Advertisement

ತೆರಿಗೆ ಮುಕ್ತ ಸಿನಿಮಾ; ಏನಿದರ ಮರ್ಮ?

08:12 AM Mar 21, 2022 | Team Udayavani |

ಕಾಶ್ಮೀರಿ ಪಂಡಿತರ ನರಮೇಧ ಕುರಿತ “ದಿ ಕಾಶ್ಮೀರಿ ಫೈಲ್ಸ್‌’ ಸಿನಿಮಾ ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಕರ್ನಾಟಕ ಸೇರಿ ಹಲವು ರಾಜ್ಯಗಳು ಈ ಚಿತ್ರವನ್ನು “ತೆರಿಗೆ ಮುಕ್ತ’ಗೊಳಿಸಿರುವುದಾಗಿ ಘೋಷಿಸಿವೆ. ಇದರ ನಡುವೆಯೇ, ದಿ.ಪುನೀತ್‌ ರಾಜ್‌ಕುಮಾರ್‌ ಅವರ “ಜೇಮ್ಸ್‌’ ಚಿತ್ರದ ಅಬ್ಬರವೂ ಜೋರಾಗಿದ್ದು, ರಾಜ್ಯ ಸರ್ಕಾರ ಈ ಸಿನಿಮಾಗೂ ತೆರಿಗೆ ವಿನಾಯ್ತಿ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಯಾವಾಗ ಸಿನಿಮಾವನ್ನು ತೆರಿಗೆ ಮುಕ್ತವೆಂದು ಘೋಷಿಸಲಾಗುತ್ತದೆ, ಅದರಿಂದ ಏನು ಅನುಕೂಲ ಎಂಬ ಮಾಹಿತಿ ಇಲ್ಲಿದೆ.

Advertisement

ಸಿನಿಮಾ ತೆರಿಗೆ ಮುಕ್ತವಾಗುವುದು ಯಾವಾಗ?
ಯಾವುದೇ ಸಿನಿಮಾಗೆ ತೆರಿಗೆ ವಿನಾಯ್ತಿ ಘೋಷಿಸಲು ನಿರ್ದಿಷ್ಟ ಮಾನದಂಡಗಳಿಲ್ಲ. ಆದರೆ, ಆ ಸಿನಿಮಾದಲ್ಲಿರುವ ಅಂಶಗಳ ಮಹತ್ವವನ್ನು ಮನಗಂಡು ತೆರಿಗೆ ವಿನಾಯ್ತಿ ಘೋಷಿಸುವ ಅಧಿಕಾರ ಆಯಾ ರಾಜ್ಯ ಸರ್ಕಾರಗಳಿಗಿರುತ್ತವೆ. ಸಾಮಾಜಿಕ ಕಳಕಳಿ, ದೇಶಭಕ್ತಿ, ಸ್ಫೂರ್ತಿದಾಯಕ ಅಂಶಗಳನ್ನು ಪರಿಗಣಿಸಿ ಹೆಚ್ಚಾಗಿ ಈ ವಿನಾಯ್ತಿ ಘೋಷಿಸಲಾಗುತ್ತದೆ.

ತೆರಿಗೆ ಮುಕ್ತ ಎಂದರೆ…
ಜಿಎಸ್‌ಟಿ ಜಾರಿಗೆ ಮುನ್ನ ಥಿಯೇಟರ್‌ಗಳು ಸರ್ಕಾರಕ್ಕೆ ಮನರಂಜನಾ ತೆರಿಗೆ ಪಾವತಿಸಬೇಕಾಗಿತ್ತು. ಈಗ ಅದನ್ನು ಜಿಎಸ್ಟಿ ರೂಪದಲ್ಲಿ ಪಾವತಿಸಲಾಗುತ್ತದೆ. ಸಿನಿಮಾ ಟಿಕೆಟ್‌ಗಳಿಗೆ ವಿಧಿಸಲಾಗುವ ಜಿಎಸ್ಟಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಂಚಿಕೊಳ್ಳುತ್ತವೆ. ಯಾವಾಗ ರಾಜ್ಯ ಸರ್ಕಾರವು ಸಿನಿಮಾವನ್ನು ತೆರಿಗೆ ಮುಕ್ತ ಎಂದು ಘೋಷಿಸುತ್ತದೋ, ಆಗ ರಾಜ್ಯದ ಪಾಲಿನ ತೆರಿಗೆ(ಎಸ್‌ಜಿಎಸ್‌ಟಿ) ಮನ್ನಾ ಆಗುತ್ತದೆ. ಆದರೆ, ಕೇಂದ್ರದ ಪಾಲಿನ ತೆರಿಗೆ(ಸಿಜಿಎಸ್‌ಟಿ)ಯನ್ನು ಎಂದಿನಂತೆ ಪಾವತಿಸಬೇಕಾಗುತ್ತದೆ. ಹೀಗಾಗಿ, ಸ್ವಲ್ಪಮಟ್ಟಿಗೆ ಟಿಕೆಟ್‌ ದರವೂ ಇಳಿಕೆಯಾಗುತ್ತದೆ.

ಚಿತ್ರತಂಡಕ್ಕೇನು ಅನುಕೂಲ?
– ಸಿನಿಮಾಗೆ ಸಾಕಷ್ಟು ಪ್ರಚಾರ ಸಿಗುತ್ತದೆ ಮತ್ತು ಸಿನಿಮಾದ ವರ್ಚಸ್ಸು ಹೆಚ್ಚಿಸುತ್ತದೆ
– ಸರ್ಕಾರದಿಂದಲೇ ಬೆಂಬಲ ವ್ಯಕ್ತವಾಗುವ ಕಾರಣ ಹೆಚ್ಚು ಮಂದಿ ಸಿನಿಮಾ ವೀಕ್ಷಿಸುತ್ತಾರೆ
– ಆದರೆ, ಇದರಿಂದ ಚಿತ್ರತಂಡಕ್ಕೆ ಹಣಕಾಸಿನ ಅನುಕೂಲತೆಯೇನೂ ಸಿಗುವುದಿಲ್ಲ

ಷರತ್ತುಗಳು
– ಸಿನಿಮಾ ಹಾಲ್‌ಗ‌ಳು ಅಥವಾ ಮಲ್ಟಿಪ್ಲೆಕ್ಸ್‌ಗಳು ಪ್ರವೇಶ ಶುಲ್ಕವನ್ನು ಹೆಚ್ಚಿಸುವಂತಿಲ್ಲ
– ಥಿಯೇಟರ್‌ನೊಳಗೆ ಆಸನ ಸಾಮರ್ಥ್ಯವನ್ನು ಹೆಚ್ಚಳ ಮಾಡುವಂತಿಲ್ಲ
– ತೆರಿಗೆ ವಿನಾಯ್ತಿ ಸಿಕ್ಕಿದ ಸಿನಿಮಾದ ಟಿಕೆಟ್‌ನ ಮೇಲೆ “ರಾಜ್ಯ ಸರ್ಕಾರದ ಆದೇಶದ ಮೇರೆಗೆ ಜಿಎಸ್‌ಟಿ ವಿಧಿಸಿರುವುದಿಲ್ಲ’ ಎಂದು ಮುದ್ರಿಸಿರಬೇಕು

Advertisement

ತೆರಿಗೆ ವಿನಾಯ್ತಿ ಪಡೆದ ಚಿತ್ರಗಳು
ಗಾಂಧಿ (1982), ದಂಗಲ್‌ ಮತ್ತು ನೀರಜಾ(2016), ಟಾಯ್ಲೆಟ್‌: ಏಕ್‌ ಪ್ರೇಮ್‌ ಕಥಾ (2017), ಛಪಾಕ್‌(2020), ಮೇರಿ ಕೋಮ್‌(2014), ತಾರೇ ಝಮೀನ್‌ ಪರ್‌ (2007), ಮರ್ದಾನಿ (2014), ನೀಲ್‌ ಬತ್ತೇ ಸನ್ನಾತಾ(2015).

Advertisement

Udayavani is now on Telegram. Click here to join our channel and stay updated with the latest news.

Next