ನಮಗೆಲ್ಲರಿಗೂ ಒಂದು ಸಣ್ಣ ಆಸೆ ಇರುತ್ತದೆ. ಕಟ್ಟುವ ತೆರಿಗೆಯನ್ನು ಉಳಿಸಬೇಕು. ಅಧಿಕ ಸಂಪಾದನೆ ಇರುವವರಿಗೆ ತೆರಿಗೆ ಉಳಿಸುವುದರಿಂದ ಲಾಭವೇ. ಆದರೆ, ಅಲ್ಪಮಟ್ಟಿಗಿನ ಸಂಪಾದನೆ ಇರುವವರೂ ತೆರಿಗೆ ಉಳಿಸುವುದರ ಬಗೆಗೆ ಯೋಚಿಸಿದರೆ ತಪ್ಪೇನು ಇಲ್ಲ. ಇಲ್ಲಿ ತೆರಿಗೆ ಉಳಿಸುವುದು ಯಾವ ರೀತಿಯಿಂದಲೂ ತೆರಿಗೆ ವಂಚನೆ ಆಗುವುದಿಲ್ಲ. ಬದಲಿಗೆ, ಇನ್ನೊಂದು ವಿಧದಲ್ಲಿ ಅಭಿವೃದ್ಧಿಗೆ ನೀಡುವ ಕೊಡಗೆ ಆಗುತ್ತದೆ.! ತೆರಿಗೆ ಉಳಿಸಬೇಕು ಎನ್ನುವ ಕಾರಣಕ್ಕೆ ಸಾಲ ಮಾಡಿದೆ ಎನ್ನುವವರನ್ನು ನಾವು ನೋಡಿರುತ್ತೇವೆ. ತೆರಿಗೆ ಉಳಿಸುವ ಹಲವು ದಾರಿಗಳಿವೆ. ಅಂದರೆ, ತೆರಿಗೆ ಉಳಿಸುವುದಕ್ಕೆ ಹಲವು ಹೂಡಿಕೆಗಳಿವೆ. ಆರೋಗ್ಯ ವಿಮೆಯ ಪಾಲಿಸಿ ತೆಗೆದುಕೊಳ್ಳುವುದು, ಜೀವವಿಮೆ ಮಾಡಿಸುವುದು…ಇವೆಲ್ಲವೂ ತೆರಿಗೆ ಉಳಿತಾಯದ ದಾರಿಗಳು. ಹಾಗೆಯೇ, ಮ್ಯೂಚುವಲ್ ಫಂಡ್‌ನಲ್ಲೂ ತೆರಿಗೆ ಉಳಿತಾಯದ ಹಲವಾರು ಯೋಜನೆಗಳಿವೆ.
ಎಲ್ಲರಿಗೂ ಗೊತ್ತಿರುವ ಹಾಗೆ, ಮ್ಯೂಚುವಲ್ ಫಂಡ್‌ನ ವಲಯವಾರು ಫಂಡ್‌ಗಳಲ್ಲಿ ಹಣ ತೊಡಗಿಸಿ ತೆರಿಗೆ ಉಳಿಸುವುದು ಈಗ ಹೆಚ್ಚು ಜನಪ್ರಿಯ ಆಗುತ್ತಿದೆ. ತೆರಿಗೆ ಉಳಿತಾಯದ ಫಂಡ್‌ಗಳಲ್ಲಿ ನಿರ್ಧಿಷ್ಟ ಅವಧಿಯ ನಂತರ ಮಾತ್ರ ಮಾರಲು ಬರುತ್ತದೆ. ಅಂದರೆ, ಇಲ್ಲಿ ಲಾಕಿಂಗ್ ಅವಧಿ ಇರುತ್ತದೆ. ತೆರಿಗೆ ಉಳಿತಾಯದ ಫಂಡ್‌ಗಳಲ್ಲಿ ಹಣ ಹೂಡುವ ಮೂಲಕ ತೆರಿಗೆ ಉಳಿತಾಯದ ಜೊತೆಗೆ ನಾವು ಹೂಡಿಕೆ ಮಾಡಿದ ಹಣಕ್ಕೆ ಗಳಿಕೆಯೂ ಬರುತ್ತದೆ.
ಬಹುತೇಕ ಎಲ್ಲ ಮ್ಯೂಚುವಲ್ ಫಂಡ್ ಕಂಪನಿಗಳೂ ತೆರಿಗೆ ಉಳಿತಾಯದ ಹಲವಾರು ಹೊಸ ಯೋಜನೆಗಳನ್ನು ಬಿಡುಗಡೆಗೊಳಿಸಿವೆ. ಈಗಾಗಲೇ ಹಲವಾರು ವರ್ಷಗಳಿಂದಲೂ ಇರುವ ಯೋಜನೆಗಳಲ್ಲೂ ಹಣ ತೊಡಗಿಸಬಹುದು. ಒಟ್ಟಿನಲ್ಲಿ, ತೆರಿಗೆ ಉಳಿತಾಯದ ಹಲವಾರು ಆಕರ್ಷಕ ಯೋಜನೆಗಳು ಮ್ಯೂಚುವಲ್ ಫಂಡ್‌ನಲ್ಲಿ ಲಭ್ಯ ಇದ್ದು, ಹಲವಾರು ವರ್ಷಗಳಿಂದಲೂ ಉತ್ತಮ ಲಾಭ ನೀಡುತ್ತಲೂ ಬಂದಿವೆ.
ತೆರಿಗೆ ಉಳಿತಾಯವೂ ಒಂದು ಗಳಿಕೆಯೇ ಹೌದು.ಆದರೆ, ನೆಪದಲ್ಲಿ ನಡೆಯುವ ಉಳಿಕೆ ಮತ್ತು ಹೂಡಿಕೆಯೂ ಶಿಸ್ತಿನ ಭಾಗವೇ. ಯಾರಿಗಾದರೂ ಅನ್ನಿಸಬಹುದು: ಏನಿದು ತೆರಿಗೆ ಕಟ್ಟಿದರೆ ಬಾರದೇ ಎಂದು? ನಾವು ಮ್ಯೂಚುವಲ್ ಫಂಡ್‌ನ ತೆರಿಗೆ ಉಳಿತಾಯದ ಯೋಜನೆಗಳಲ್ಲಿ ಹೂಡಿದ ಹಣ ಸಾಮಾನ್ಯವಾಗಿ ಮೂಲ ಸೌಕರ್ಯ ಅಭಿವೃದ್ಧಿ ಯಂತಹ ಸಾರ್ವಜನಿಕ ಅನುಕೂಲದ ಯೋಜನೆಗಳಿಗೆ ತೊಡಗಿಸಿದ್ದೇ ಆಗಿರುತ್ತದೆ. ಅಂದರೆ, ಇಂಥ ಹೂಡಿಕೆ ಅಭಿವೃದ್ಧಿಗೆ ಪೂರಕವಾಗಿಯೇ ಇರುತ್ತದೆ.
ಸುಧಾಶರ್ಮ ಚವತ್ತಿ