Advertisement

ಅಮೆರಿಕ ಜತೆ ತೆರಿಗೆ ಯುದ್ಧ: ಶೇ.50 ಸುಂಕ ವಿಧಿಸಿದ ಮೋದಿ ಸರ್ಕಾರ

06:00 AM Jun 17, 2018 | |

ನವದೆಹಲಿ: ಈ ವರ್ಷದ ಮಾರ್ಚ್‌ನಲ್ಲಿ ಅಮೆರಿಕ ಭಾರತದ ಉಕ್ಕಿನ ಉತ್ಪನ್ನಗಳಿಗೆ ಶೇ. 25 ಮತ್ತು ಅಲ್ಯುಮಿನಿಯಂ ಉತ್ಪನ್ನಗಳಿಗೆ ಶೇ.10ರಷ್ಟು ಸುಂಕ ವಿಧಿಸಿತ್ತು. ಈ ಬಗ್ಗೆ ಕೇಂದ್ರ ಸರ್ಕಾರ ಪ್ರಬಲ ಆಕ್ಷೇಪ ಸಲ್ಲಿಸಿದ್ದರೂ, ಡೊನಾಲ್ಡ್‌ ಟ್ರಂಪ್‌ ಸರ್ಕಾರ ಕಿವಿಗೇ ಹಾಕಿಕೊಂಡಿರಲಿಲ್ಲ. ಅದಕ್ಕೆ ಸರಿಯಾಗಿ ತಿರುಗೇಟು ನೀಡಲು ಮುಂದಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಅಮೆರಿಕದ ಮೂವತ್ತು ಉತ್ಪನ್ನಗಳಿಗೆ ಶೇ.50ರಷ್ಟು ಕಸ್ಟಮ್ಸ್‌ ಸುಂಕ  ವಿಧಿಸಿದೆ.  ಈ ಬಗ್ಗೆ ಜೂ.14ರಂದು ಕೇಂದ್ರ ಸರ್ಕಾರ ವಿಧ್ಯುಕ್ತವಾಗಿ ವಿಶ್ವ ವಾಣಿಜ್ಯ ಸಂಘಟನೆ (ಡಬ್ಲೂಟಿಒ)ಗೆ ಪ್ರಸ್ತಾವನೆ ಸಲ್ಲಿಸಿದೆ. ಈ ಮೂಲಕ ವಿಶ್ವದ ದೊಡ್ಡಣನ ಜತೆಗೆ ಭಾರತ ತೆರಿಗೆ ಯುದ್ಧಕ್ಕೆ ಮುಂದಾಗಿದೆ.

Advertisement

ಇದರಿಂದಾಗಿ ಆ್ಯಪಲ್‌ ಕಂಪನಿಯ ಉತ್ಪನ್ನಗಳು, ಹರ್ಲೆ ಡೇವಿಡ್‌ಸನ್‌ ಬೈಕ್‌ಗಳು, ಅಮರಿಕದಿಂದ ಭಾರತಕ್ಕೆ ಬರಲಿರುವ ಬಾದಾಮಿ, ವಾಲ್‌ನಟ್‌ (ಆಕ್ರೋಡು), ಆ್ಯಪಲ್‌ಗ‌ಳು ಸೇರಿದಂತೆ ಒಟ್ಟು ಮೂವತ್ತು ಮಾದರಿಯ ಉತ್ಪನ್ನಗಳಿಗೆ ತೆರಿಗೆ ವಿಧಿಸಲು ಮುಂದಾಗಿದೆ. ಈ ಬಗ್ಗೆ ಡಬ್ಲೂéಟಿಒಗೆ ಸಲ್ಲಿಸಲಾಗಿರುವ ಪ್ರಸ್ತಾವನೆಯಲ್ಲಿ ಕೇಂದ್ರ ಸರ್ಕಾರ ತನ್ನ ನಿರ್ಧಾರವನ್ನು ಬಲವಾಗಿಯೇ ಸಮರ್ಥಿಸಿಕೊಂಡಿದೆ. 

“ಅಮೆರಿಕ ಸರ್ಕಾರ ತನ್ನ ಉದ್ದಿಮೆಗಳ ರಕ್ಷಣೆಗಾಗಿ ಹೆಚ್ಚುವರಿ ತೆರಿಗೆ ವಿಧಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಭಾರತ ಸರ್ಕಾರ ಕೂಡ ದೇಶೀಯವಾಗಿ  ಉತ್ಪಾದನೆಯಾಗುವ ವಸ್ತುಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಂಡಿದೆ’ ಎಂದು ಹೇಳಿದೆ. ಭಾರತದ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳಿಗೆ ಸುಂಕ ವಿಧಿಸುವ ಮೂಲಕ  ಅಮೆರಿಕ ಸರ್ಕಾರ 241 ಮಿಲಿಯನ್‌ ಡಾಲರ್‌  (1,566 ಕೋಟಿ ರೂ.) ಮೊತ್ತ ಸಂಗ್ರಹಿಸುತ್ತದೆ. ಅದೇ ಮಾದರಿಯಲ್ಲಿ ನಾವು ಅಮೆರಿಕದಿಂದ ಆಮದು ಮಾಡಿಕೊಳ್ಳುವ 30 ವಸ್ತುಗಳಿಗೆ ನೀಡಲಾಗುವ ವಸ್ತುಗಳಿಗೆ ನೀಡಲಾಗಿರುವ ರಿಯಾಯಿತಿ ಹಿಂಪಡೆಯಲು ಮುಂದಾಗಿದ್ದೇವೆ’ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ಕೇಂದ್ರ ಸರ್ಕಾರ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಸುಂಕ ವಿಧಿಸಿದ ಅಮೆರಿಕ ಸರ್ಕಾರದ ಕ್ರಮಕ್ಕೆ ಮುಯ್ಯಿಗೆ ಮುಯ್ಯಿ ತೀರಿಸಿದೆ. ಅಲ್ಲದೆ ರಾಜತಾಂತ್ರಿಕ ಮಾರ್ಗದ ಮೂಲಕವೇ ವಿಚಾರವನ್ನು ನಿಭಾಯಿಸುವ ಮೂಲಕ ಮುತ್ಸದ್ದಿತನವನ್ನು ಮೆರೆದಿದೆ.   

ಡಬ್ಲೂಟಿಒ ಒಪ್ಪಂದದ ಅನ್ವಯವೇ ಈ ಕ್ರಮ ಕೈಗೊಂಡಿರುವುದಾಗಿ ಹೇಳಿರುವ ಕೇಂದ್ರ ಸರ್ಕಾರ ಈ ಬಗ್ಗೆ ಈ ವರ್ಷದ ಮೇ 18ರಂದು ಹೊರಡಿಸಲಾದ ನಿಯಮದ ಅನ್ವಯವೇ ಕ್ರಮ ಕೈಗೊಳ್ಳಲಾಗಿದೆ ಎಂದು ಸಮರ್ಥಿಸಿಕೊಂಡಿದೆ. ಭಾರತದ ಮಾರುಕಟ್ಟೆ ಮೇಲೆ 

ಪರಿಣಾಮ: ಅಮೆರಿಕದ ಸರಕುಗಳ ಮೇಲೆ ಶೇ.50ರಷ್ಟು ಕಸ್ಟಮ್ಸ್‌ ಸುಂಕ ವಿಧಿಸುವ ಪ್ರಸ್ತಾಪದಿಂದಾಗಿ ಐ ಫೋನ್‌ಗಳು, ಆ ದೇಶದಿಂದ ಆಮದಾಗುವ ಹಣ್ಣುಗಳು ದುಬಾರಿಯಾಗಲಿವೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾ.9ರಂದು ಭಾರತದ ಉಕ್ಕು ಮತ್ತು ಅಲ್ಯುಮಿನಿಯಂ ಉತ್ಪನ್ನಗಳ ಮೇಲೆ ಕ್ರಮವಾಗಿ ಶೇ.25 ಮತ್ತು ಶೇ.10ರಷ್ಟು ತೆರಿಗೆ ವಿಧಿಸಿದ್ದರು.

Advertisement

ಚೀನಾದಿಂದಲೂ ಸುಂಕ ಘೋಷಣೆ
ಬೀಜಿಂಗ್‌: ಚೀನಾದಲ್ಲಿ ಮಾರಾಟವಾಗುವ ಅಮೆರಿಕದ ಸರಕುಗಳಿಗೆ ಹೆಚ್ಚುವರಿಯಾಗಿ ಶೇ.25ರಷ್ಟು ತೆರಿಗೆ ವಿಧಿಸಲಾಗಿದೆ. ಶುಕ್ರವಾರ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಮಾಡಿದ್ದ ನಿರ್ಧಾರಕ್ಕೆ ಪ್ರತೀಕಾರವಾಗಿ ಚೀನಾ ಸರ್ಕಾರ ಈ ಕ್ರಮ ಕೈಗೊಂಡಿದೆ. ಜು.6ರಿಂದ ಹೊಸ ನಿಯಮ ಅನ್ವಯವಾಗಲಿದೆ. ಚೀನಾದಲ್ಲಿ ಮಾರಾಟವಾಗುವ 50 ಶತಕೋಟಿ ಡಾಲರ್‌ ಮೌಲ್ಯದ 659 ವಿಧಗಳ ವಸ್ತುಗಳು ಮತ್ತು ಸೇವೆಗಳಿಗೆ ಈ ನಿಯಮ ಅನ್ವಯವಾಗಲಿದೆ. ಆರಂಭದಲ್ಲಿ 545 ವಸ್ತುಗಳಿಗೆ ಮತ್ತು ಸೇವೆಗಳಿಗೆ ಶೇ.25ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗುತ್ತದೆ. ಉಳಿದ 114 ವಿಧಗಳ ಸೇವೆಗಳಿಗೆ ಶೀಘ್ರದಲ್ಲಿಯೇ ಸುಂಕದ ಪ್ರಮಾಣ ಘೋಷಿಸಲಾಗುತ್ತದೆ ಎಂದು ಚೀನಾ ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದು ಚೀನಾ ಮತ್ತು ಅಮೆರಿಕದ ವ್ಯಾಪಾರ ಯುದ್ಧಕ್ಕೆ ಇಂಬು ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next