Advertisement

ಗೇರು ಬೆಳೆಗೆ ಚಹಾ ಸೊಳ್ಳೆ ಕಾಟ

11:14 PM Feb 26, 2020 | Sriram |

ಪಳ್ಳಿ: ಕಾರ್ಕಳ ತಾಲೂಕಿನಾದ್ಯಂತ ಹವಾಮಾನ ವೈಪರೀತ್ಯದಿಂದಾಗಿ ಗೇರು ಕೃಷಿಕರು ಕಂಗಾಲಾಗಿರುವ ಮಧ್ಯೆ, ಇದೀಗ ಚಹಾ ಸೊಳ್ಳೆ ಕಾಟದಿಂದಾಗಿ ಕೃಷಿಕರು ತತ್ತರಿಸಿದ್ದಾರೆ.

Advertisement

ಸುಮಾರು 15 ರಿಂದ 20 ವರ್ಷಗಳಲ್ಲೇ ಗೇರು ಕೃಷಿಗೆ ಗರಿಷ್ಠ ಪ್ರಮಾಣದಲ್ಲಿ ಚಹಾ ಸೊಳ್ಳೆ ಕಾಟ ಬಾಧಿಸಿದ್ದು ನಷ್ಟ ಭೀತಿ ಕಾಡಿದೆ. ಗೇರು ಮರಗಳಲ್ಲಿ ಹೂವು ಕರಟಿ ಹೋಗಿದೆ. ಕೆಲವೆಡೆ ಈಗಷ್ಟೇ ಹೂವು ಬಿಡುತ್ತಿದೆ.

ಹವಾಮಾನ ವೈಪರೀತ್ಯ
ವಾತಾವರಣದಲ್ಲಾದ ಬದಲಾವಣೆಯೇ ಚಹಾ ಕೀಟ ಬಾಧೆ ಹೆಚ್ಚಳಕ್ಕೆ ಕಾರಣ ಎಂದು ಕೃಷಿ ಅಧಿಕಾರಿಗಳು ಹೇಳುತ್ತಾರೆ. ಚಳಿ, ಮಳೆ, ಬಿಸಿಲು ಸಮಯಕ್ಕೆ ಸರಿಯಾಗಿ ಬರದೇ ಇರುವುದರಿಂದ ಗೇರು, ಹಲಸು, ಮಾವು, ಕೊಕ್ಕೋ ಬೆಳೆಗಳಲ್ಲಿ ಹೂ-ಕಾಯಿ, ಹಣ್ಣಾಗುವ ಸಹಜ ಪ್ರಕ್ರಿಯೆಗೆ ಅಡ್ಡಿಯಾಗಿದೆ. ಆರಂಭದಲ್ಲಿ ಚಳಿ, ಬಳಿಕ ಸೆಕೆ ವಾತಾವರಣ ಗೇರು ಫ‌ಸಲಿಗೆ ಪೂರಕ. ಆದರೆ ಈಗ ಚಳಿ-ಸೆಕೆ, ನಡುವೆ ಮೋಡದ ವಾತಾವರಣ ಇರುವುದು ಬೆಳೆಗಳಲ್ಲಿ ಹೊಸ ರೋಗ, ಕೀಟ ಬಾಧೆಗೆ ಕಾರಣವಾಗುತ್ತಿದೆ.

ಚಹಾ ಸೊಳ್ಳೆ ಎಂದರೆ ಏನು?
ಚಹಾ ಸೊಳ್ಳೆ ಬಹುತೇಕ ತೋಟಗಾರಿಕಾ ಬೆಳೆಗೆ ಹಾನಿ ಉಂಟು ಮಾಡುವ ಕೀಟ. ಇದು ಗೇರು ಮರದ ಎಲೆಗಳಲ್ಲಿ ಗೂಡನ್ನು ಕಟ್ಟಿ ಮರದ ಎಲೆಯ ರಸವನ್ನು ಹೀರುವ ಜತೆಗೆ ಹೂವಿನಲ್ಲಿರುವ ಚಿಗುರು ಮತ್ತು ಹೂಗೊಂಚಲನ್ನು ಹೀರುತ್ತದೆ. ಇದರಿಂದ ಮರ ಒಣಗುತ್ತದೆ. ಕೀಟಬಾಧೆಯಾದರೆ ಕಾಯಿ ಬೆಳೆಯುವ ಮೊದಲೇ ಉದುರುತ್ತದೆ.

ನಿಯಂತ್ರಣ ಹೇಗೆ?
ಚಹಾ ಸೊಳ್ಳೆ ಕೀಟ ಬಾಧಿತ ಮರಕ್ಕೆ ಮೂರು ಹಂತಗಳಲ್ಲಿ ಕ್ರಿಮಿನಾಶಕ ಸಿಂಪಡಣೆ ಮಾಡಬೇಕು. ಪ್ರಥಮ ಹಂತದಲ್ಲಿ ಬೇವಿನ ಎಣ್ಣೆಯನ್ನು 5 ಎಂ.ಎಲ್‌. ಅನ್ನು 1 ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು. ದ್ವಿತೀಯ ಹಂತವಾಗಿ 2 ಗ್ರಾಂ ಕಾರ್ಬರಿಲ್‌ ಅನ್ನು 1 ಲೀಟರ್‌ ನೀರು ಬೆರೆಸಿ ಸಿಂಪಡಿಸಬೇಕು.ಮೂರನೇ ಹಂತವಾಗಿ ಮೊನೋಕ್ರೊಟೊಫಾಸ್‌ 2 ಗ್ರಾಂ ಅನ್ನು 1 ಲೀಟರ್‌ ನೀರಿಗೆ ಬೆರೆಸಿ ಸಿಂಪಡಿಸಬೇಕು.

Advertisement

ಯಾವ ಹಂತದಲ್ಲಿ ಸಿಂಪಡಣೆ?
ಸಣ್ಣ ಎಲೆಗಳ ಹಂತದಲ್ಲಿ, ಹೂ ಬಿಡುವ ಹಂತದಲ್ಲಿ, ಹಾಗೂ ಕಾಯಿ ಕಟ್ಟುವ ಹಂತದಲ್ಲಿ ಸಿಂಪಡಿಸಬೇಕು. ಅಲ್ಲದೆ ಒಂದೇ ಕೀಟನಾಶಕವನ್ನು ಮೂರು ಬಾರಿ ಬಳಸಿದಲ್ಲಿ ಸೊಳ್ಳೆ ನಾಶವಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ.

ನೆಡು ತೋಪು ವಹಿಸಿಕೊಂಡವರಿಗೆ ಸಂಕಷ್ಟ
ಅರಣ್ಯ, ಪಂಚಾಯತ್‌, ಗೇರು ಅಭಿವೃದ್ಧಿ ನಿಗಮದ ಹಲವಾರು ನೆಡುತೋಪುಗಳು ತಾಲೂಕಿನಾದ್ಯಂತವಿದ್ದು, ಇದರ ಗುತ್ತಿಗೆಯ ಟೆಂಡರ್‌ ಅಕ್ಟೋಬರ್‌, ನವೆಂಬರ್‌ ತಿಂಗಳಲ್ಲಿ ನಡೆಯುತ್ತದೆ. ಟೆಂಡರ್‌ನಲ್ಲಿ ನೆಡುತೋಪು ವಹಿಸಿಕೊಂಡ ಗುತ್ತಿಗೆದಾರರರಿಗೆ ಹವಾಮಾನ ವೈಪರೀತ್ಯದಿಂದ ನಿರೀಕ್ಷಿತ ಬೆಳೆಯಿಲ್ಲದೆ ನಷ್ಟದ ಜತೆಗೆ ಚಹಾ ಸೊಳ್ಳೆ ಬಾಧೆಯಿಂದ ನಷ್ಟ ಸಂಭವಿಸುವಂತಾಗಿದೆ. ಈ ಬಾರಿ ತಾಲೂಕಿನ ಹೆಬ್ರಿ, ಚಾರ, ಬೇಳಂಜೆ, ಶಿವಪುರ, ಬೆಳ್ಮಣ್‌, ಪಳ್ಳಿ, ಬೈಲೂರು ಭಾಗಗಳಲ್ಲಿ ಅತೀ ಹೆಚ್ಚು ಗೇರು ಮರಗಳಿಗೆ ಹಾನಿಯಾಗಿದೆ.

ಗೇರು ಕೃಷಿಗೆ ಪೂರಕ ವಾತಾವರಣ ಇಲ್ಲ. ಇದರ ಜತೆಗೆ ಚಹಾ ಸೊಳ್ಳೆಯ ಕಾಟವೂ ಗಾಯದ ಮೇಲೆ ಬರೆ ಎಂಬಂತಾಗಿದೆ. ಕೃಷಿಕರು, ಗೇರು ನೆಡುತೋಪು ಗುತ್ತಿಗೆ ವಹಿಸಿಕೊಂಡವರಿಗೆ ಇದು ದೊಡ್ಡ ಹೊಡೆತ ನೀಡಿದೆ.

ಬೆಳೆ ಇಲ್ಲ; ಧಾರಣೆಯಿದೆ
ತಾಲೂಕಿನಲ್ಲಿ ಸುಮಾರು 4,000 ಎಕರೆ ಪ್ರದೇಶದಲ್ಲಿ ಗೇರು ಕೃಷಿ ತೋಟವಿದೆ. 2015ನೇ ಸಾಲಿನಲ್ಲಿ 90 ರಿಂದ 100 ರೂ. ಗೆ ಖರೀದಿಯಾಗಿದ್ದ ಗೇರು ಬೀಜ, 2016ರಲ್ಲಿ ಕಳೆದ ಬಾರಿ 120 ರಿಂದ 130 ರೂ., 2017ರಿಂದ 2019ರ ಸಾಲಿನಲ್ಲಿ 130 ರಿಂದ 150 ರೂ. ರವರೆಗೆ ಖರೀದಿಯಾಗಿದೆ. ಈ ಬಾರಿ ಧಾರಣೆ ಏರಿಕೆ ನಿರೀಕ್ಷೆ ಇತ್ತಾದರೂ ಸಮಸ್ಯೆಗಳಿಂದಾಗಿ ಫ‌ಸಲು ಇಲ್ಲದಂತಾಗಿದೆ.

ಚಹಾ ಸೊಳ್ಳೆ, ಹವಾಮಾನದಲ್ಲಿನ ಏರಿಳಿತ
ಗೇರು ಬೆಳೆಗೆ ಬಾಧಿಸುವ ಕೀಟಗಳಲ್ಲಿ ಚಹಾ ಸೊಳ್ಳೆ ಪ್ರಮುಖ. ಹವಾಮಾನದಲ್ಲಿನ ಏರಿಳಿತ ಹಾಗೂ ನಿರ್ವಹಣೆ ಕೊರತೆಯಿಂದಾಗಿ ಹೆಚ್ಚಿನ ಬೆಳೆ ನಷ್ಟವಾಗುತ್ತಿದೆ. ಈ ಋತುವಿನಲ್ಲಿ ಕಂಡು ಬಂದ ವಾತಾವರಣ ಅಸಮತೋಲನದಿಂದಾಗಿ ಹೆಚ್ಚಿನ ಬಾಧೆ ಕಂಡುಬಂದಿದೆ.
-ಶ್ರೀನಿವಾಸ್‌ ಬಿ.ವಿ., ಹಿರಿಯ ಸಹಾಯಕ ನಿರ್ದೇಶಕರು,
ತೋಟಗಾರಿಕೆ ಇಲಾಖೆ ಕಾರ್ಕಳ

ಪ್ರಾಕೃತಿಕ ಅಸಮತೋಲನ
ಪ್ರಾಕೃತಿಕ ಅಸಮತೋಲನದಿಂದಾಗಿ ರೈತರ ಉಪ ಬೆಳೆಯಾದ ಗೇರು ಕೃಷಿಗೆ ಅಪಾರ ನಷ್ಟ ಉಂಟಾಗಿದ್ದು, ಕೃಷಿಕರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ. ಈ ಬಾರಿ ಉತ್ತಮ ಧಾರಣೆಯಿದ್ದರೂ ಗೇರು ಬೀಜ ಇಲ್ಲದಂತಾಗಿದೆ.
-ಜಯ ಎಸ್‌. ಕೋಟ್ಯಾನ್‌, ಪ್ರಗತಿಪರ ಕೃಷಿಕರು

ಅಪಾರ ನಷ್ಟ
ಗೇರು ಕೃಷಿಯನ್ನೇ ನಂಬಿ ನೆಡು ತೋಪು ಗುತ್ತಿಗೆ ಆಧಾರದಲ್ಲಿ ವಹಿಸಿಕೊಂಡಿದ್ದು ಈ ಬಾರಿ ನಿರೀಕ್ಷಿತ ಫ‌ಸಲು ಇಲ್ಲದೆ ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
-ಜಗದೀಶ್‌, ನೆಡುತೋಪು ಗುತ್ತಿಗೆದಾರರು

ಸಂದೇಶ್‌ ಕುಮಾರ್‌ ನಿಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next