Advertisement

ಮೋದಿ ಸಂಪುಟದಿಂದ ಟಿಡಿಪಿ ಹೊರಕ್ಕೆ

02:51 PM Mar 08, 2018 | Sharanya Alva |

ಅಮರಾವತಿ/ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸಂಪುಟಕ್ಕೆ ಟಿಡಿಪಿಯ ಇಬ್ಬರು ಸಚಿವರು ಗುರುವಾರ ರಾಜೀನಾಮೆ ನೀಡಲಿದ್ದಾರೆ.  ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡದೇ ಇರುವ ಕೇಂದ್ರ ಸರ್ಕಾರದ ನಿರ್ಧಾರ ಖಂಡಿಸಿ ಬುಧವಾರ ತಡರಾತ್ರಿ ಟಿಡಿಪಿ ಮುಖ್ಯಸ್ಥ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ್ದಾರೆ. 

Advertisement

ಅದಕ್ಕೆ ಪೂರಕವಾಗಿ ವಿಜಯವಾಡದಲ್ಲಿ ಮಾತನಾಡಿದ ಆಂಧ್ರಪ್ರದೇಶ ಬಿಜೆಪಿ ನಾಯಕರು ನಾಯ್ಡು ಸಂಪುಟದಲ್ಲಿರುವ ಇಬ್ಬರು ಸಚಿವರು ತ್ಯಾಗಪತ್ರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದೊಂದು ನೋವಿನ ನಿರ್ಧಾರ ಎಂದು ಹೇಳಿದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ಆಂಧ್ರಪ್ರದೇಶದ ಹಿತಾಸಕ್ತಿಯನ್ನು ಕಾಪಾಡಿಕೊಳ್ಳಲು ಈ ಕ್ರಮ ಅನಿವಾರ್ಯ ಎಂದಿದ್ದಾರೆ.

ಆಂಧ್ರಪ್ರದೇಶದಲ್ಲಿ ಬಿಜೆಪಿ ಜತೆಗಿನ ಮೈತ್ರಿ ಮುಂದುವರಿಸುವ ಬಗ್ಗೆ ಮುಕ್ತ ಆಯ್ಕೆಯನ್ನೂ ಇರಿಸಿಕೊಂಡಿದ್ದಾರೆ ಚಂದ್ರಬಾಬು ನಾಯ್ಡು. ಲೋಕಸಭೆಯಲ್ಲಿ 16 ಸಂಸದರು ಮತ್ತು ರಾಜ್ಯಸಭೆಯಲ್ಲಿ ಆರು ಮಂದಿ ಸದಸ್ಯರು ಇದ್ದಾರೆ. ಕೇಂದ್ರ ಸಂಪುಟಕ್ಕೆ ಸೇರ್ಪಡೆಯಾಗುವ
ವೇಳೆ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಭರವಸೆ ನೀಡಲಾಗಿತ್ತು. ಅದನ್ನು ಈಡೇರಿಸಲಾಗಿಲ್ಲ. ಹೀಗಾಗಿ ಸಂಪುಟದಲ್ಲಿ ಮುಂದುವರಿಯುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದಿದ್ದಾರೆ.

ಆಂಧ್ರಕ್ಕೆ ವಿಶೇಷ ಸ್ಥಾನಮಾನಕ್ಕೆ ಬದಲಾಗಿ ಹೆಚ್ಚುವರಿ ಹಣಕಾಸಿನ ನೆರವು ನೀಡುವ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರ ಘೋಷಣೆ ತೀರಾ ವಿಳಂಬವಾಗಿದೆ. ನಾಲ್ಕು ವರ್ಷಗಳಿಂದ ಬೇಡಿಕೆ ಈಡೇರಿಸಬೇಕು ಎಂದು ಮನವಿ ಮಾಡುತ್ತಾ ಬರುತ್ತಿದ್ದೇವೆ. ಆದರೆ ಅದನ್ನು ಕೇಂದ್ರ ಸರ್ಕಾರ ಪರಿಗಣಿಸಿಯೇ ಇಲ್ಲ ಎಂದು ದೂರಿದ್ದಾರೆ. ಮಾತ್ರವಲ್ಲದೆ ಯಾವ ಕಾರಣಕ್ಕಾಗಿ ಅದನ್ನು ನೀಡಬೇಕು ಎಂಬ ಬಗ್ಗೆ ಕೇಂದ್ರಕ್ಕೆ ಎಲ್ಲ ರೀತಿಯಲ್ಲಿ ಮನವರಿಕೆ ಮಾಡಿಕೊಡಲಾಗಿದ್ದರೂ ಫ‌ಲ ನೀಡಿಲ್ಲ ಎಂದರು ನಾಯ್ಡು.

ಬಿಜೆಪಿ ಜತೆಗೆ ಮೈತ್ರಿ ಮುಂದುವರಿಕೆ ಬಗ್ಗೆ ಮಾತನಾಡಿದ ಆಂಧ್ರಪ್ರದೇಶ ಮುಖ್ಯಮಂತ್ರಿ ಅದರ ಬಗ್ಗೆ ಇನ್ನೂ ನಿರ್ಧಾರ ಕೈಗೊಳ್ಳಲಾಗಿಲ್ಲ ಎಂದಿದ್ದಾರೆ. “ಜನರು ನನ್ನ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಾರೆ. 29 ಬಾರಿ ಕೇಂದ್ರಕ್ಕೆ ಹೋಗಿ ಮಾತುಕತೆ ನಡೆಸಿದ್ದೇನೆ. ರಾಜೀನಾಮೆ
ನಿರ್ಧಾರದಿಂದ ಬಿಜೆಪಿಯವರು ಹಲವು ಅಡೆತಡೆಯೊಡ್ಡಬಹುದು. ಆದರೂ ಬೇರೆ ದಾರಿ ಇಲ್ಲ’ ಎಂದರು.

Advertisement

ಕಾಯುತ್ತಿರುವೆ: ತಮ್ಮ ನಿರ್ಧಾರದ ಬಗ್ಗೆ ಬಿಜೆಪಿ ನಾಯಕರಿಂದ ಯಾವ ರೀತಿ ಪ್ರತಿಕ್ರಿಯೆ ಬರುತ್ತಿದೆ ಎಂಬುದನ್ನು ಕಾಯುತ್ತಿರುವುದಾಗಿಯೂ ಹೇಳಿದ್ದಾರೆ ನಾಯ್ಡು. ಬುಧವಾರ ವಿಧಾನಸಭೆಯಲ್ಲಿ  ಮಾತನಾಡಿದ ವೇಳೆಯೂ ಪ್ರಚೋದನಾತ್ಮಕವಾಗಿ ಮಾತನಾಡಿಲ್ಲ ಎಂದರು. ಔಪಚಾರಿಕವಾಗಿ ನಿರ್ಧಾರ ತಿಳಿಸುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಫೋನ್‌ ಮಾಡಿದೆ. ಆದರೆ ಅವರ ಜತೆ ಸಂಪರ್ಕ ಸಾಧಿಸಲು
ಸಾಧ್ಯವಾಗಲಿಲ್ಲ ಎಂದರು.

ಬಿಜೆಪಿ ತಿರಸ್ಕಾರ: ಆಂಧ್ರಪ್ರದೇಶವನ್ನು ಕಡೆಗಣಿಸಲಾಗಿದೆ ಎಂಬ ಆಂಧ್ರ ಮುಖ್ಯಮಂತ್ರಿ ವಾದವನ್ನು ಬಿಜೆಪಿ ಸರಾಸಗಟಾಗಿ ತಿರಸ್ಕರಿಸಿದೆ. ಕೇಂದ್ರ ಸರ್ಕಾರ ಆ ರಾಜ್ಯ ಮಂಡಿಸಿದ ಎಲ್ಲಾ ಬೇಡಿಕೆಗಳನ್ನು ಈಡೇರಿಸಿದೆ ಮತ್ತು ನಿಯಮಕ್ಕೆ ಒಳಪಡದೆಯೂ ಆಂಧ್ರಪ್ರದೇಶದ ಹಿತಾಸಕ್ತಿ ಕಾಯಲು ಮೋದಿ ಸರ್ಕಾರ ಕ್ರಮ ಕೈಗೊಂಡಿದೆ ಎಂದು ಬಿಜೆಪಿ ವಕ್ತಾರ ಜಿ.ವಿ.ಎಲ್‌.ನರಸಿಂಹ ರಾವ್‌ ಸಮರ್ಥನೆ ನೀಡಿದ್ದಾರೆ.

ಇದಕ್ಕೂ ಮುನ್ನ ನಡೆದಿದ್ದ ಬೆಳವಣಿಗೆಯಲ್ಲಿ ಕೇಂದ್ರ ವಿತ್ತ ಸಚಿವ ಅರುಣ್‌ ಜೇಟ್ಲಿ ಭಾವನಾತ್ಮಕವಾಗಿ ಮಾತನಾಡಿದರೆ ನೆರವಿನ ಮೊತ್ತ ಹೆಚ್ಚು ಮಾಡಲು ಸಾಧ್ಯವಿಲ್ಲ. 14ನೇ ಹಣಕಾಸು ಆಯೋಗದ ಶಿಫಾರಸಿನ ಅನ್ವಯ ಈಶಾನ್ಯ ರಾಜ್ಯಗಳಿಗೆ ಮಾತ್ರ ವಿಶೇಷ ಸ್ಥಾನಮಾನ ಕೊಡಬಹುದು ಎಂದು ಹೇಳಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next