ಚಿಕ್ಕಬಳ್ಳಾಪುರ: ಲಾಕ್‌ಡೌನ್ ಸಂಕಷ್ಟದಲ್ಲಿ ಸಿಲುಕಿರುವ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾ ಚಾಲಕರಿಗೆ ರಾಜ್ಯ ಸರ್ಕಾರ ಕೋವಿಡ್-19 ಪರಿಹಾರವಾಗಿ ತಲಾ 5,000 ರೂ. ಘೋಷಣೆ ಮಾಡಿದ್ದು, ಜಿಲ್ಲೆಯಲ್ಲಿ ಬರೋಬ್ಬರಿ 7,955 ಮಂದಿ ಫಲಾನುಭವಿಗಳು ಸರ್ಕಾರದ ನೆರವಿಗೆ ಎದುರು ನೋಡುತ್ತಿದ್ದಾರೆ. ಒಪ್ಪೊತ್ತಿನ ಊಟಕ್ಕೆ ದುಡಿದು ತಿನ್ನುವ ಟ್ಯಾಕ್ಸಿ ಹಾಗೂ ಆಟೋ ರಿಕ್ಷಾ ಚಾಲಕರ ಸಂಕಷ್ಟವನ್ನು ಸರ್ಕಾರ ಅರಿತು ತಲಾ 5 ಸಾವಿರ ರೂ. ಪರಿಹಾರ ಘೋಷಿಸಿದೆ. ಅದರಂತೆ ಜಿಲ್ಲೆಯಲ್ಲಿ 2,588 ಮಂದಿ ಟ್ಯಾಕ್ಸಿ ಹಾಗೂ 5,367 ಮಂದಿ ಆಟೋ ರಿಕ್ಷಾ ಚಾಲಕರು ಸಾರಿಗೆ ಇಲಾಖೆಯಲ್ಲಿ ಪರವಾನಿಗೆ ಪಡೆದುಕೊಂಡಿದ್ದಾರೆ.
ಚಾಲನೆಗೊಳ್ಳದ ಸೇವಾ ಸಿಂಧು: ಸರ್ಕಾರವೇನು ಪರಿಹಾರ ಘೋಷಿಸಿ ಅರ್ಜಿಗಳನ್ನು ಸೇವಾ ಸಿಂಧು ಆ್ಯಪ್ ಮೂಲಕ ಸಲ್ಲಿಸಬೇಕೆಂದು ಸೂಚಿಸಿದೆ. ಆದರೆ ಇದುವರೆಗೂ ಆ್ಯಪ್ ಚಾಲನೆಗೊಂಡಿಲ್ಲ. ಜೊತೆಗೆ ಕಾರ್ಮಿಕ ಮುಖಂಡರು ಆರೋಪಿಸುವಂತೆ ಅರ್ಜಿ ಸಲ್ಲಿಕೆಗೆ ಮಾನದಂಡಗಳೇನು, ಅರ್ಜಿ ಜೊತೆಗೆ ಏನೆಲ್ಲಾ ದಾಖಲೆ ಒದಗಿಸಬೇಕೆಂಬುದರ ಬಗ್ಗೆ ಸ್ಪಷ್ಟ ಮಾಹಿತಿ ತಿಳಿಸಿಲ್ಲ ಎಂದು ಆಟೋ ಚಾಲಕರ ಸಂಘದ ಗೌರವಾಧ್ಯಕ್ಷ ಚಿಂತಾಮಣಿಯ ಎಂ. ಆರ್.ಲೋಕೇಶ್ ತಿಳಿಸಿದರು. ಜಿಲ್ಲೆಯ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಗೊಂದಲದಲ್ಲಿ ಮುಳುಗುವಂತೆ ಮಾಡಿದ್ದು, ಸರ್ಕಾರ ಘೋಷಿಸಿರುವ ಪರಿಣಾಮ ಲಾಕ್‌ಡೌನ್ ಸಂಕಷ್ಟದಲ್ಲಿರುವಾ ಕೈಗೆ ಸಿಗದೇ ಯಾವಾಗ ಕೈ ಸೇರುತ್ತದೆಯೆಂದು ಜಿಲ್ಲೆಯ ಆಟೋ ಹಾಗೂ ಟ್ಯಾಕ್ಸಿ ಚಾಲಕರು ಸರ್ಕಾರದ ನೆರವಿನ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ.
ಸೇವಾ ಸಿಂಧು ಆ್ಯಪ್ ಬಗ್ಗೆ ಅರಿವು ಮೂಡಿಸಿಲ್ಲ: ಜಿಲ್ಲೆಯಲ್ಲಿ ಇದುವರೆಗೂ ಸರ್ಕಾರದ ನೆರವು ಪಡೆಯಲು ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸ್ವೀಕರಿಸುವ ಬಗ್ಗೆ ಸಾರಿಗೆ ಇಲಾಖೆಯಾಗಲಿ ಅಥವಾ ಕಾರ್ಮಿಕ ಇಲಾಖೆಯಾಗಲಿ ಆಟೋ, ಟ್ಯಾಕ್ಸಿ ಚಾಲಕರಲ್ಲಿ ಸೂಕ್ತ ಅರಿವು ಮೂಡಿಸುವಲ್ಲಿ ವಿಫಲವಾಗಿದೆ. ಹೀಗಾಗಿ ಸರ್ಕಾರದ ಮಹತ್ವಕಾಂಕ್ಷಿ ಕೋವಿಡ್-19 ಪರಿಹಾರ ಬಗ್ಗೆ ಚಾಲಕರಲ್ಲಿ ಗೊಂದಲದಲ್ಲಿ ಇದ್ದಾರೆ. ಮತ್ತೆ ಕೆಲವು ತಾಲೂಕುಗಳಲ್ಲಿ ಏನು ಅರಿಯದ ಆಟೋ ಚಾಲಕರಿಗೆ ಪರಿಹಾರ ದೊರಕಿಸಿ ಕೊಡುವುದಾಗಿ ಕೆಲ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಸರ್ಕಾರದ ಪರಿಹಾರ ಲಾಕ್‌ಡೌನ್ ಒಳಗೆ ಬರುತ್ತಾ ಮುಗಿದ ಬಳಿಕ ಬರುತ್ತಾ ಎಂಬುದು ಕಾದು ನೋಡಬೇಕಿದೆ.
ಜಿಲ್ಲೆಯಲ್ಲಿ ಒಟ್ಟು 2,588 ಟ್ಯಾಕ್ಸಿಗಳು 5,367 ಮಂದಿ ಆಟೋ ಚಾಲಕರು ಇದ್ದಾರೆ. ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಿದರೆ ಸರ್ಕಾರವೇ ಅವರ ಬ್ಯಾಂಕ್ ಖಾತೆಗೆ 5,000 ರೂ. ಪರಿಹಾರ ಧನ ನೀಡಲಿದೆ.
-ಕಮಲ್‌ಬಾಬು, ಆರ್‌ಟಿಒ
ಆಟೋ, ಟ್ಯಾಕ್ಸಿ ಚಾಲಕರಿಗೆ ಸರ್ಕಾರ 5 ಸಾವಿರ ಪರಿಹಾರ ಘೋಷಿಸಿದೆ. ಸೇವಾ ಸಿಂಧು ಆ್ಯಪ್ ಮೂಲಕ ಅರ್ಜಿ ಸಲ್ಲಿಸಬೇಕು. ಅದನ್ನು ಸಾರಿಗೆ ಇಲಾಖೆಯವರೆ ನೋಡಿಕೊಳ್ಳುತ್ತಾರೆ. ಸರ್ಕಾರದಿಂದ ಇನ್ನೂ ಮಾರ್ಗಸೂಚಿ ಬಂದಿಲ್ಲ.
-ವರಲಕ್ಷ್ಮೀ , ಜಿಲ್ಲಾ ಕಾರ್ಮಿಕ ಅಧಿಕಾರಿ