ವಿಶೇಷ ವರದಿ– ಮಹಾನಗರ: ಕೋವಿಡ್ 19 ಆತಂಕದ ಸಮಯದಲ್ಲಿ ತುರ್ತು ಸೇವೆಗೆಂದು ಜಿಲ್ಲಾಡಳಿತವು ದ.ಕ. ಜಿಲ್ಲೆಯ ಸುಮಾರು 300 ರಷ್ಟು ಟ್ಯಾಕ್ಸಿ ಕ್ಯಾಬ್ ಬಳಕೆ ಮಾಡಿದ್ದು, ಚಾಲಕರಿಗೆ ಇನ್ನೂ ಹಣ ಸಂದಾಯವಾಗಿಲ್ಲ. ಇದರಿಂದಾಗಿ ಟ್ಯಾಕ್ಸಿ ಚಾಲಕರು ಸಂಕಷ್ಟ ಅನುಭವಿಸುತ್ತಿದ್ದಾರೆ.
ಕೋವಿಡ್ 19 ಸಮಯದಲ್ಲಿ ದ.ಕ. ಜಿಲ್ಲೆಗೆ ಜಿಲ್ಲಾಡಳಿತ ಅಧಿಕಾರಿಗಳಿಗೆ, ಪಾಲಿಕೆ ಅಧಿಕಾರಿಗಳಿಗೆ, ಆಶಾ ಕಾರ್ಯಕರ್ತೆಯರಿಗೆ ಕಚೇರಿ ಕಾರ್ಯದ ನಿಮಿತ್ತ, ಕ್ವಾರಂಟೈನ್ ಸೇರಿಸಂತೆ ಕೋವಿಡ್ 19 ಬಗ್ಗೆ ನಿಗಾ ವಹಿಸುವ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಸುತ್ತಾಡಲು ಸುಮಾರು 300 ಟ್ಯಾಕ್ಸಿ ಬಳಸಲಾಗಿತ್ತು. ಚಾಲಕರು ದಿನದ 24 ಗಂಟೆ ಎರಡು ಪಾಳಿಯಲ್ಲಿ ಕರ್ತವ್ಯ ನಿರ್ವಹಿಸಿದ್ದರು. ಇನ್ನೂ ಸುಮಾರು 70 ಟ್ಯಾಕ್ಸಿಗಳನ್ನು ಜಿಲ್ಲಾಡಳಿತ ಬಳಕೆ ಮಾಡುತ್ತಿದೆ.
ಟ್ಯಾಕ್ಸಿಯನ್ನು ಆರ್‌ಟಿಒಗೆ ನೀಡುವ ಈ ಬಾರಿ ತುರ್ತಾಗಿ ಹಣ ಸಂದಾಯ ಮಾಡಬೇಕು ಎಂದು ದ.ಕ. ಜಿಲ್ಲಾ ಟ್ಯಾಕ್ಸಿಮೆನ್ಸ್ ಆ್ಯಂಡ್ ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ವತಿಯಿಂದ ಜಿಲ್ಲಾ ಡಳಿತಕ್ಕೆ ಮನವಿ ಮಾಡಲಾಗಿತ್ತು. ಇದೀಗ ಮತ್ತೂಮ್ಮೆ ಸಂಬಂಧಪಟ್ಟ ಇಲಾಖೆ ಗಮನಕ್ಕೆ ತಂದರೂ, ಜಿಲ್ಲಾಡಳಿತ ಇನ್ನೂ ಹಣ ಬಿಡುಗಡೆ ಮಾಡಲಿಲ್ಲ, ಕೋವಿಡ್ 19 ದಿಂದಾಗಿ ಸಂಕಷ್ಟದಲ್ಲಿರುವ ಟಾಕ್ಸಿ ಚಾಲಕರು ಮತ್ತಷ್ಟು ನೋವು ಅನುಭವಿಸುವಂತಾಗಿದೆ.
ಕೋವಿಡ್ 19 ಭೀತಿ ಮತ್ತು ಹವಾಮಾನ ವೈಪರೀತ್ಯದ ಪರಿಣಾಮ ಈ ವರ್ಷದ ಆರಂಭದಿಂದಲೇ ಟ್ಯಾಕ್ಸಿ ಮಾಲಕರು ನಷ್ಟ ಅನುಭವಿಸುತ್ತಿದ್ದರು. ಕರಾವಳಿ ಭಾಗದಲ್ಲಿ ಮಾರ್ಚ್-ಮೇ ವರೆಗೆ ಪ್ರವಾಸೋದ್ಯಮ ಸೀಸನ್ ಆಗಿದ್ದು, ಆ ದಿನಗಳಲ್ಲಿ ಒಂದು ಕಾರಿನಿಂದ ತಿಂಗಳಿಗೆ 20 ಟ್ರಿಪ್ ಆಗುತ್ತಿತ್ತು. ಇದು 10 ಟ್ರಿಪ್‌ಗೆ ಇಳಿಕೆಯಾಗಿತ್ತು. ದಕ್ಷಿಣ ಕನ್ನಕ್ಕೆ ಆಗಮಿಸುವ ವಿದೇಶಿ, ಅನ್ಯ ರಾಜ್ಯಗಳ ಪ್ರವಾಸಿಗರು ಮಡಿಕೇರಿ, ಮೈಸೂರು, ಮಂಗಳೂರು ಸೇರಿದಂತೆ ವಿವಿಧ ಪ್ರವಾಸಿ ತಾಣಗಳಿಗೆ ತೆರಳುತ್ತಾರೆ. ಆದರೆ, ಪ್ರವಾಸಿಗರ ಸಂಖ್ಯೆ ಕೂಡ ಕಡಿಮೆಯಾಗಿ ನಷ್ಟ ಅನುಭವಿಸಿದ್ದರು. ಇದೀಗ ಅವರಿಗೆ ಸಿಗುವಂತಹ ಹಣ ಸಂದಾಯವಾಗದಿರುವುದು ಚಾಲಕರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದೆ.
ಈ ಹಿಂದೆ ಲೋಕಸಭಾ ಚುನಾವಣೆ ಮತ್ತು ಪಾಲಿಕೆ ಚುನಾವಣೆ ವೇಳೆ ಮ್ಯಾಕ್ಸಿಕ್ಯಾಬ್, ಕಾರು, ಟೆಂಪೋ ಟ್ರಾವೆಲರ್ ಸಹಿತ ಸುಮಾರು 360 ವಾಹನಗಳನ್ನು ಚುನಾವಣಾ ಕಾರ್ಯಗಳಿಗೆ ಬಳಸಿಕೊಳ್ಳಲಾಗಿತ್ತು. ಬಳಸಿಕೊಂಡ ವಾಹನಗಳ ಮಾಲಕರಿಗೆ ಶೇ.25ರಷ್ಟು ಹಣ ನೀಡಲು ಬಾಕಿ ಇದೆ. ಪುತ್ತೂರು ತಾಲೂಕಿನ ಕೆಲವೊಂದು ಟ್ಯಾಕ್ಸಿ ಚಾಲಕರಿಗೆ ಮಾತ್ರ ಸ್ವಲ್ಪ ಪ್ರಮಾಣದ ಹಣ ಸಂದಾಯ ಬಾಕಿ ಇದೆ ಎನ್ನುತ್ತಾರೆ ಅಸೋಸಿಯೇಶನ್‌ನ ಪ್ರಮುಖರು.
ಹಣ ಬಿಡುಗಡೆ ಮಾಡಿ
ಲಾಕ್‌ಡೌನ್ ವೇಳೆ ಅಸೋಸಿ ಯೇಶನ್ ವತಿಯಿಂದ ಸುಮಾರು 300ರಷ್ಟು ಟ್ಯಾಕ್ಸಿಗಳನ್ನು ಜಿಲ್ಲಾಡಳಿತಕ್ಕೆ ನೀಡಿದ್ದೇವೆ. ಚಾಲಕರಿಗೆ ಇನ್ನೂ ಹಣ ಸಂದಾಯವಾಗಿಲ್ಲ. ಲಾಕ್‌ಡೌನ್ ಸಡಿಲಗೊಂಡರೂ, ಟ್ಯಾಕ್ಸಿ ಚಾಲಕರಿಗೆ ಬಾಡಿಗೆ ಸಿಗದೆ ಸಂಕಷ್ಟದಲ್ಲಿದ್ದಾರೆ. ಜಿಲ್ಲಾಡಳಿತ ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು.
– ದಿನೇಶ್ ಕುಂಪಲ, ದ.ಕ.ಜಿಲ್ಲಾ ಟ್ಯಾಕ್ಸಿಮೆನ್ಸ್ ಆ್ಯಂಡ್
ಮ್ಯಾಕ್ಸಿಕ್ಯಾಬ್ ಅಸೋಸಿಯೇಶನ್ ಅಧ್ಯಕ್ಷ
ಡಿಸಿ ಗಮನಕ್ಕೆ ತರುತ್ತೇನೆ
ಲಾಕ್‌ಡೌನ್ ಸಮಯದಲ್ಲಿ ತುರ್ತು ಸೇವೆಗೆಂದು ಜಿಲ್ಲಾಡಳಿತವು ಟ್ಯಾಕ್ಸಿ ಬಳಕೆ ಮಾಡಿತ್ತು. ಚಾಲಕರಿಗೆ ಹಣ ನೀಡುವ ಕುರಿತಂತೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರುತ್ತೇನೆ.
– ಆರ್.ಎಂ. ವರ್ಣೇಕರ್, ಮಂಗಳೂರು ಆರ್‌ಟಿಒ