Advertisement

3.15 ಲಕ್ಷ ವ್ಯಾಪಾರಸ್ಥರಿಂದ ಅ.20ರೊಳಗೆ ತೆರಿಗೆ ಪಾವತಿ

07:20 AM Oct 24, 2017 | Team Udayavani |

ಬೆಂಗಳೂರು: ಹೊಸ ಜಿಎಸ್‌ಟಿ ವ್ಯವಸ್ಥೆಯಡಿ ಸೆಪ್ಟೆಂಬರ್‌ ತಿಂಗಳ ವಹಿವಾಟಿಗೆ ಸಂಬಂಧಪಟ್ಟಂತೆ ರಾಜ್ಯದಲ್ಲಿ 3.15 ಲಕ್ಷ ವ್ಯಾಪಾರ- ವ್ಯವಹಾರಸ್ಥರು ಅ.20ರೊಳಗೆ ತೆರಿಗೆ ಪಾವತಿಸಿದ್ದಾರೆ. ಆದರೆ ಜುಲೈ ತಿಂಗಳ ತೆರಿಗೆ ಪಾವತಿಸಿದವರ ಸಂಖ್ಯೆಗೆ ಹೋಲಿಸಿದರೆ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ವ್ಯಾಪಾರ- ವ್ಯವಹಾರಸ್ಥರು ಸೆಪ್ಟೆಂಬರ್‌ ತಿಂಗಳ ತೆರಿಗೆ ಪಾವತಿಸದ ಕಾರಣ ಇಷ್ಟೂ ಮಂದಿ ಅ.21ರಿಂದ ಪ್ರತಿ ದಿನದ ವಿಳಂಬ ಪಾವತಿಗೆ 100ರೂ. ದಂಡ ತೆರುವುದು ಅನಿವಾರ್ಯವಾಗಲಿದೆ.

Advertisement

ಜುಲೈ 1ರಿಂದ ಜಿಎಸ್‌ಟಿ ಜಾರಿ ಬಳಿಕ ಆ ತಿಂಗಳ ವಹಿವಾಟಿಗೆ ಸಂಬಂಧಪಟ್ಟಂತೆ ತೆರಿಗೆಯನ್ನು ಆ.20ರೊಳಗೆ ಸಲ್ಲಿಸಬೇಕಿತ್ತು. ಆದರೆ ದೇಶಾದ್ಯಂತ ಮೊದಲ ಬಾರಿಗೆ ಹೊಸ ತೆರಿಗೆ ಪದ್ಧತಿ ಜಾರಿಯಾಗಿದ್ದ ಹಿನ್ನೆಲೆಯಲ್ಲಿ ಜುಲೈ ತಿಂಗಳ ತೆರಿಗೆ ವಿಳಂಬ ಪಾವತಿಗೆ ದಂಡ ವಿಧಿಸುವುದನ್ನು ಕೇಂದ್ರ ಸರ್ಕಾರ ಕೈಬಿಟ್ಟಿತ್ತು. ಆದರೆ ಆಗಸ್ಟ್‌ ವಹಿವಾಟಿನ ತೆರಿಗೆ ವಿಳಂಬ ಪಾವತಿಗೆ ದಂಡ ವಿಧಿಸುತ್ತಿದೆ.

ಒಂದು ಲಕ್ಷ ಮಂದಿಗೆ ದಂಡ: ಜುಲೈ ತಿಂಗಳ ವಹಿವಾಟಿನ ತೆರಿಗೆ ಪಾವತಿಸಿದವರಿಗಷ್ಟೇ ಸೆಪ್ಟೆಂಬರ್‌ ತಿಂಗಳ ತೆರಿಗೆ ಪಾವತಿಗೆ ಅವಕಾಶವಿರಲಿದೆ. ಜುಲೈ ತಿಂಗಳ ತೆರಿಗೆಯನ್ನು 4.14 ಲಕ್ಷ ವ್ಯಾಪಾರ- ವ್ಯವಹಾರಸ್ಥರು ಪಾವತಿಸಿದ್ದರು. ಆದರೆ ಸೆಪ್ಟೆಂಬರ್‌ ತಿಂಗಳ ವಹಿವಾಟಿನ ತೆರಿಗೆಯನ್ನು 3.15 ಲಕ್ಷ ವ್ಯಾಪಾರ- ವ್ಯವಹಾರಸ್ಥರಷ್ಟೇ ಪಾವತಿಸಿರುವುದರಿಂದ ಇನ್ನೂ ಒಂದು ಲಕ್ಷ ಮಂದಿ ತೆರಿಗೆ ಪಾವತಿಸದಿರುವುದು ಕಂಡುಬಂದಿದೆ. ಈ ವ್ಯಾಪಾರ- ವ್ಯವಹಾರಸ್ಥರು ಪ್ರತಿ ದಿನದ ವಿಳಂಬ ಪಾವತಿಗೆ 100 ರೂ. ದಂಡ ಪಾವತಿಸುವುದು ಅನಿವಾರ್ಯವಾಗಲಿದೆ ಎಂದು ವಾಣಿಜ್ಯ ತೆರಿಗೆ ಇಲಾಖೆ ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next