Advertisement

ತ್ರೈಮಾಸಿಕದಲ್ಲಿ ನಿರೀಕ್ಷೆ ಮೂಡಿಸದ ತೆರಿಗೆ ಸಂಗ್ರಹ

11:40 PM Aug 30, 2019 | Lakshmi GovindaRaj |

ಬೆಂಗಳೂರು: ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಮುಖ ಆದಾಯ ಮೂಲಗಳಾದ ಮೋಟಾರು ವಾಹನ ತೆರಿಗೆ ಹಾಗೂ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಆದಾಯ ಇಳಿಕೆಯಾಗಿರುವುದು ಆತಂಕ ಮೂಡಿಸಿದೆ.

Advertisement

ವಾಣಿಜ್ಯ ತೆರಿಗೆ ಸರಾಸರಿ ಆದಾಯ ಸಂಗ್ರಹದಲ್ಲೂ ಇಳಿಮುಖವಾಗಿದೆ. ಅಬಕಾರಿ ತೆರಿಗೆ ಸಂಗ್ರಹ ಮಾತ್ರ ಆಶಾದಾಯಕವಾಗಿದ್ದು, ಮೊದಲ ತ್ರೈಮಾಸಿಕದ ಮೂರು ತಿಂಗಳಲ್ಲೂ ಏರುಮುಖವಾಗಿದೆ. ಒಟ್ಟಾರೆ ಮೂರು ತಿಂಗಳಲ್ಲಿ ನಾಲ್ಕೂ ಪ್ರಮುಖ ಆದಾಯ ಮೂಲಗಳಿಂದ ಆದಾಯ ಸಂಗ್ರಹವು ನಿರೀಕ್ಷಿತ ಅಂದಾಜು ಪ್ರಮಾಣಕ್ಕಿಂತ ಕಡಿಮೆಯಿರುವುದು ಸರ್ಕಾರದ ಆರ್ಥಿಕ ಸ್ಥಿತಿ ಮೇಲೆ ಅಲ್ಪಾವಧಿ ಪರಿಣಾಮ ಬೀರುವುದೇ ಎಂಬುದನ್ನು ಕಾದು ನೋಡಬೇಕಿದೆ.

ರಾಜ್ಯ ಸರ್ಕಾರಕ್ಕೆ ವಾಣಿಜ್ಯ ತೆರಿಗೆ, ಅಬಕಾರಿ, ಮೋಟಾರು ವಾಹನ ತೆರಿಗೆ ಹಾಗೂ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಆದಾಯವೇ ಸಂಪನ್ಮೂಲ ಸಂಗ್ರಹಕ್ಕೆ ಮೂಲವಾಗಿದೆ. ಈ ಆದಾಯದ ಆಧಾರದ ಮೇಲೆ ರಾಜ್ಯದ ಆರ್ಥಿಕ ಸ್ಥಿತಿ ಅವಲಂಬಿತವಾಗಿದೆ. ಆದರೆ 2019-2020ನೇ ಸಾಲಿನ ಮೊದಲ ತ್ರೈಮಾಸಿಕ ಅವಧಿಯಲ್ಲಿನ ತೆರಿಗೆ ಸಂಗ್ರಹ ಆಶಾದಾಯಕವಾಗಿ ಕಾಣುತ್ತಿಲ್ಲ.

ಪ್ರಮುಖವಾದ ವಾಣಿಜ್ಯ ತೆರಿಗೆ ಮೂಲದಿಂದ ಏಪ್ರಿಲ್‌ನಲ್ಲಿ 5613 ಕೋಟಿ ರೂ. ಸಂಗ್ರಹವಾಗಿದ್ದು, ಮೇ ತಿಂಗಳಲ್ಲಿ 4443 ಕೋಟಿ ರೂ.ಗೆ ಇಳಿಕೆಯಾಗಿದೆ. ಜೂನ್‌ನಲ್ಲಿ 4615 ಕೋಟಿ ರೂ. ಸಂಗ್ರಹವಾಗಿದೆ. ಅಂದರೆ ಏಪ್ರಿಲ್‌ನ ಸಂಗ್ರಹಕ್ಕೆ ಹೋಲಿಸಿದರೆ ಮೇ ಹಾಗೂ ಜೂನ್‌ನಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಸರಾಸರಿ ಪ್ರಮಾಣ 1000 ಕೋಟಿ ರೂ.ನಷ್ಟು ಇಳಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಜೂನ್‌ನಲ್ಲಿ ಶೇ.25ರಷ್ಟು ಬೆಳವಣಿಗೆ ನಿರೀಕ್ಷೆಯಿದ್ದರೂ ಶೇ.15.7 ಮಾತ್ರ ಏರಿಕೆ ಕಂಡಿದೆ.

ಮೋಟಾರು ವಾಹನ ತೆರಿಗೆಯೂ ಇಳಿಕೆ: ಮೋಟಾರು ವಾಹನ ತೆರಿಗೆ ಮೂಲದಿಂದ ಏಪ್ರಿಲ್‌, ಮೇ, ಜೂನ್‌ನಲ್ಲಿ ಕ್ರಮವಾಗಿ 424 ಕೋಟಿ ರೂ., 565 ಕೋಟಿ ರೂ., 487 ಕೋಟಿ ರೂ. ಸಂಗ್ರಹವಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ತೆರಿಗೆ ಸಂಗ್ರಹ ಬೆಳವಣಿಗೆ ಪ್ರಮಾಣವು ಕ್ರಮವಾಗಿ ಶೇ.14.3, ಶೇ. 3.7 ಹಾಗೂ ಶೇ. 1.1ರಷ್ಟಿದೆ. ಮೇ ತಿಂಗಳಿಗೆ ಹೋಲಿಸಿದರೆ ಜೂನ್‌ನಲ್ಲಿ ಈ ಮೂಲದಿಂದ ಸಂಗ್ರಹವಾದ ಆದಾಯದಲ್ಲಿ 78 ಕೋಟಿ ರೂ.ನಷ್ಟು ಆದಾಯ ಇಳಿಕೆಯಾಗಿದೆ.

Advertisement

ಮುದ್ರಾಂಕ ಮತ್ತು ನೋಂದಣಿ ಶುಲ್ಕ ಸಂಗ್ರಹದಲ್ಲೂ ಏರುಪೇರಾಗಿದೆ. ಏಪ್ರಿಲ್‌ನಲ್ಲಿ 677 ಕೋಟಿ ರೂ. ಸಂಗ್ರಹವಾಗಿದ್ದರೂ ನಿರೀಕ್ಷಿತ ಶೇ.5.7ರಷ್ಟು ಬೆಳವಣಿಗೆ ಗುರಿಗೆ ಪ್ರತಿಯಾಗಿ ಋಣಾತ್ಮಕ 11.6ರಷ್ಟಕ್ಕೆ ಇಳಿದಿರುವುದು ಕಂಡುಬಂದಿದೆ. ಮೇ ತಿಂಗಳಲ್ಲಿ 1022 ಕೋಟಿ ರೂ. ಸಂಗ್ರಹವಾಗಿದ್ದು, ಜೂನ್‌ನಲ್ಲಿ 989 ಕೋಟಿ ರೂ. ಸಂಗ್ರಹವಾಗಿದೆ. ಜೂನ್‌ನಲ್ಲಿ ಶೇ. 22.7ರಷ್ಟು ಬೆಳವಣಿಗೆ ಗುರಿಯಿದ್ದರೂ ಶೇ.15ರಷ್ಟು ಬೆಳವಣಿಗೆ ಸಾಧಿಸಲಷ್ಟೇ ಸಾಧ್ಯವಾಗಿದೆ.

ಅಬಕಾರಿ ತೆರಿಗೆ ಆಶಾದಾಯಕ: ಅಬಕಾರಿ ತೆರಿಗೆ ಸಂಗ್ರಹವು ಆಶಾದಾಯಕವಾಗಿದ್ದು, ಏಪ್ರಿಲ್‌ನಿಂದ ಜೂನ್‌ವರೆಗೆ ತೆರಿಗೆ ಸಂಗ್ರಹವೂ ನಿರಂತರವಾಗಿ ಏರಿಕೆಯಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಏಪ್ರಿಲ್‌ನಲ್ಲಿ ಶೇ.6.2ರಷ್ಟು ಬೆಳವಣಿಗೆ ಗುರಿ ಮೀರಿ ಶೇ.14.9ರಷ್ಟು ಬೆಳವಣಿಗೆ ದಾಖಲಿಸಿದೆ. ಅಬಕಾರಿ ತೆರಿಗೆ ಮೂಲದಿಂದ ಮೂರು ತಿಂಗಳಲ್ಲಿ ಒಟ್ಟು 5,760 ಕೊಟಿ ರೂ. ಸಂಗ್ರಹವಾಗಿದೆ.

ಒಟ್ಟಾರೆ ಮೊದಲ ತ್ರೈಮಾಸಿಕವು ತೆರಿಗೆ ಆದಾಯ ಸಂಗ್ರಹ ದೃಷ್ಟಿಯಿಂದ ರಾಜ್ಯ ಸರ್ಕಾರಕ್ಕೆ ಆಶಾದಾಯಕವಾದಂತೆ ಕಾಣುತ್ತಿಲ್ಲ. ಮೊದಲ ತ್ರೈಮಾಸಿಕ ಅವಧಿಯಲ್ಲಿ ಲೋಕಸಭಾ ಚುನಾವಣೆ ಪ್ರಕ್ರಿಯೆ ಜತೆಗೆ ವಾಹನ ಖರೀದಿ, ವ್ಯಾಪಾರ- ವಹಿವಾಟು ಪ್ರಮಾಣ ತುಸು ಇಳಿಕೆಯಾಗಿರುವ ಹಿನ್ನೆಲೆಯಲ್ಲಿ ತೆರಿಗೆ ಸಂಗ್ರಹವೂ ಇಳಿಮುಖವಾಗಿರುವ ಸಾಧ್ಯತೆ ಇದೆ ಎಂದು ಆರ್ಥಿಕ ತಜ್ಞರು ಹೇಳುತ್ತಾರೆ.

ಪ್ರಸಕ್ತ ವರ್ಷದ ಮೊದಲ ತ್ರೈಮಾಸಿಕದಲ್ಲಿ ಅಬಕಾರಿ ತೆರಿಗೆ ಆದಾಯ ಸಂಗ್ರಹ ಉತ್ತಮವಾಗಿದೆ. ಉಳಿದ ತೆರಿಗೆ ಮೂಲಗಳಿಂದಲೂ ಮುಂದಿನ ದಿನಗಳಲ್ಲಿ ಉತ್ತಮ ಆದಾಯ ನಿರೀಕ್ಷಿಸಲಾಗಿದೆ. ಸಾಮಾನ್ಯವಾಗಿ ಮೊದಲ ತ್ರೈಮಾಸಿಕದಲ್ಲಿ ತೆರಿಗೆ ಸಂಗ್ರಹ ತುಸು ಕಡಿಮೆಯಿರುತ್ತದೆ. ಹಣಕಾಸು ವರ್ಷ ಪೂರ್ಣಗೊಳ್ಳುವ ಹೊತ್ತಿಗೆ ನಿರೀಕ್ಷಿತ ಆದಾಯ ಸಂಗ್ರಹವಾಗುವ ವಿಶ್ವಾಸವಿದೆ ಎಂದು ಹಣಕಾಸು ಇಲಾಖೆ ಉನ್ನತ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಸಿಕವಾರು ತೆರಿಗೆ ಸಂಗ್ರಹ ವಿವರ
ಮೂಲ ಏಪ್ರಿಲ್‌ ಮೇ ಜೂನ್‌
ವಾಣಿಜ್ಯ ತೆರಿಗೆ 5613 4443 4615
ಅಬಕಾರಿ 1303 2052 2405
ಮೋಟಾರು ವಾಹನ ತೆರಿಗೆ 424 565 487
ಮುದ್ರಾಂಕ ಮತ್ತು ನೋಂದಣಿ 677 1022 989

* ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next