ಬೆಂಗಳೂರು: ಕೋವಿಡ್ ನಿಂದ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರಕಾರಕ್ಕೆ ಚೈತನ್ಯ ನೀಡುತ್ತಿರುವುದು ಅಬಕಾರಿ ಸುಂಕವೇ.
ರಾಜ್ಯ ಸರಕಾರವು ಮದ್ಯದ ಮೇಲೆ ಹಾಗೂ ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಹಾಕಿರುವ ಅಬಕಾರಿ ಸುಂಕದಿಂದ ಹೆಚ್ಚಿನ ಆದಾಯ ಹರಿದು ಬರುವ ಸಾಧ್ಯತೆ ಇದೆ.
ಅದರಲ್ಲೂ ಮದ್ಯದ ಮೇಲಿನ ಅಬಕಾರಿ ಸುಂಕದಿಂದಲೇ ಮಾಸಿಕ 180 ಕೋ.ರೂ. ಹೆಚ್ಚಿನ ಆದಾಯ ಲಭಿಸುವ ಸಾಧ್ಯತೆ ಇದೆ. ಅಂದರೆ ವಾರ್ಷಿಕ ಎರಡು ಸಾವಿರ ಕೋ.ರೂ.ಗೂ ಹೆಚ್ಚು ವರಮಾನ ಬರಬಹುದಾಗಿದೆ.
ರಾಜ್ಯ ಸರಕಾರವು ತನ್ನ ಸ್ವಂತ ತೆರಿಗೆ ಮೂಲದಿಂದ ಮಾಸಿಕ ಸುಮಾರು 10,675 ಕೋ.ರೂ. ಆದಾಯ ನಿರೀಕ್ಷಿಸಿದ್ದು, ಮದ್ಯದ ಮೇಲಿನ ರಾಜ್ಯ ಅಬಕಾರಿ ಸುಂಕ ಹೆಚ್ಚಳದಿಂದಲೂ ಆದಾಯ ಹೆಚ್ಚುವ ನಿರೀಕ್ಷೆ ಇದೆ. 2020-21ನೇ ಸಾಲಿನಲ್ಲಿ ರಾಜ್ಯ ಸರಕಾರ ತನ್ನ ಸ್ವಂತ ತೆರಿಗೆ ಮೂಲದಿಂದ 1.28 ಲಕ್ಷ ಕೋ.ರೂ. ಆದಾಯ ಸಂಗ್ರಹ ಗುರಿ ಹೊಂದಿದೆ.
ಮದ್ಯದ ಮೇಲೆ ಶೇ.11 ರಾಜ್ಯ ಅಬಕಾರಿ ಸುಂಕ ವಿಧಿಸಲಾಗಿದೆ. 2020-21ನೇ ಸಾಲಿನ ಬಜೆಟ್‌ನಲ್ಲೇ ಭಾರತೀಯ ತಯಾರಿ ಮದ್ಯ (ಐಎಂಎಲ್)ದ ಮೇಲೆ ಶೇ. 6ರಷ್ಟು ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು. ಜತೆಗೆ ಗುರುವಾರ ಶೇ.11ರಷ್ಟು ಅಬಕಾರಿ ಸುಂಕ ಹೆಚ್ಚಿಸಲಾಗಿದ್ದು, ತತ್‌ಕ್ಷಣವೇ ಜಾರಿಗೆ ಬಂದಿದೆ. ಇದರಿಂದ ನಿರೀಕ್ಷೆಗಿಂತಲೂ ಹೆಚ್ಚುವರಿ ತೆರಿಗೆ ಸಂಗ್ರಹವಾಗಲಿದೆ.
ಅನಾಯಾಸ ಆದಾಯ
ಕೇಂದ್ರ ಸರಕಾರವು ಪೆಟ್ರೋಲ್ ಮತ್ತು ಡೀಸೆಲ್ ಮೇಲೆ ಕ್ರಮವಾಗಿ 10 ರೂ. ಮತ್ತು 13 ರೂ. ಕೇಂದ್ರ ಅಬಕಾರಿ ಸುಂಕ ಏರಿಕೆ ಮಾಡಿದೆ. ಈ ಹೊರೆಯನ್ನು ತೈಲ ಕಂಪೆನಿಗಳೇ ಭರಿಸಬೇಕು ಎಂದು ಸೂಚಿಸಿದೆ. ಇದು ರಾಜ್ಯ ಸರಕಾರಗಳಿಗೆ ವರದಾನವಾಗಿ ಪರಿಣಮಿಸಿದೆ.
ವಾರ್ಷಿಕ 22,700 ಕೋಟಿ ರೂ. ನಿರೀಕ್ಷೆ
ಪ್ರಸಕ್ತ ಹಣಕಾಸು ವರ್ಷದಲ್ಲಿ ಅಬಕಾರಿ ತೆರಿಗೆಯಿಂದ 22,700 ಕೋ.ರೂ. ಸಂಗ್ರಹ ಗುರಿಯಿದ್ದು, ಮಾಸಿಕ ಸರಾಸರಿ 1,900 ಕೋಟಿ ರೂ. ಸಂಗ್ರಹ ವಾಗಬೇಕು. ಶೇ. 11ರಷ್ಟು ಅಬಕಾರಿ ಸುಂಕ ಹೆಚ್ಚಳದಿಂದ ಮಾಸಿಕ ಅಬಕಾರಿ ತೆರಿಗೆ ಆದಾಯ 2 ಸಾವಿರ ಕೋ.ರೂ. ಮೀರುವ ನಿರೀಕ್ಷೆ ಇದೆ.