ಬೆಂಗಳೂರು : ತೆರಿಗೆ ಬಾಕಿ ಉಳಿಸಿಕೊಂಡವರಿಗೆ ನೋಟಿಸ್ ನೀಡಿ ಆಸ್ತಿ ತೆರಿಗೆ ಸಂಗ್ರಹಿಸಲು ಸೂಕ್ತ ಕ್ರಮ ವಹಿಸುವಂತೆ ಪಾಲಿಕೆ ಆಯುಕ್ತ ಗೌರವ್ ಗುಪ್ತ ಹಿರಿಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ಸಂಗ್ರಹಿಸುವ ಸಂಬಂಧ ಬುಧವಾರ ಅಧಿಕಾರಿಗಳೊಂದಿಗೆ ವರ್ಚುವಲ್ ಸಭೆ ನಡೆಸಿ,ತಂತ್ರಜ್ಞಾನದ ಸಹಾಯ ಪಡೆದು ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಸೂಕ್ತ ಕ್ರಮ ವಹಿಸುವಂತೆ ತಾಕೀತು ಮಾಡಿದರು.ತೆರಿಗೆ ಹೆಚ್ಚಳದ ಸಂಬಂಧ ಕಂದಾಯ , ಸಹಾಯ ಕಂದಾಯ ಅಧಿಕಾರಿಗಳು ಕಾರ್ಯೋನ್ಮುಖವಾಗಬೇಕು ಎಂದು ಹೇಳಿದರು.
ಪಾಲಿಕೆಗೆ ಹೆಚ್ಚು ಮೊತ್ತ ಬಾಕಿ ಉಳಿಸಿಕೊಂಡಿರುವ ಟಾಪ್ ಪಟ್ಟಿಯ ಅನುಸಾರ ಕಾನೂನು ರೀತಿಯ ಕ್ರಮ ಕೈಗೊಂಡು ತೆರಿಗೆ ವಸೂಲಿ ಮಾಡಬೇಕು. ಆಸ್ತಿ ತೆರಿಗೆ ಸಂಗ್ರಹವನ್ನು ಒಂದು ಗುರಿಯಾಗಿಟ್ಟುಕೊಂಡು ಎಲ್ಲಾ ಅಧಿಕಾರಿಗಳು ಕಾರ್ಯೋನ್ಮುಖರಾಗಬೇಕು ಎಂದು ಸಲಹೆ ನೀಡಿದರು. ಪ್ರಸಕ್ತ ಸಾಲಿನಲ್ಲಿ 4,000 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸುವ ಗುರಿ ಹೊಂದಲಾಗಿದ್ದು, ಇದುವರೆಗೆ 2,667.77 ಕೋಟಿ ರೂ. ಆಸ್ತಿ ತೆರಿಗೆ ಸಂಗ್ರಹಿಸಲಾಗಿದೆ. ಉಳಿದ ತೆರಿಗೆ ಸಂಗ್ರಹಕ್ಕಾಗಿ ಎಲ್ಲಾ ಅಧಿಕಾರಿಗಳು ಶ್ರಮ ವಹಿಸಬೇಕು ಎಂದು ಹೇಳಿದರು.
ಸಭೆಯಲ್ಲಿ ವಿಶೇಷ ಆಯುಕ್ತರು(ಕಂದಾಯ) ಡಾ.ದೀಪಕ್.ಆರ್.ಎಲ್ ಹಾಗೂ ಎಲ್ಲಾ ವಲಯ ಆಯುಕ್ತರುಗಳು, ಎಲ್ಲಾ ವಲಯಗಳ ಜಂಟಿ ಆಯುಕ್ತರುಗಳು, ಕಂದಾಯ ವಿಭಾಗದ ಉಪ ಆಯುಕ್ತರು, ಕಂದಾಯ ವಿಭಾಗದ ಜಂಟಿ ಆಯುಕರು ಸೇರಿದಂತೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ವಲಯವಾರು ಆಸ್ತಿ ತೆರಿಗೆ ಸಂಗ್ರಹದ ವಿವರ ( ಕೋಟಿ ರೂ.ಗಳಲ್ಲಿ )
ಯಲಹಂಕ – 265.98
ಮಹದೇವಪುರ – 683.07
ದಾಸರಹಳ್ಳಿ – 73.78
ಆರ್.ಆರ್.ನಗರ – 182.00
ಬೊಮ್ಮನಹಳ್ಳಿ – 285.04
ಪಶ್ವಿಮ – 272.11
ದಕ್ಷಿಣ – 398.54
ಪೂರ್ವ – 507.26
ಒಟ್ಟು : 2667.77 ಕೋಟಿ ರೂ.