Advertisement
ಪ್ರಸ್ತುತ ಚಾಟ್‌ಬಾಟ್ ಮತ್ತು “ನಮ್ಮ ಮೆಟ್ರೋ ಆ್ಯಪ್’ನಲ್ಲಿ ಟಿಕೆಟ್ ಬುಕಿಂಗ್ ಮಾಡುವ ಸೌಲಭ್ಯ ಕಲ್ಪಿಸಲಾಗಿದೆ. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಇದೇ ವೇದಿಕೆಗಳಲ್ಲಿ ಪ್ರಯಾಣಿಕರು ತಾವು ನಿರ್ಗಮಿಸುವ ನಿಲ್ದಾಣದಿಂದ ಕಚೇರಿ ಅಥವಾ ಮನೆಗಳಿಗೆ ಟ್ಯಾಕ್ಸಿ ಅಥವಾ ಆಟೋಗಳನ್ನೂ ಬುಕಿಂಗ್ ಮಾಡಿ ಈ ಸಂಬಂಧದ ಟಿಕೆಟ್ ಕಾಯ್ದಿರಿಸಬಹುದು. ಇದರೊಂದಿಗೆ ಲಾಸ್ಟ್‌ಮೈಲ್ ಕನೆಕ್ಟಿವಿಟಿಗೆ ಇರುವ ಅಡತಡೆಗಳ ನಿವಾರಣೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್) ಮುಂದಾಗಿದೆ.
Related Articles
Advertisement
ಪ್ರತಿ ದಿನ 10 ಸಾವಿರ ವಾಟ್ಸ್ ಆ್ಯಪ್ ಟಿಕೆಟ್! : ಕರ್ನಾಟ ಕ ರಾಜ್ಯೋತ್ಸವದಂದು ಅಂದರೆ ನ.1ರಂದು ಪರಿಚಯಿಸಲಾದ ಚಾಟ್‌ಬಾಟ್ ಮೂಲಕ ನಿತ್ಯ ಸರಾಸರಿ 10 ಸಾವಿರ ಜನ ಟಿಕೆಟ್ ಖರೀದಿ ಮಾಡುತ್ತಿದ್ದಾರೆ. ಕೇವಲ 20 ದಿನಗಳಲ್ಲಿ ಅತ್ಯುತ್ತಮ ಪ್ರತಿಕ್ರಿಯೆ ದೊರಕಿದ್ದು, ಹತ್ತು ಸಾವಿರಕ್ಕೂ ಅಧಿಕ ಜನ “ನಮ್ಮ ಮೆಟ್ರೋ’ದ ವಾಟ್ಸ್‌ಆ್ಯಪ್ ವೇದಿಕೆಯಲ್ಲಿ ಟಿಕೆಟ್ ಪಡೆಯುತ್ತಿದ್ದಾರೆ. ಇದ ರಿಂದ ಪ್ರಯಾಣಿಕರಿಗೆ ಕಾಯುವಿಕೆ ತಪ್ಪಿದೆ. ಜತೆಗೆ ಸ್ಮಾರ್ಟ್‌ಕಾರ್ಡ್ ಮಾದರಿಯಲ್ಲೇ ರಿಯಾಯ್ತಿಯೂ ದೊರೆಯುತ್ತಿದೆ. ಇದರ ಯಶಸ್ಸು ಮನಗಂಡು ಅದೇ ವೇದಿಕೆಯಲ್ಲಿ ಟ್ಯಾಕ್ಸಿ ಅಥವಾ ಆಟೋ ಟಿಕೆಟ್ ಪರಿಚಯಿಸುವ ಪ್ರಯತ್ನ ನಡೆದಿದೆ ಎನ್ನಲಾಗಿದೆ.
ಬಿಎಂಟಿಸಿಯೊಂದಿಗೆ ಕೈಜೋಡಿಸಲಿ: ಸಲಹೆ : ಖಾಸಗಿ ಅಗ್ರಿಗೇಟರ್ ಕಂಪನಿಗಳಿಗಿಂತ ಸರ್ಕಾರಿ ಸಂಸ್ಥೆಯೇ ಆಗಿರುವ ಬಿಎಂಟಿಸಿಯಿಂದ ಈ ಸೇವೆ ಪರಿಚಯಿಸಲು ಅವಕಾಶ ಇದೆ. ಈ ನಿಟ್ಟಿನಲ್ಲಿ ಬಿಎಂಟಿಸಿ ಮತ್ತು ಬಿಎಂಆರ್‌ಸಿಗಳು ಮುಂದಾಗಬೇಕು ಎಂಬ ಒತ್ತಾಯ ಸಾರಿಗೆ ತಜ್ಞರಿಂದ ಕೇಳಿಬರುತ್ತಿದೆ. ಈ ಪ್ರಯೋಗದಿಂದ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡುವುದರ ಜತೆಗೆ ಬಿಎಂಟಿಸಿಗೂ ಆದಾಯ ಬರಲಿದೆ ಎಂದು ತಜ್ಞರು ಸಲಹೆ ಮಾಡಿದ್ದಾರೆ.
ಮೆಟ್ರೋ ಆ್ಯಪ್ ಜತೆ ಅಗ್ರಿಗ್ರೇಟರ್ ಆ್ಯಪ್: ಈ ಸೇವೆಗಾಗಿ ನಮ್ಮ ಮೆಟ್ರೋ ಆ್ಯಪ್ ಜತೆ ಅಗ್ರಿಗ್ರೇಟರ್ ಕಂಪನಿ ಆ್ಯಪ್ ಇಂಟಿಗ್ರೇಟ್ ಮಾಡಬೇಕಾಗುತ್ತದೆ. ಇದಕ್ಕಾಗಿ ಸಿಟಿಲಿಟಿ ಮತ್ತು ಮೊಬಿಲಿಟಿ ಆ್ಯಸ್ ಎ ಸಲ್ಯುಷನ್ ಎಂಬ ಏಜೆನ್ಸಿಗಳು ಕೆಲಸ ಮಾಡುತ್ತಿವೆ. ಇದರಲ್ಲಿ ಉತ್ತಮವಾದುದನ್ನು ಆಯ್ಕೆ ಮಾಡಲಾಗುತ್ತದೆ. ನಂತರದಲ್ಲಿ ಮೆಟ್ರೋ ರೈಡ್ ನಂತಹ ಸಣ್ಣ ಅಗ್ರಿಗ್ರೇಟರ್‌ಗಳನ್ನು ಪ್ರಾಯೋಗಿಕವಾಗಿ ಪರಿಚಯಿಸಲಾಗುವುದು ಎಂದು ಬಿಎಂಆರ್ ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್ ‘ಉದಯವಾಣಿ’ಗೆ ತಿಳಿಸಿದರು.
– ವಿಜಯಕುಮಾರ ಚಂದರಗಿ