Advertisement

ಶಾ, ರಾಜನಾಥ್‌ ಫೋನ್‌ ಸಂಧಾನ ನಾಯ್ಡು ಮನವೊಲಿಕೆ

06:00 AM Feb 05, 2018 | Team Udayavani |

ಅಮರಾವತಿ/ನವದೆಹಲಿ: ಬಿಜೆಪಿ ನೇತೃತ್ವದ ಎನ್‌ಡಿಎಯಿಂದ ಹೊರಬರುವುದಾಗಿ ಗುಟುರು ಹಾಕಿದ್ದ ಟಿಡಿಪಿ ನಾಯಕ, ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಸ್ವಲ್ಪಮಟ್ಟಿಗೆ ತಣ್ಣಗಾಗಿದ್ದಾರೆ. ಸದ್ಯಕ್ಕೆ ಅವರು ಮೈತ್ರಿ ಮುಂದುವುರಿಸುವುದಾಗಿ ಹೇಳಿದ್ದಾರೆ.

Advertisement

ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರು ಫೋನ್‌ ಕರೆ ಮಾಡಿ, ಯಾವುದೇ ರೀತಿಯ ಕಠಿಣ ನಿಲುವು ತಳೆಯಬಾರದು. ಮೈತ್ರಿಯಲ್ಲಿ ಮುಂದುವರಿಯಬೇಕು ಎಂದು ಮನವಿ ಮಾಡಿಕೊಂಡ ಹಿನ್ನೆಲೆಯಲ್ಲಿ ಅವರು ಈ ತೀರ್ಮಾನಕ್ಕೆ ಬಂದಿದ್ದಾರೆ.

ಆಂಧ್ರಪ್ರದೇಶ ರಾಜಧಾನಿ ಅಮರಾವತಿಯಲ್ಲಿ ಭಾನುವಾರ ನಡೆದ ಟಿಡಿಪಿ ತುರ್ತು ಸಭೆಗೆ ಮುನ್ನ ಸಚಿವ ರಾಜನಾಥ್‌ ಮತ್ತು ಅಮಿತ್‌ ಶಾ ನಾಯ್ಡು ಜತೆ ದೂರವಾಣಿಯಲ್ಲಿ ಮಾತನಾಡಿದ್ದರು. ಮೈತ್ರಿಕೂಟ ತ್ಯಜಿಸಬಾರದು ಎಂದು ಮನವಿ ಮಾಡಿದ್ದರು ಎಂದು ಟಿಡಿಪಿ ನಾಯಕ ಕಂಬಂಪತಿ ರಾಮಮೋಹನ ರಾವ್‌ ಹೇಳಿದ್ದಾರೆ. ಅವರಿಬ್ಬರ ಮನವಿಯ ಮೇರೆಗೆ, ಸದ್ಯಕ್ಕೆ ಎನ್‌ಡಿಎ ಮಿತ್ರಕೂಟದಲ್ಲಿಯೇ ಮುಂದುವರಿಯುವ ಬಗ್ಗೆ ಚಂದ್ರಬಾಬು ನಾಯ್ಡು ನಿರ್ಧರಿಸಿದ್ದಾರೆ ಎಂದು ರಾವ್‌ ಹೇಳಿದ್ದಾರೆ.

ಸಂಸತ್‌ನಲ್ಲಿ ಗದ್ದಲ ಎಬ್ಬಿಸಿ:
ಆಂಧ್ರಪ್ರದೇಶದಿಂದ ತೆಲಂಗಾಣ ಪ್ರತ್ಯೇಕಗೊಂಡ ಬಳಿಕ ಸಿಗಬೇಕಾದ ವಿಶೇಷ ಸ್ಥಾನಮಾನ ಮತ್ತು ಇತರೆ ಸವಲತ್ತುಗಳನ್ನು ಪಡೆಯಲು ಸಂಸತ್‌ನಲ್ಲಿ ಗದ್ದಲ ಎಬ್ಬಿಸಿ ಕೇಂದ್ರದ ಗಮನ ಸೆಳೆಯಬೇಕು. ಅದಕ್ಕಾಗಿ ಸದನದಿಂದ ಅಮಾನತಾದರೂ ತೊಂದರೆಯಿಲ್ಲ ಎಂದು ಸಿಎಂ ನಾಯ್ಡು ಸಭೆಯಲ್ಲಿ ಸಲಹೆ ನೀಡಿದ್ದಾರೆ. ಆಂಧ್ರಪ್ರದೇಶ ಪುನರ್‌ಸಂಘಟನೆ ಕಾಯ್ದೆ 2014ರ ಪ್ರಕಾರ  ಸಿಗಬೇಕಾಗಿರುವ ಯೋಜನೆಗಳನ್ನು ಜಾರಿಗೊಳಿಸಿಯೇ ತೀರಬೇಕು. ಅದಕ್ಕಾಗಿ ಕೇಂದ್ರದ ಮೇಲೆ ಒತ್ತಡ ಹೇರಬೇಕು ಎಂದು ಸಂಸದರಿಗೆ ಸೂಚಿಸಿದ್ದಾರೆ ಎಂದು ರಾಮಮೋಹನ ರಾವ್‌ ತಿಳಿಸಿದ್ದಾರೆ. ಆಂಧ್ರಪ್ರದೇಶ ಪುನರ್‌ಸಂಘಟನೆ ಕಾಯ್ದೆಯಲ್ಲಿ ಉಲ್ಲೇಖೀಸಲಾಗಿರುವ ಆಶ್ವಾಸನೆ, ಪೋಲಾವರಂ ನೀರಾವರಿ ಯೋಜನೆಗಳ ಬಗ್ಗೆ ಸ್ಪಷ್ಟ ಭರವಸೆ ಮತ್ತು ಅದರ ಅನುಷ್ಠಾನ ಜರೂರಾಗಿ ಆಗಬೇಕು ಎನ್ನುವುದು ಟಿಡಿಪಿಯ ಬೇಡಿಕೆಯಾಗಿದೆ.

ನಾಯ್ಡು ಸೂಚನೆ ಕೊಡಲಿದ್ದಾರೆ:
ಬಿಜೆಪಿ ಜತೆಗೆ ಮೈತ್ರಿ ಯಾವಾಗ ಕಡಿದುಕೊಳ್ಳಬೇಕು ಎಂಬುದರ ಬಗ್ಗೆ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೇ ಮಾಹಿತಿ ನೀಡಲಿದ್ದಾರೆ. ಮಂಗಳವಾರದಿಂದ ಸಂಸತ್‌ ಆವರಣದಲ್ಲಿ ಪಕ್ಷದ ಸಂಸದರು ಫ‌ಲಕಗಳನ್ನು ಹಿಡಿದು ಕೇಂದ್ರದ ಗಮನ ಸೆಳೆಯಲಿದ್ದೇವೆ. ಬಳಿಕ ಮುಂದಿನ ಪ್ರತಿಭಟನೆಯ ಬಗ್ಗೆ ಚಿಂತಿಸಲಿದ್ದೇವೆ ಎಂದಿದ್ದಾರೆ ರಾವ್‌.

Advertisement

ಇದೇ ವೇಳೆ ಕೇಂದ್ರ ಸಚಿವ ವೈ.ಎಸ್‌.ಚೌಧರಿ ಮಾತನಾಡಿ, ಬಿಜೆಪಿ ಜತೆಗೆ ಮೈತ್ರಿ ಕಡಿದುಕೊಳ್ಳುವ ಮಾತನಾಡಿಲ್ಲ ಎಂದು ಹೇಳಿದ್ದಾರೆ. “ವಿಚ್ಛೇದನದ ಮಾತೇಕೆ? ಏನಿದ್ದರೂ ಮದುವೆಯ ಬಗ್ಗೆ ಮಾತನಾಡೋಣ’ ಎಂದಿದ್ದಾರೆ.

ಕೇಂದ್ರ ಬಜೆಟ್‌ನಲ್ಲಿ ಆಂಧ್ರಪ್ರದೇಶಕ್ಕೆ ಕಡಿಮೆ ಪ್ರಮಾಣದ ಅನುದಾನ ನೀಡಿದ್ದು ಮತ್ತು ರಾಜ್ಯ ಘಟಕದ ಬಿಜೆಪಿ ನಾಯಕರು ಸರ್ಕಾರದ ಬಗ್ಗೆ ಲಘುವಾಗಿ ಮಾತನಾಡಿದ್ದು ಸಿಎಂ ನಾಯ್ಡು ಅವರ ಸಿಟ್ಟಿಗೆ ಕಾರಣವಾಗಿತ್ತು. ಹೀಗಾಗಿ ಭಾನುವಾರ ಪಕ್ಷದ ಸಭೆ ಕರೆದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next