Advertisement

ಮೆಸ್ಕಾಂ ಉಪವಿಭಾಗದಲ್ಲಿ ಟಿಸಿ ಬ್ಯಾಂಕ್‌

01:11 AM Sep 07, 2021 | Team Udayavani |

ಮಂಗಳೂರು: ವಿದ್ಯುತ್‌ ಪರಿವರ್ತಕ (ಟ್ರಾನ್ಸ್‌ಫಾರ್ಮರ್‌) ಹಾಳಾದರೆ 24 ಗಂಟೆಯೊಳಗೆ ಅದನ್ನು ಬದಲಾಯಿಸಿ ಹೊಸ ಟಿಸಿ ಅಳವಡಿ ಸಬೇಕು. ಈ ಕಾರಣಕ್ಕಾಗಿ ಮೆಸ್ಕಾಂ ವ್ಯಾಪ್ತಿಯ ಎಲ್ಲ ಉಪವಿಭಾಗಗಳಲ್ಲಿ ಟಿಸಿ ಬ್ಯಾಂಕ್‌ ಸ್ಥಾಪಿಸಬೇಕು ಎಂದು ಇಂಧನ ಖಾತೆ ಸಚಿವ ವಿ. ಸುನಿಲ್‌ ಕುಮಾರ್‌ ಸೂಚಿಸಿದ್ದಾರೆ.

Advertisement

ಮಂಗಳೂರಿನ ಮೆಸ್ಕಾಂ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಮೆಸ್ಕಾಂನ ಪ್ರಗತಿ ಪರಿಶೀಲನ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಟಿಸಿ ಬ್ಯಾಂಕ್‌ ಪರಿಕಲ್ಪನೆ ಸದ್ಯ ರಾಜ್ಯದಲ್ಲಿ ಇಲ್ಲ. ತುರ್ತಾಗಿ ಟಿಸಿ ಎಲ್ಲಾದರೂ ಹಾಳಾದರೆ ಅದನ್ನು ರಿಪೇರಿ ಮಾಡುವುದನ್ನು ಬಿಟ್ಟರೆ ಸಂಗ್ರಹ ನಮ್ಮಲ್ಲಿಲ್ಲ. ಹೀಗಾಗಿ ಟಿಸಿ ಬ್ಯಾಂಕ್‌ನಲ್ಲಿ ಬೇರೆ ಬೇರೆ ಸಾಮರ್ಥ್ಯದ ತಲಾ ಐದು ಟಿಸಿಗಳನ್ನು ಸಂಗ್ರಹಿಸಿಡಬೇಕು ಎಂದವರು ತಿಳಿಸಿದರು.

ಪಡಿತರವಿದ್ದರೆ ವಿದ್ಯುತ್‌ :

ಪಡಿತರ ಚೀಟಿ ಇರುವಂತಹ ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಿಗೂ ವಿದ್ಯುತ್‌ ನೀಡುವ ಬೆಳಕು ಯೋಜನೆಯನ್ನು ಪರಿಣಾಮ ಕಾರಿಯಾಗಿ ಜಾರಿಗೊಳಿಸಬೇಕು. ಅವರು ಸ್ಥಳೀಯ ಆಡಳಿತದಿಂದ ನಿರಾಕ್ಷೇಪಣ ಪತ್ರ ಪಡೆಯುವ ಅಗತ್ಯವಿಲ್ಲ ಎಂದರು.

Advertisement

ಇಲಾಖೆಯಲ್ಲಿ ಮುಂದಿನ 100 ದಿನದಲ್ಲಿ ಏನಾಗಬೇಕು ಎಂಬುದಕ್ಕೆ ಆದ್ಯತೆ ನೀಡಿ ಗ್ರಾಹಕಸ್ನೇಹಿ ಇಲಾಖೆ ರೂಪಿಸಲು ಆದ್ಯತೆ ನೀಡಬೇಕು. ಈ ನಿಟ್ಟಿನಲ್ಲಿ ವಿದ್ಯುತ್‌ ಸರಬರಾಜು ಸೋರಿಕೆಯನ್ನು ಶೇ. 50ರಷ್ಟು ಕಡಿಮೆ ಮಾಡಬೇಕು. ರೂಫ್‌ ಟಾಪ್‌ ಸೋಲಾರ್‌ ಯೋಜನೆಗೆ ವಿಶೇಷ ಆದ್ಯತೆ ನೀಡಬೇಕು. 1912 ಕಾಲ್‌ ಸೆಂಟರ್‌ ಅನ್ನು ಮತ್ತಷ್ಟು ಸಕ್ರಿಯ ಗೊಳಿಸಿ ಅದನ್ನು ಮೇಲಧಿಕಾರಿ ಹಂತದವರು ಗಮನಿಸಬೇಕು ಎಂದರು.

ಮೆಸ್ಕಾಂ ನಿರ್ದೇಶಕ ಕಿಶೋರ್‌ ಕುಮಾರ್‌, ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ ಕುಮಾರ್‌ ಮಿಶ್ರಾ, ನಿರ್ದೇಶಕ (ತಾಂತ್ರಿಕ) ಪದ್ಮಾವತಿ ಉಪಸ್ಥಿತರಿದ್ದರು.

ಎಲೆಕ್ಟ್ರಿಕ್‌ ರೀಚಾರ್ಜ್‌  ಸೆಂಟರ್‌ :

ಎಲೆಕ್ಟ್ರಿಕ್‌ ವಾಹನಗಳ ಸಂಖ್ಯೆ ಸದ್ಯ ಏರಿಕೆಯಾಗುತ್ತಿರುವ ಕಾರಣದಿಂದ ವಿವಿಧ ಭಾಗಗಳಲ್ಲಿ ಮೆಸ್ಕಾಂ ವತಿಯಿಂದ ಎಲೆಕ್ಟ್ರಿಕ್‌ ರೀಚಾರ್ಜ್‌ ಸೆಂಟರ್‌ ಆರಂಭಿಸ ಬೇಕು. ಮೊದಲಿಗೆ ಮಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರದಲ್ಲಿ ರೀಚಾರ್ಜ್‌ ಸೆಂಟರ್‌ ಆರಂಭಿಸಬೇಕು ಎಂದು ಸಚಿವ ಸುನೀಲ್‌ ಕುಮಾರ್‌ ಸೂಚಿಸಿದರು.

ಗಂಗಾಕಲ್ಯಾಣ; 30 ದಿನದೊಳಗೆ ವಿದ್ಯುತ್‌ :

ವಿವಿಧ ನಿಗಮಗಳ ವತಿಯಿಂದ ಗಂಗಾಕಲ್ಯಾಣ ಬೋರ್‌ವೆಲ್‌ ಯೋಜನೆಗೆ ಸಂಬಂಧಿಸಿ ನಿಗಮದವರು ಮೆಸ್ಕಾಂಗೆ ಹಣ ಪಾವತಿ ಮಾಡಿದ 30 ದಿನದೊಳಗೆ ವಿದ್ಯುತ್‌ ಸಂಪರ್ಕ ಒದಗಿಸಬೇಕು. ನೀಡದಿದ್ದರೆ ಅದಕ್ಕೆ ಇಎ ಜವಾಬ್ದಾರಿಯಾಗಿರುತ್ತಾರೆ. ನಿಗಮ ಹಾಗೂ ಮೆಸ್ಕಾಂ ಜತೆಯಾಗಿ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ರೈತರು ಅಲೆದಾಟ ಮಾಡಲು ಅವಕಾಶ ನೀಡಬಾರದು ಎಂದು ಸುನೀಲ್‌ ಕುಮಾರ್‌ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next