲಾ 17 ಶಾಸಕರೂ ಸಹ ತಮ್ಮ ಸ್ವಾರ್ಥಕ್ಕಾಗಿ ರಾಜೀನಾಮೆ ನೀಡಿದವರೇ ಆಗಿದ್ದು ಮತದಾರರು ಇಂತಹ ದ್ರೋಹಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದರು. ಹೆಬ್ಬಾಳ ಶಾಸಕ ಬೈರತಿ ಸುರೇಶ್ ಮಾತನಾಡಿ ಚುನಾವಣೆ ನಂತರ ಎಂಟಿಬಿ ನಾಗರಾಜ್ ವಿರುದ್ಧ ದೂರು ದಾಖಲಿಸಲಾಗುವುದು.
ನಾಮಪತ್ರದೊಂದಿಗೆ ಸಲ್ಲಿಸಿರುವ ಮಾಹಿತಿಯಲ್ಲಿ ಸಾಲ ನೀಡಿರುವ ಬಗ್ಗೆ ಉಲ್ಲೇಖೀಸದೆ ಇದೀಗ ರಾಜಕಾರಣಿಗಳಿಗೆ ಕೋಟ್ಯಾಂತರ ರೂ.ಗಳನ್ನು ಕೊಟ್ಟಿರುವುದಾಗಿ ಹೇಳಿಕೆ ನೀಡುತ್ತಿದ್ದಾರೆ. ತಾಲೂಕಿನಲ್ಲಿ ನ.24ರಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಮಾಜಿ ಸಚಿವರುಗಳಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮದ್,
ಕೃಷ್ಣಬೈರೇಗೌಡ ಇನ್ನಿತರರು ಸೂಲಿಬೆಲೆ, ಅನುಗೊಂಡನಹಳ್ಳಿ, ನಂದಗುಡಿ ಹೋಬಳಿ ಹಾಗೂ ನಗರದಲ್ಲಿ ವ್ಯಾಪಕ ಪ್ರಚಾರ ಕಾರ್ಯ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು. ಮಾಜಿ ಶಾಸಕರಾದ ಶ್ರೀನಿವಾಸ್, ರಾಘವೇಂದ್ರ ಹಿಟ್ನಾಳ್, ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮುನಿಶಾಮಣ್ಣ ಉಪಸ್ಥಿತರಿದ್ದರು.