Advertisement

ಅಕಾಲದಲ್ಲಿ ಕರ ಭಾರಕ್ಕೆ ಅಸಮಾಧಾನ

06:52 PM Apr 22, 2020 | Suhan S |

ಶಿರಸಿ: ಕೋವಿಡ್‌ ಕಷ್ಟದಲ್ಲಿದ್ದಾಗಲೇ ಸ್ಥಳೀಯ ನಗರಸಭೆ ಮನೆ ಕರ, ವಾಣಿಜ್ಯ ಕರಗಳನ್ನು ಏರಿಕೆ ಮಾಡಿದ ಬಗ್ಗೆ ನಗರದಲ್ಲಿ ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ. ಕಾಂಗ್ರೆಸ್‌, ಬಿಜೆಪಿ ಪ್ರಮುಖರು ಕರ ಏರಿಕೆ ಬಗ್ಗೆ ದೂರಿದ್ದು, ಕೋವಿಡ್‌ 19ರ ನಿರ್ಮೂಲನೆಯ ಬಳಿಕ ಅಸ್ತಿತ್ವಕ್ಕೆ ಬರಲಿರುವ ಆಡಳಿತ ಮಂಡಳಿಯ ತೀರ್ಮಾನಕ್ಕೇ ಬಿಡಬೇಕು. ಅಲ್ಲೀ ತನಕ ಕಳೆದ ವರ್ಷದ ಕರವನ್ನೇ ಆಕರಿಸಬೇಕು ಎಂದು ಹಕ್ಕೊತ್ತಾಯ ಮಾಡಿದ್ದಾರೆ.

Advertisement

ಕೋವಿಡ್‌ ಲಾಕ್‌ಡೌನ್‌ ಸಂದರ್ಭದಲ್ಲಿ ನಗರದ ಜನತೆ ತೀವ್ರ ಸಂಕಷ್ಟ ಪರಿಸ್ಥಿತಿ ಎದುರಿಸುತ್ತಿರುವ ಸಮಯದಲ್ಲಿ ನಗರಸಭೆ ಕರ ಏರಿಕೆ ಮಾಡಿ ಜನರ ಗಾಯದ ಮೇಲೆ ಬರೆ ಎಳೆಯುವ ಕೆಲಸ ಮಾಡಿದೆ. ಬಹುತೇಕ ಸಾರ್ವಜನಿಕರು ಯಾವುದೇ ಕೆಲಸ ಕಾರ್ಯಗಳಿಲ್ಲದೇ ಖಾಲಿ ಕೂತಿದ್ದಾರೆ. ಕೈಯಲ್ಲಿರುವ ಹಣ ಕೂಡ ಖರ್ಚಾಗಿದ್ದು, ಅವರಿವರನ್ನು ಬೇಡುವ ಪರಿಸ್ಥಿತಿ ಬಂದೊದಗಿದೆ. ಕರ ಏರಿಸುವ ಮೂಲಕ ಹಣ ಸಂಗ್ರಹಣೆಗೆ ಚಾಲನೆ ನೀಡುತ್ತಿರುವುದು ಜನವಿರೋಧಿ ಕಾರ್ಯವಾಗಿದೆ ಎಂದು ಕೈ ಮುಖಂಡರು ದೂರಿದ್ದಾರೆ.

ನಗರದ ಬಡ ಜನತೆ ತುತ್ತು ಅನ್ನಕ್ಕೆ ಪರದಾಡುತ್ತಿದ್ದು, ಈ ಸಮಯದಲ್ಲಿ ಈ ಏರಿಕೆ ಸರಿಯಲ್ಲ. ಕ್ಷೇತ್ರದ ಶಾಸಕ, ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಟಾರ್‌ ಕೂಡಲೇ ಮಧ್ಯ ಪ್ರವೇಶಿಸಿ ಕರ ಏರಿಕೆ ತಡೆಯುವಂತೆ ಸರಕಾರದ ಗಮನ ಸೆಳೆದು ಹೆಚ್ಚಳ ಮಾಡದಂತೆ ಸಲಹೆ ನೀಡಬೇಕು. ಮನವಿಗೆ ಸ್ಪಂದಿಸದೇ ಇದ್ದರೆ ಹೋರಾಟ ಮಾಡಲಾಗುತ್ತದೆ ಎಂದು ಕಾಂಗ್ರೆಸ್‌ ಪ್ರಮುಖರಾದ ರಮೇಶ ದುಭಾಶಿ, ಸತೀಶ ನಾಯ್ಕ ಮಧುರವಳ್ಳಿ, ರಾಜು ಉಗ್ರಾಣಕರ್‌, ಖಾದರ್‌ ಆನವಟ್ಟಿ ಆಗ್ರಹಿಸಿದ್ದಾರೆ.

ಬಿಜೆಪಿ ನಗರದ ಘಟಕದ ಅಧ್ಯಕ್ಷ ರಾಜೇಶ ಶೆಟ್ಟಿ, ಹೆಚ್ಚಳ ಮಾಡಲಾದ ಕರವನ್ನು ವಾಪಸ್‌ ಪಡೆಯಬೇಕು. ಕೋವಿಡ್‌ 19ತೊಂದರೆಯಲ್ಲಿದ್ದಾಗ ಜನರಿಗೆ ವ್ಯಾಪಾರ ವಹಿವಾಟು, ಉದ್ಯೋಗ ಯಾವುದೂ ಇಲ್ಲ. ಕರ ತಗ್ಗಿಸಬೇಕು. ಅದು ಬಿಟ್ಟು ಹೆಚ್ಚಳ ಮಾಡುವುದು ಸರಿಯಲ್ಲ ಎಂದು ಪ್ರತಿಪಾದಿಸಿದ್ದಾರೆ. ಕಾಗೇರಿ ಅವರ ಗಮನಕ್ಕೂ ತಂದಿದ್ದಾರೆ. ಹಳೆ ತೆರಿಗೆಯನ್ನೇ ಮುಂದುವರಿಸಿಕೊಂಡು ಹೋಗಲು ಅನುಕೂಲ ಮಾಡಿಕೊಡುತ್ತಿದ್ದಾರೆ. ಹಳೆ ತೆರಿಗೆ ಪದ್ಧತಿಯೇ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾಗಿ ತಿಳಿಸಿದ್ದಾರೆ.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಭೀಮಣ್ಣ ನಾಯ್ಕ, ಬಿಜೆಪಿ ಪ್ರಮುಖ, ನಗರಸಭಾ ಸದಸ್ಯ ಗಣಪತಿ ನಾಯ್ಕ ಕೂಡ ಕರ ಹೆಚ್ಚಳಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

Advertisement

ಅಧಿಕಾರಿಗಳು ನೂತನ ತೆರಿಗೆಯನ್ನು ಏಕಾಏಕಿ ವಿಧಿಸಿದ್ದಾರೆ. ಇದನ್ನು ವಾಪಸ್‌ ಪಡೆಯಬೇಕು. ನಗರದ ಕರದಾತರು ಕಳೆದ ವರ್ಷದ ಕರವನ್ನೇ ಸಲ್ಲಿಸಬೇಕು. ಮುಂದಿನ ನೂತನ ಆಡಳಿತ ಮಂಡಳಿ ತೆರಿಗೆ ತೀರ್ಮಾನಿಸಲಿದೆ. -ಪ್ರದೀಪ ಶೆಟ್ಟಿ, ನಗರಸಭೆ ಮಾಜಿ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next