Advertisement

ಅಭಿವೃದ್ಧಿಗೆ ಬಳಸೋದು ತೆರಿಗೆ ಹಣ

03:31 PM Jul 05, 2017 | Team Udayavani |

ದಾವಣಗೆರೆ: ಯಾವುದೇ ಸರ್ಕಾರ ಅಭಿವೃದ್ಧಿ ಕಾರ್ಯ ಕೈಗೊಳ್ಳುವುದು ಜನರು ಕಟ್ಟುವ ತೆರಿಗೆ ಹಣದಿಂದಲೇ ಹೊರತು ನಮ್ಮ ಮನೆಯಿಂದ ಹಣ ಕೊಡುವುದಿಲ್ಲ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್‌ ತಮ್ಮ ವಿರುದ್ದ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹಾಗೂ ಶಾಸಕ ಶಾಮನೂರು ಶಿವಶಂಕರಪ್ಪನವರಿಗೆ ಪರೋಕ್ಷವಾಗಿ
ಟಾಂಗ್‌ ನೀಡಿದ್ದಾರೆ.

Advertisement

ಮಂಗಳವಾರ 15ನೇ ವಾರ್ಡ್‌ನ ಭಾರತ್‌  ಕಾಲೋನಿಯಲ್ಲಿ ಕುಡಿಯುವ ನೀರು ಸರಬರಾಜು ಘಟಕ ಉದ್ಘಾಟಿಸಿ ಮಾತನಾಡಿದ ಅವರು, ಸೋಮವಾರ ಅಂಡರ್‌ಗ್ರೌಂಡ್‌ ಕೇಬಲ್‌ ಅಳವಡಿಸುವ ಕಾಮಗಾರಿ ಚಾಲನೆ ನೀಡುವ
ಕಾರ್ಯಕ್ರಮದಲ್ಲಿ ಎಲ್ಲ ಅನುದಾನವನ್ನ ರಾಜ್ಯ ಸರ್ಕಾರವೇ ನೀಡಿದೆ ಎಂಬುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹೇಳಿದ್ದಾರೆ. ದೀನ್‌ದಯಾಳ್‌ ಉಪಾಧ್ಯಾಯ ಯೋಜನೆಯಡಿ ಕೇಂದ್ರ ಸರ್ಕಾರ ಶೇ.60, ರಾಜ್ಯ ಸರ್ಕಾರ ಶೇ. 40 ರಷ್ಟು ಅನುದಾನ ನೀಡುತ್ತದೆ. ಅಂಡರ್‌ಗ್ರೌಂಡ್‌ ಕೇಬಲ್‌ ಕಾಮಗಾರಿಗೆ ಮಂಜೂರಾತಿ ನೀಡಿದ್ದು ನಾನೇ. ಏಕೆಂದರೆ ನಾನೇ ಸಮಿತಿ ಅಧ್ಯಕ್ಷ. ಹಾಗಾಗಿ ಜನರಿಗೆ ಇರುವ ಸತ್ಯ ಹೇಳಬೇಕು. ಅದನ್ನು ಬಿಟ್ಟು ಏನೋ ಒಂದು ರೀತಿ ಭಾಷಣ ಮಾಡುವುದು ಶೋಭೆ ತರುವಂತದ್ದಲ್ಲ ಎಂದು ಯಾರ ಹೆಸರು ಹೇಳದೇ ಟೀಕಿಸಿದರು. 

ನಾನು ಕೇಂದ್ರದಿಂದ ಹಣ ತಂದು ಕೆಲಸ ಮಾಡಿಸಿದರೆ, ಅವರು ರಾಜ್ಯದಿಂದ ಹಣ ತಂದು ಕೆಲಸ ಮಾಡಿಸುತ್ತಾರೆ. ಹಾಗಾಗಿ ಇದು ನಾನು ಕೊಟ್ಟ ಹಣ ಇಲ್ಲವೆ ಅವರು ಕೊಟ್ಟದ್ದು ಎಂಬುದಾಗಿ ಯಾರೂ ಹೇಳಲು ಬರುವುದೇ ಇಲ್ಲ. ಏಕೆಂದರೆ ನಾವು ನಮ್ಮ ಮನೆಯಿಂದ ಹಣ ಕೊಡುವುದಿಲ್ಲ. ಜನರ ತೆರಿಗೆ ಹಣ ಕೊಟ್ಟಿದ್ದೇವೆ ಎಂದು ಹೇಳಿದರು.

ಮಹಾನಗರ ಪಾಲಿಕೆ ಒಳ್ಳೆಯ ಕೆಲಸ ಮಾಡುತ್ತಿದೆ  ಎಂಬುದಾಗಿ ಹೇಳುತ್ತಾರೆ. ಆದರೆ, ಮಹಾನಗರ ಪಾಲಿಕೆಯವರು ಏನು ಕೆಲಸ ಮಾಡಿದ್ದಾರೆ ಎಂಬುದು ಇಡೀ ದಾವಣಗೆರೆ ಜನರಿಗೆ ಗೊತ್ತಿದೆ ಎಂದ ಸಿದ್ದೇಶ್ವರ್‌, ಬೇಸಿಗೆಯಲ್ಲಿ ನೀರಿನ
ಸಮಸ್ಯೆ ತೀವ್ರವಾದಾಗ ಪಾಲಿಕೆ ಜವಾಬ್ದಾರಿ ತೆಗೆದುಕೊಂಡಿದ್ದು ಗಮನಕ್ಕೆ ಬರಲೇ ಇಲ್ಲ. ಆಗ ದಾವಣಗೆರೆ ಉತ್ತರಕ್ಕೆ 25.27 ಲಕ್ಷ, ದಕ್ಷಿಣಕ್ಕೆ 60.8 ಲಕ್ಷ ಅನುದಾನ ಮಂಜೂರು ಮಾಡಿ, ಕೊಳವೆ ಬಾವಿ ಕೊರೆಸಲಾಗಿದೆ. ಕೆಲವು ಕಡೆ ಬೋರ್‌ ಫೇಲ್‌ ಆಗಿವೆ. ಮರು ಸಮೀಕ್ಷೆ ಮಾಡಿ, ಕೊಳವೆಬಾವಿ ಕೊರೆಯಲು ಅಧಿಕಾರಿಗಳಿಗೆ ಸೂಚಿಸಲಾಗಿದೆ
ಎಂದು ತಿಳಿಸಿದರು. ದಾವಣಗೆರೆ ಉತ್ತರ ಮತ್ತು ದಕ್ಷಿಣ ಕ್ಷೇತ್ರದಲ್ಲಿ 40ಕ್ಕೂ ಹೆಚ್ಚು ಕೊಳವೆ ಬಾವಿ ಕೊರೆಸಲಾಗಿದೆ. ಅವುಗಳಲ್ಲಿ 30-35ರಲ್ಲಿ ನೀರು  ಸಿಕ್ಕಿದೆ. ಮೋಟರ್‌, ಪೈಪ್‌ ಅಳವಡಿಸಿ, ನೀರು ಪೂರೈಕೆ ಮಾಡಲಾಗುತ್ತಿದೆ. ಪಾಲಿಕೆ ವ್ಯಾಪ್ತಿಯ ಎಲ್ಲಾ ಕಡೆ ಹಂತ ಹಂತವಾಗಿ ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ 
ಪ್ರಯತ್ನಿಸಲಾಗುವುದ ಎಂದು ತಿಳಿಸಿದರು.

ಬೇಸಿಗೆ ಸಂದರ್ಭದಲ್ಲಿ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿತ್ತು. ಟ್ಯಾಂಕರ್‌ಗೆ 1,200 ರೂಪಾಯಿವರೆಗೆ ಕೊಡಬೇಕಿತ್ತು. ಆ ಸಂದರ್ಭದಲ್ಲಿ ಅನೇಕರು ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಮನವಿ ಮಾಡಿದಾಗ ಅನುದಾನ ಬಿಡುಗಡೆ ಮಾಡಿ, ಕೊಳವೆ ಬಾವಿ ಕೊರೆಸಲಾಗಿದೆ. ದಾವಣಗೆರೆ ಜಿಲ್ಲೆಯಲ್ಲಿ 2.12 ಕೋಟಿ ಅನುದಾನ
ಬಿಡುಗಡೆ ಮಾಡಲಾಗಿದೆ. ಮಾಯಕೊಂಡಕ್ಕೆ 9 ಲಕ್ಷ, ಹರಿಹರಕ್ಕೆ 32, ಜಗಳೂರುಗೆ 20, ಹೊನ್ನಾಳಿ, ಹರಪನಹಳ್ಳಿಗೆ ತಲಾ 10 ಲಕ್ಷ ಸೇರಿ 2.12 ಕೋಟಿ ಅನುದಾನ ನೀಡಲಾಗಿದೆ ಎಂದು ತಿಳಿಸಿದರು.

Advertisement

ಬಿಜೆಪಿ ಜಿಲ್ಲಾ ಅಧ್ಯಕ್ಷ ಯಶವಂತರಾವ್‌ ಜಾಧವ್‌ ಮಾತನಾಡಿ, ದಾವಣಗೆರೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಂದಾಗ ಸಂಸದ ಜಿ.ಎಂ. ಸಿದ್ದೇಶ್ವರ್‌ ಅವರು ಬಿಜೆಪಿ, ಕಾಂಗ್ರೆಸ್‌ ವಾರ್ಡ್‌ ಎಂಬ ಭೇದಭಾವ ಮಾಡದೆ ಎಲ್ಲಾ
ವಾರ್ಡ್‌ಗಳಿಗೆ ಹಣ ಕೊಟ್ಟಿದ್ದಾರೆ. ದಾವಣಗೆರೆ ದಕ್ಷಿಣದಲ್ಲಿ 30ಕ್ಕೂ ಹೆಚ್ಚು ಕೊಳವೆಬಾವಿ ಕೊರೆಸಲಾಗಿದ್ದು, 24ರಲ್ಲಿ ನೀರು ಸಿಕ್ಕಿದೆ. ಸಿದ್ದೇಶ್ವರ್‌ ಬರೀ ಕುಡಿಯುವ ನೀರು ಮಾತ್ರವಲ್ಲ ಶಾಲಾ ಕಾಂಪೌಂಡ್‌, ರಸ್ತೆ ನಿರ್ಮಾಣ ಎಲ್ಲಾ ಕೆಲಸ
ಮಾಡಿಸಿದ್ದಾರೆ. ಓರ್ವ ಸಂಸದರಾಗಿ ಕ್ಷೇತ್ರದ ಅಭಿವೃದ್ಧಿ ಕೆಲಸವನ್ನ ಅತ್ಯಂತ ಪ್ರಾಮಾಣಿಕವಾಗಿ ಮಾಡುತ್ತಿದ್ದಾರೆ. ಹಾಗಾಗಿ ಎಲ್ಲ ಕಾರ್ಯಕರ್ತರು ಅವರ ಹಿಂದೆ ಇದ್ದಾರೆ. ಯಾವುದೇ ಒತ್ತಡ ಬಂದರೂ ಕೆಲಸ ಮಾಡುವ ತಾಕತ್ತು, ಶಕ್ತಿ ನಮ್ಮ ಕಾರ್ಯಕರ್ತರಲ್ಲಿದೆ. ಯಾರೂ ಯಾವುದಕ್ಕೂ ಅಂಜದೆ, ಅಳುಕದೆ ಮುಂದಾಗಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು. 

ಸ್ಲಂ ಮೋರ್ಚಾ ರಾಜ್ಯ ಅಧ್ಯಕ್ಷ ಜಯಪ್ರಕಾಶ್‌ ಅಂಬರ್‌ಕರ್‌ ಮಾತನಾಡಿ, ರಾಜ್ಯದ ಕೊಳಗೇರಿಯಲ್ಲಿ ಗುಜರಾತ್‌ ಮಾದರಿಯಲ್ಲಿ ಮನೆ ನಿರ್ಮಾಣ, ಸ್ವತ್ಛತೆಗೆ ಆದ್ಯತೆ ನೀಡಲಾಗುವುದು. ಮುಂದಿನ ದಿನಗಳಲ್ಲಿ ಎಲ್ಲಾ ಕಡೆ ಸ್ಲಂ ಮೋರ್ಚಾದ ಸಮಾವೇಶ ನಡೆಸಲಾಗುವುದು ಎಂದರು. ಮಹಾನಗರ ಪಾಲಿಕೆ ಬಿಜೆಪಿ ಸದಸ್ಯ ಡಿ.ಎನ್‌.
ಕುಮಾರ್‌, ಬಿಜೆಪಿ ಮುಖಂಡರಾದ ಅಣಬೇರು ಜೀವನಮೂರ್ತಿ, ಎಚ್‌.ಎನ್‌. ಶಿವಕುಮಾರ್‌, ರಮೇಶ್‌ನಾಯ್ಕ, ಪಿ.ಸಿ. ಶ್ರೀನಿವಾಸ್‌, ಎಲ್‌.ಡಿ. ಗೋಣೆಪ್ಪ, ಎಚ್‌.ಸಿ. ಜಯಮ್ಮ, ದೇವಿರಮ್ಮ, ರಾಜನಹಳ್ಳಿ ಶಿವಕುಮಾರ್‌, ಉಮೇಶ್‌, ನಟರಾಜ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next