ದಾವಣಗೆರೆ: ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿ ಟೈಲರ್ ಕಲ್ಯಾಣ ಮಂಡಳಿ ರಚನೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಟೈಲರ್ ಮತ್ತು ಸಹಾಯಕರ ಫೆಡರೇಷನ್ ಕಾರ್ಯಕರ್ತರು ನಗರದಲ್ಲಿ ಗುರುವಾರ ಧರಣಿ ನಡೆಸಿ, ಅಪರ ಜಿಲ್ಲಾಧಿಕಾರಿ ಪದ್ಮಾ ಬಸವಂತಪ್ಪಗೆ ಮನವಿ ಸಲ್ಲಿಸಿದ್ದಾರೆ.
ರಾಜ್ಯದ್ಯಂತ ಟೈಲರ್ ವೃತ್ತಿಯಲ್ಲಿ ತೊಡಗಿರುವವರು ಅಸಂಘಟಿತ ವಲಯಕ್ಕೆ ಸೇರಿದ್ದಾರೆ. ಅವರಿಗೆ ಯಾವುದೇ ಸೌಲಭ್ಯಗಳಿಲ್ಲದೇ ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಈ ವೃತ್ತಿಯಲ್ಲಿ ತೊಡಗಿದವರು ಬಹುತೇಕ ಮಹಿಳೆಯರಿದ್ದಾರೆ.
ಅಲ್ಲದೇ ಕಾರ್ಮಿಕರ ಕಾಯ್ದೆ ಅನ್ವಯಿಸದೇ ಇರುವ ಸಣ್ಣ ಗಾರ್ಮೆಂಟ್ ಘಟಕಗಳಲ್ಲಿ ಟೈಲರಿಂಗ್ ವೃತ್ತಿ ಮಾಡುತ್ತಿದ್ದಾರೆ. ಈ ಸಂಖ್ಯೆ ರಾಜ್ಯದಲ್ಲಿ ಸುಮಾರು 20 ಲಕ್ಷದಷ್ಟಿದ್ದರೂ ಕೂಡ ಅವರಿಗೆ ಯಾವುದೇ ಸೌಲಭ್ಯ ದೊರಕದೇ ವಂಚಿತರಾಗುತ್ತಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದರು.
ಟೈಲರ್ಗಳ ಆರೋಗ್ಯ ಸುಧಾರಣೆಗೆ ಧನ ಸಹಾಯ, ಮದುವೆಗೆ ಆರ್ಥಿಕ ಸೌಲಭ್ಯ, ಮಕ್ಕಳ ವಿದ್ಯಾಭ್ಯಾಸಕ್ಕೆ ನೆರವು, ಪಿಂಚಣಿ ವ್ಯವಸ್ಥೆ ಸೇರಿದಂತೆ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಸರ್ಕಾರ ಕಲ್ಯಾಣ ಮಂಡಳಿ ಜಾರಿಗೆ ತರಬೇಕು ಎಂದು ಆಗ್ರಹಿಸಿದರು.
ಟೈಲರ್ ವೃತ್ತಿಯಲ್ಲಿ ತೊಡಗಿರುವವರು ಪ್ರೌಢ, ಪದವಿ ಶಿಕ್ಷಣ ಪಡೆದವರು ಸಹ ಇದ್ದಾರೆ. ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಟೈಲರಿಂಗ್ ತರಬೇತಿ ಪಡೆದು ವೃತ್ತಿಯಲ್ಲಿ ತೊಡಗಿದ್ದಾರೆ. ಇನ್ನು ಕೆಲವರು ಸಣ್ಣಪುಟ್ಟ ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಅವರ ನೆರವಿಗಾಗಿ ಕೂಡಲೇ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಮಾದರಿಯಲ್ಲಿ ಟೈಲರ್ ಕಲ್ಯಾಣ ಮಂಡಳಿ ರಚಿಸಿ, ಟೈಲರ್ಗಳಿಗೆ ಸಾಮಾಜಿಕ ನ್ಯಾಯ ಒದಗಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.
ಫೆಡರೇಷನ್‌ನ ರಾಜ್ಯ ಖಜಾಂಚಿ ಆನಂದರಾಜ್, ಆವರಗೆರೆ ವಾಸು, ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಉಪಾಧ್ಯಕ್ಷ ಸಿ. ರಮೇಶ್, ಬೊಮ್ಮಕ್ಕ, ಸರೋಜಾ, ಶಾಂತಕುಮಾರ್, ಮಂಜುಳಾ, ರೇಖಾ, ಗೌರಮ್ಮ, ಇತರರು
ಧರಣಿಯಲ್ಲಿ ಭಾಗವಹಿಸಿದ್ದರು.