ಕಲಬುರಗಿ: ಪ್ರವಾಸೋದ್ಯಮ ಇಲಾಖೆಯಿಂದ 2015-16 ಹಾಗೂ 2016-17ನೇ ಸಾಲಿನಲ್ಲಿ ಪ್ರವಾಸಿ ಟ್ಯಾಕ್ಸಿ ಯೋಜನೆಗಾಗಿ ಆಯ್ಕೆಯಾದ 113 ಫಲಾನುಭವಿಗಳಿಗೆ ಬ್ಯಾಂಕ್ ಸಾಲ ದೊರೆತು ಪ್ರವಾಸಿ ಟ್ಯಾಕ್ಸಿ ಖರೀದಿಸುವಂತೆ ಅಧಿಕಾರಿಗಳು ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಆರ್. ವೆಂಕಟೇಶಕುಮಾರ ಹೇಳಿದರು. ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರವಾಸೋದ್ಯಮ ಅಧಿಕಾರಿಗಳು ಪ್ರವಾಸಿ ಟ್ಯಾಕ್ಸಿಗಾಗಿ ಸಾಲ ನೀಡಲಿರುವ ಬ್ಯಾಂಕುಗಳಿಗೆ ಖುದ್ದಾಗಿ ಭೇಟಿ ನೀಡಿ ಎಲ್ಲ ಫಲಾನುಭವಿಗಳಿಗೆ ಮಂಜೂರು ಮಾಡಿಸಬೇಕು. ಯೋಜನೆಗೆ ಲಭ್ಯವಿರುವ ಸಹಾಯಧನದ ಮೊತ್ತ ಬಿಡುಗಡೆ ಮಾಡುವಂತೆ ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆಯಿಂದ ಅನುಮೋದನೆಗೊಂಡ 2014-15 ರಿಂದ 2016-17ರವರೆಗಿನ 11 ಕಾಮಗಾರಿಗಳು ನಿವೇಶನ ಲಭ್ಯವಿಲ್ಲದ ಕಾರಣ ಪ್ರಾರಂಭವಾಗಿಲ್ಲ. ಭಾರತೀಯ ಪುರಾತತ್ವ ಇಲಾಖೆ, ಅರಣ್ಯ ಇಲಾಖೆ ಹಾಗೂ ಕಾಮಗಾರಿ ಮಂಜೂರಾಗಿರುವ ದೇವಸ್ಥಾನಗಳ ಪ್ರಮುಖರಿಗೆ ಹಾಗೂ ತಹಶೀಲ್ದಾರರಿಗೆ ಪತ್ರ ಬರೆದು 15 ದಿನದೊಳಗಾಗಿ ನಿವೇಶನ ಒದಗಿಸಲು ಕೋರಬೇಕು. ಎಲ್ಲಿಯೂ ನಿವೇಶನ ದೊರೆಯದಿದ್ದಲ್ಲಿ ಕಾಮಗಾರಿ ಬೇರಡೆ ಸ್ಥಳಾಂತರಿಸಬೇಕು. ಈಗಾಗಲೇ ಅನುದಾನ ಬಳಸಿಕೊಂಡು ಕಾಮಗಾರಿ ಕೈಗೊಂಡಿರುವ ಸಂಸ್ಥೆಗಳು ಅನುದಾನ ಬಳಕೆ ಪ್ರಮಾಣಪತ್ರ ನೀಡಬೇಕು ಎಂದು ಹೇಳಿದರು.
ಹೈದ್ರಾಬಾದ ಕರ್ನಾಟಕ ಭಾಗದಲ್ಲಿ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಪ್ರವಾಸಿ ತಾಣಗಳಲ್ಲಿ ಹೊಟೇಲ್ ಮತ್ತು ಲಾಡಿಜಿಂಗ್ ನಿರ್ಮಿಸುತ್ತಿರುವವರಿಗೆ ಗರಿಷ್ಠ 3 ಕೋಟಿ ರೂ.ಗಳವರೆಗೆ ಬಂಡವಾಳಕ್ಕೆ ಪ್ರವಾಸೋದ್ಯಮ ಇಲಾಖೆಯಿಂದ ಶೇ. 40ರಷ್ಟು ಸಹಾಯಧನ ನೀಡಲಾಗುತ್ತಿದೆ. ಮಹಿಳೆಯರು ಇಂತಹ ಉದ್ಯಮದಲ್ಲಿದ್ದರೆ ಅವರಿಗೆ ಶೇ. 45ರಷ್ಟು ಸಹಾಯಧನ ನೀಡಲಾಗುತ್ತಿದೆ.
2017-18ನೇ ಸಾಲಿನಲ್ಲಿ ಜಿಲ್ಲೆಯಲ್ಲಿ 6 ಹೊಟೇಲ್ ಉದ್ಯಮಕ್ಕೆ ಪರವಾನಿಗೆ ನೀಡಲಾಗಿದ್ದು, ಇನ್ನೂ 4 ಅರ್ಜಿಗಳು ಬಾಕಿ ಇವೆ. ಇವುಗಳನ್ನು ಪರಿಶೀಲಿಸಿ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಫಿಕ್ ಲಾಡಜೀ, ಪ್ರವಾಸಿ ಅಧಿಕಾರಿ ಪ್ರಭುಲಿಂಗ ಎಸ್. ತಳಕೇರಿ, ಜಿಲ್ಲಾ ಸಮಾಲೋಚಕ ಸಂದೀಪಸಿಂಗ ಠಾಕೂರ ಮತ್ತಿತರ ಜಿಲ್ಲಾ ಮಟ್ಟದ ಅಧಿಕಾರಿಗಳು ಪಾಲ್ಗೊಂಡಿದ್ದರು.