“ವಿವಾದ್ ಸೆ ವಿಶ್ವಾಸ್’ನಿಂದ ಸರಕಾರಕ್ಕೆ ಮಾತ್ರವಲ್ಲದೆ ತೆರಿಗೆ ಬಾಕಿಯಿಟ್ಟವರಿಗೂ ಲಾಭಗಳಿವೆ. ಒಮ್ಮೆ ಇತ್ಯರ್ಥಗೊಂಡ ಪ್ರಕರಣಗಳನ್ನು ಮರಳಿ ತೆರೆಯಲಾಗುವುದಿಲ್ಲ. ಬಳಿಕ ಮೇಲ್ಮನವಿಗೂ ಅವಕಾಶವಿಲ್ಲ ಎಂಬಂಥ ಅಂಶಗಳು ಕಾಯ್ದೆಯಲ್ಲಿರುವುದರಿಂದ ತೆರಿಗೆ ಬಾಕಿಯಿಟ್ಟವರು ತೆರಿಗೆ ಪಾವತಿಸಿ ನೆಮ್ಮದಿಯಿಂದ ಇರಬಹುದು.
ಅನೇಕ ಪರೋಕ್ಷ ತೆರಿಗೆ ವಿವಾದಗಳನ್ನು ಕಾಲಮಿತಿಯೊಳಗೆ ಬಗೆಹರಿಸಿರುವ “ವಿಶ್ವಾಸ್’ ಸ್ಕೀಂನ ಯಶಸ್ಸಿನಿಂದ ಪ್ರೇರಿತವಾಗಿರುವ ಕೇಂದ್ರ ಸರಕಾರ ಇದೀಗ ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದರ ಜತೆಗೆ ತೆರಿಗೆ ವಿವಾದಗಳ ಸಂಖ್ಯೆಯನ್ನು ಗಣನೀಯವಾಗಿ ತಗ್ಗಿಸುವ ಉದ್ದೇಶದಿಂದ “ವಿವಾದ್ ಸೆ ವಿಶ್ವಾಸ್’ ಎಂಬ ಹೊಸ ಕಾನೂನು ತಂದಿದೆ. ಸಂಸತ್ತಿನ ಉಭಯ ಸದನದಲ್ಲಿ ಅಂಗೀಕಾರಗೊಂಡಿರುವ ಈ ಮಸೂದೆ ರಾಷ್ಟ್ರಪತಿ ಅಂಕಿತ ಬಿದ್ದ ಬಳಿಕ ಅಧಿಕೃತವಾಗಿ ಜಾರಿಗೆ ಬರಲಿದೆ.
ಐದು ಕೋಟಿ ರೂ. ತನಕ ತೆರಿಗೆ ಬಾಕಿ ಇಟ್ಟುಕೊಂಡವರಿಗೆ ಈ ಕಾಯಿದೆ ಅನ್ವಯವಾಗುತ್ತದೆ. ಅಂಥವರು ಮಾ. 31ರೊಳಗೆ ಬಡ್ಡಿ ಮತ್ತು ಚಿಕ್ಕ ಮೊತ್ತದ ದಂಡ ಪಾವತಿಸಿ ಕಾನೂನು ಕ್ರಮಗಳಿಂದ ಪಾರಾಗಬಹುದು ಎಂದು ಸರಕಾರ ಕಾಯಿದೆಯ ಉದ್ದೇಶವನ್ನು ವಿವರಿಸಿದೆ. ಪ್ರಸಕ್ತ ಸಂದರ್ಭದಲ್ಲಿ ಈ ಕಾಯಿದೆಗೆ ಬಹಳ ಮಹತ್ವವಿದೆ. ಇದು ತೆರಿಗೆ ಸಂಗ್ರಹವನ್ನು ಹೆಚ್ಚಿಸುವುದಲ್ಲದೆ ವಿವಿಧ ನ್ಯಾಯಾಲಯಗಳು ಮತ್ತು ನ್ಯಾಯ ಮಂಡಳಿಗಳಲ್ಲಿ ಬಾಕಿಯಿರುವ ತೆರಿಗೆ ಸಂಬಂಧಿ ವ್ಯಾಜ್ಯಗಳನ್ನು ಕಡಿಮೆಗೊಳಿಸುವ ಉದ್ದೇಶವನ್ನೂ ಹೊಂದಿದೆ.
ಒಂದು ಸಮೀಕ್ಷೆ ಪ್ರಕಾರ ಹೈಕೋರ್ಟ್, ಸುಪ್ರೀಂ ಕೋರ್ಟ್ ಮತ್ತು ನ್ಯಾಯಮಂಡಳಿಗಳು ಸೇರಿದಂತೆ ವಿವಿಧ ನ್ಯಾಯಾಲಯಗಳಲ್ಲಿ ಪ್ರತಿ ವರ್ಷ ಅಂದಾಜು ತಲಾ ಒಂದೂವರೆ ಲಕ್ಷದಷ್ಟು ನೇರ ತೆರಿಗೆ ಮತ್ತು ಪರೋಕ್ಷ ತೆರಿಗೆ ಪ್ರಕರಣಗಳು ವಿಚಾರಣೆಗೆ ಬಾಕಿಯಿರುತ್ತವೆ. 2017ರಲ್ಲಿ ಈ ರೀತಿ ವಿಚಾರಣೆಗೆ ಬಾಕಿಯಿದ್ದ ತೆರಿಗೆಗಳ ಒಟ್ಟು ಮೊತ್ತ 7.6 ಲಕ್ಷ ಕೋ.ರೂ. ಅಂದರೆ ಜಿಡಿಪಿಯ ಶೇ.4.7. ತೆರಿಗೆ ಪ್ರಕರಣಗಳಲ್ಲಿ ತೆರಿಗೆ ಇಲಾಖೆ ಶೇ. 85 ಕೇಸುಗಳೊಂದಿಗೆ ಅತಿದೊಡ್ಡ ಕಕ್ಷಿದಾರ. ಆದರೆ ಶೇ. 65ರಷ್ಟು ಪ್ರಕರಣಗಳಲ್ಲಿ ಇಲಾಖೆಗೆ ಸೋಲಾಗುತ್ತದೆ. ಈ ಅಂಕಿಅಂಶವೇ ತೆರಿಗೆ ಸಂಗ್ರಹ ವ್ಯವಸ್ಥೆಯ ಕಾರ್ಯನಿರ್ವಹಣೆಯಲ್ಲಿ ಆಮೂಲಾಗ್ರವಾದ ಬದಲಾವಣೆಗಳಾಗಬೇಕು ಎನ್ನುವುದನ್ನು ತಿಳಿಸುತ್ತದೆ.
ಈ ರೀತಿ ಪ್ರತಿ ವರ್ಷ ಲಕ್ಷಗಟ್ಟಲೆ ತೆರಿಗೆ ಪ್ರಕರಣಗಳು ವಿಚಾರಣೆಗೆ ಬಾಕಿಯಿರುವುದರಿಂದ ಆರ್ಥಿಕ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ. ಇಷ್ಟು ಮಾತ್ರವಲ್ಲದೆ ನ್ಯಾಯಾಲಯಗಳ ಮತ್ತು ನ್ಯಾಯ ಮಂಡಳಿಗಳ ಕಾರ್ಯಭಾರ ಹೆಚ್ಚುತ್ತಿದೆ. ಕಾನೂನು ಹೋರಾಟಕ್ಕಾಗಿ ಸರಕಾರ ಪ್ರತಿ ವರ್ಷ ಹಲವು ಕೋಟಿ ರೂಪಾಯಿಗಳನ್ನು ಖರ್ಚು ಮಾಡಬೇಕಾಗುತ್ತದೆ. ಪರೋಕ್ಷವಾಗಿ ಹೊಸ ಯೋಜನೆಗಳ ಪ್ರಾರಂಭ ಮತ್ತು ಹೂಡಿಕೆಯ ಮೇಲೂ ಪ್ರತಿಕೂಲ ಪರಿಣಾಮಗಳಾಗುತ್ತವೆ. ತೆರಿಗೆ ತಗಾದೆಗಳಿಂದಾಗಿಯೇ ಸುಮಾರು 52,000 ಕೋ. ರೂ. ಮೂಲ ಸೌಕರ್ಯ ಯೋಜನೆಗಳು ನನೆಗುದಿಗೆ ಬಿದ್ದಿದೆ ಎಂದು ತಿಳಿಸುತ್ತದೆ ಈ ಸಮೀಕ್ಷೆ. ಈ ಹಿನ್ನೆಲೆಯಲ್ಲಿ ತೆರಿಗೆ ವಿವಾದಗಳನ್ನು ನ್ಯಾಯಾಲಯದ ಹೊರಗೆ ಬಗೆಹರಿಸಿಕೊಳ್ಳಲು ಅವಕಾಶ ನೀಡುವ ಈ ಕಾಯಿದೆ ಹೆಚ್ಚು ಅಪೇಕ್ಷಣೀಯವಾಗುತ್ತದೆ.
ಬಾಕಿಯಿರುವ ತೆರಿಗೆಯನ್ನು ಪಾವತಿಸಲು ಮಾ. 31 ಕೊನೆಯ ದಿನಾಂಕ ಎಂದು ಹೇಳಲಾಗಿದ್ದರೂ ಈ ಕುರಿತು ಚಿಕ್ಕದೊಂದು ಗೊಂದಲ ಉಳಿದಿದೆ. ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಜೂ.30ರ ತನಕ ತೆರಿಗೆ ಪಾವತಿಸಲು ಅವಕಾಶವಿದೆ ಎಂದು ಹೇಳಿದ್ದರು. ಅಲ್ಲದೆ ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿರುವ ಜಾಹೀರಾತಿನಲ್ಲೂ ಜೂ.30 ಅಂತಿಮ ದಿನಾಂಕ ಎನ್ನುತ್ತಿದೆ. ಹೀಗಾಗಿ ಸರಕಾರ ಈ ಬಗ್ಗೆ ಸ್ಪಷ್ಟೀಕರಣ ನೀಡುವ ಅಗತ್ಯವಿದೆ.
ವಿವಾದ್ ಸೆ ವಿಶ್ವಾಸ್‌ನಿಂದ ಸರಕಾರಕ್ಕೆ ಮಾತ್ರವಲ್ಲದೆ ತೆರಿಗೆ ಬಾಕಿಯಿಟ್ಟವರಿಗೂ ಕೆಲವು ಲಾಭಗಳಿವೆ. ಒಂದು ಸಲ ಇತ್ಯರ್ಥಗೊಂಡ ಪ್ರಕರಣಗಳನ್ನು ಮರಳಿ ತೆರೆಯಲಾಗುವುದಿಲ್ಲ, ಇತ್ಯರ್ಥಗೊಂಡ ಬಳಿಕ ಮೇಲ್ಮನವಿಗೂ ಅವಕಾಶವಿಲ್ಲ ಈ ಮುಂತಾದ ಅಂಶಗಳು ಕಾಯಿದೆಯಲ್ಲಿರುವುದರಿಂದ ತೆರಿಗೆ ಬಾಕಿಯಿಟ್ಟವರು ಒಮ್ಮೆ ತೆರಿಗೆ ಪಾವತಿಸಿ ನೆಮ್ಮದಿಯಿಂದ ವ್ಯವಹಾರಗಳನ್ನು ಮುಂದುವರಿಸಬಹುದು. ಹೀಗಾಗಿ ವಿವಾದ್ ಸೆ ವಿಶ್ವಾಸ್ ಉದ್ಯಮಿಗಳ ವಿಶ್ವಾಸ ವರ್ಧನೆಗೆ ಸಹಕಾರಿ ಎನ್ನಬಹುದು.