ಕಾರ್ಕಳ: ಸರಕಾರದ ಬೊಕ್ಕಸ ತುಂಬುವ ವಾಣಿಜ್ಯ ತೆರಿಗೆ ಇಲಾಖೆಯ ಕಾರ್ಕಳ ಕಚೇರಿಯಲ್ಲಿ ಆದಾಯ ತೆರಿಗೆ ಸಂಗ್ರಹಕ್ಕೂ ಅಧಿಕಾರಿ, ಸಿಬಂದಿ ಇಲ್ಲ. ಸಿಬಂದಿ ಕೊರತೆಯಿಂದ ತೆರಿಗೆ ಸಂಗ್ರಹದ ಬೆಳವಣಿಗೆ ದರ ಕುಂಠಿತವಾಗುವ ಸ್ಥಿತಿಗೆ ತಲುಪಿದೆ.
ವಾಣಿಜ್ಯ ಇಲಾಖೆ ಸ್ವತಂತ್ರ ಕಚೇರಿ ನಗರದ ಪೊಲೀಸ್ ಠಾಣೆ ಮುಂಭಾಗದಲ್ಲಿ ಕಾರ್ಯಾಚರಿಸುತ್ತಿದೆ. ಸ್ಥಳೀಯ ಸರಕು ಮತ್ತು ಸೇವಾ ತೆರಿಗೆ ಹಾಗೂ ಆಡಿಟ್ ಇವೆರಡೂ ಒಂದೇ ಕಚೇರಿಯಲ್ಲಿ ಪ್ರತ್ಯೇಕವಾಗಿ ನಡೆಯುತ್ತಿದೆ. ಕಚೇರಿಗೆ ಮಂಜೂರಾತಿಗೊಂಡ ಒಟ್ಟು ಹುದ್ದೆಗಳು 21. ಇದರಲ್ಲಿ 1 ಹುದ್ದೆ ಮಾತ್ರ ಖಾಯಂ ಇದೆ. ಅದು ಕೂಡ ಎಫ್ಡಿಎ ಆಗಿದ್ದು, ಉಳಿದ 20 ಹುದ್ದೆಗಳು ಕೂಡ ಖಾಲಿ ಬಿದ್ದಿವೆ. ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತರು-1, ವಾಣಿಜ್ಯ ತೆರಿಗೆ ಪರಿವೀಕ್ಷಕರು-2, ಪ್ರಥಮ ದರ್ಜೆ ಸಹಾಯಕ ಹುದ್ದೆ-2, ದ್ವಿತೀಯ ದರ್ಜೆ ಸಹಾಯಕ- 6, ಗ್ರೂಪ್ ‘ಡಿ’ ಹುದ್ದೆ -4, ಬಿಲ್ ಕಲೆಕ್ಟರ್ 2, ಟೈಪಿಸ್ಟ್ 2, ಹುದ್ದೆಗಳು ಸೇರಿ ಒಟ್ಟು 20 ಹುದ್ದೆಗಳು ಖಾಲಿ ಇವೆ.
ಕಚೇರಿಯಲ್ಲಿ ಈ ಹಿಂದೆ ಕರ್ತವ್ಯ ನಿರ್ವಹಿಸುತಿದ್ದ ವಾಣಿಜ್ಯ ತೆರಿಗೆ ಸಹಾಯಕ ಆಯುಕ್ತ ಅಧಿಕಾರಿ ಜನವರಿಯಲ್ಲಿ ನಿವೃತ್ತರಾಗಿದ್ದು, ಬಳಿಕ ಈ ಪ್ರಮುಖ ಹುದ್ದೆ ಖಾಲಿಯಿದೆ. ಎಫ್ಡಿಎ ಕರ್ತವ್ಯದಲ್ಲಿರುವವರೂ ಅನಾರೋಗ್ಯ ನಿಮಿತ್ತ ವಿಶ್ರಾಂತಿಯಲ್ಲಿದ್ದಾರೆ. ಉಡುಪಿಯ ವಾಣಿಜ್ಯ ತೆರಿಗೆ ಕಚೇರಿಯ ಸಹಾಯಕ ಆಯುಕ್ತರೇ ಇಲ್ಲಿ ವಾಣಿಜ್ಯ ತೆರಿಗೆ ಸಂಗ್ರಹ ಹಾಗೂ ಅಡಿಟ್ ಕಚೇರಿ ಇವೆರಡಕ್ಕೂ ಇನ್‌ಜಾರ್ಜ್ ಅಧಿಕಾರಿಯಾಗಿದ್ದಾರೆ. ಗುತ್ತಿಗೆ ಆಧಾರಿತವಾಗಿ ಏಜೆನ್ಸಿಗಳ ಮೂಲಕ ನೇಮಕ ಗೊಂಡ 6 ಮಂದಿ ಸಿಬಂದಿ 4 ಹಾಗೂ 2 ಎಂಬಂತೆ ಎರಡು ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಚೇರಿಯಲ್ಲಿ ಸೀಮಿತವಿರುವ ಸಿಬಂದಿ ಏಕಕಾಲದಲ್ಲಿ ಗೈರಾದಲ್ಲಿ ಕಚೇರಿಗೆ ಬೀಗ ಹಾಕುವ ಸನ್ನಿವೇಶ ಎದುರಾಗುತ್ತದೆ. ಸಿಬಂದಿ ಅತೀವ ತೀವ್ರ ಒತ್ತಡಕ್ಕೆ ಸಿಲುಕಿದ್ದಾರೆ. ಮನೆಗೆ ಲ್ಯಾಪ್‌ಟಾಪ್ ಕೊಂಡು ಹೋಗಿ ಅಲ್ಲಿಯೂ ರಾತ್ರಿಯೆಲ್ಲ ಕುಳಿತು ಕೆಲಸ ಮಾಡಬೇಕಾಗುತ್ತದೆ. ಕೆಲಸ ಮಾಡುವುದಕ್ಕೆ ಸ್ವಂತ ಪಾಸ್‌ವರ್ಡ್ ಕೂಡ ಇವರಿಗಿಲ್ಲ. ಅಧಿಕಾರಿಗಳ ಕೋಡ್ ಬಳಸಿಯೇ ಕೆಲಸ ಮಾಡಬೇಕಾಗುತ್ತದೆ.
ಕಾರ್ಕಳದಲ್ಲಿ ಮಾಸಿಕ ಸರಾಸರಿ 3 ಕೋ.ರೂ. ತೆರಿಗೆ ಸಂಗ್ರಹ ಹಿಂದಿನ ವರ್ಷದ ತೆರಿಗೆ ಸಂಗ್ರಹದಲ್ಲಿ ರಾಜ್ಯ ಸರಕಾರದ ಒಟ್ಟು ಆದಾಯದ 81 ಸಾ. ಕೋ.ರೂ. ವಾಣಿಜ್ಯ ತೆರಿಗೆ ಇಲಾಖೆ ಮೂಲಕ ಸರಕಾರಕ್ಕೆ ಸಂಗ್ರಹವಾಗಿತ್ತು. ದ್ವಿತೀಯ ಸ್ಥಾನದಲ್ಲಿ ಆರ್‌ಟಿಒ 21 ಸಾವಿರ ಕೋ.ರೂ., ಅಬಕಾರಿ ಇಲಾಖೆ 8 ಸಾವಿರ ಕೋ.ರೂ. ಇನ್ನಿತರ ಇಲಾಖೆಗಳಿಂದ ತೆರಿಗೆ ಸಂಗ್ರಹವಾಗಿತ್ತು. ಹಣಕಾಸು ನಿಯಂತ್ರಣದಡಿ ಇರುವ ಕಾರ್ಕಳ ತೆರಿಗೆ ಸಂಗ್ರಹ ಕಚೇರಿಯಲ್ಲಿ ಮಾಸಿಕ ಸರಾಸರಿ ಸುಮಾರು 3 ಕೋ.ರೂ. ತೆರಿಗೆ ಸಂಗ್ರಹವಾಗುತ್ತದೆ. ಇಂತಹ ವಾಣಿಜ್ಯ ತೆರಿಗೆ ಕಾರ್ಕಳ ಕಚೇರಿಯಲ್ಲಿ ಆವಶ್ಯಕ ಸಿಬಂದಿ ಕೊರತೆ ಇದೆ.
ಎಲ್ಲವೂ ಆನ್‌ಲೈನ್ ಮೂಲಕ ಪ್ರಕ್ರಿಯೆಗಳು ನಡೆದರೂ, ಪರಿಶೀಲನೆ ಇತ್ಯಾದಿಗಳಿಗೆ ಸಿಬಂದಿಯ ಕೊರತೆಯಿಂದ ಅಡಚಣೆಯಾಗುತ್ತಿದೆ. ಜಿಎಸ್‌ಟಿ ವಾಪಸಾತಿಗೆ ತೊಡಕಾಗುತ್ತಿದೆ. ಇದರಿಂದ ಎಲ್ಲವೂ ನಿಧಾನಗತಿಯಲ್ಲಿ ನಡೆದು ದೀರ್ಘಾವಧಿ ಹಿಡಿಯುತ್ತದೆ. ಮುಖ್ಯವಾಗಿ ಇನ್‌ಸ್ಪೆಕ್ಟರ್ ಹಾಗೂ ಬಿಲ್ ಕಲೆಕ್ಟರ್ ಹುದ್ದೆಗಳು ಭರ್ತಿಯಾಗದೆ ಇರುವುದರಿಂದ ತೆರಿಗೆ ಸಂಗ್ರಹದ ಬೆಳವಣಿಗೆ ದರ ಕೂಡ ಗಣನೀಯವಾಗಿ ಕಡಿಮೆಯಾಗುತ್ತದೆ ಎನ್ನುತ್ತಾರೆ ಹಿರಿಯ ನಾಗರಿಕರು.
ಸಗಟು ಮತ್ತು ಬಿಡಿ ವ್ಯಾಪಾರಸ್ಥರ ಅಂಗಡಿಗಳಿಗೆ ಭೇಟಿ ನೀಡಿ, ದಾಸ್ತಾನು, ಲೆಕ್ಕದ ಪುಸ್ತಕ, ಒಟ್ಟು ವಹಿವಾಟು ಪರಿಶೀಲಿಸಿ ಬಚ್ಚಿಟ್ಟ ತೆರಿಗೆ ಪತ್ತೆ ಹಚ್ಚುವಲ್ಲಿಯೂ ಹಿನ್ನಡೆಯಾಗುತ್ತಿದೆ. ವ್ಯಾಪಾರಸ್ಥರ ಮೇಲೆ ನಿಗಾ ಇಡುವ, ನೊಟೀಸ್ ಜಾರಿ ಮಾಡುವುದಕ್ಕೂ ಸಮಸ್ಯೆಯಾಗುತ್ತಿದೆ. ಗುಪ್ತಚರ ವಿಭಾಗ ಉಡುಪಿಯಲ್ಲೆ ಬಾಕಿ ವಾಣಿಜ್ಯ ತೆರಿಗೆ ಕಚೇರಿ, ಆಡಿಟ್ ಕಚೇರಿಗಳ ಜತೆ ಎರಡು ಇಂಟಲಿಜೆನ್ಸ್ ಕೇಂದ್ರ ಕೂಡ ಕಾರ್ಕಳಕ್ಕೆ ಬಂದಿದ್ದರೂ ಸಿಬಂದಿಯಿಲ್ಲದೆ ಅದು ಕೂಡ ಕಾರ್ಯಭಾರ ಮಾಡುತ್ತಿಲ್ಲ. ಈ ವಿಭಾಗಗಳು ಉಡುಪಿಯಲ್ಲೇ ಉಳಿದಿವೆ. ಬೆಂಗಳೂರಿನ ಕಮಿಷನರ್ ವ್ಯಾಪ್ತಿಯಲ್ಲಿ ವಾಣಿಜ್ಯ ತೆರಿಗೆ ಕಚೇರಿಯ ನಿಯಂತ್ರಣವಿದೆ. ಮಂಗಳೂರಿನಲ್ಲಿ ಡಿವಿಜನಲ್ ಕಚೇರಿ ಹೊಂದಿದೆ.ಕಾರ್ಕಳ ಕಚೇರಿಗೆ ಅಧಿಕಾರಿ, ಸಿಬಂದಿಯ ನೇಮಕ ಹಾಗೂ ಗುಪ್ತಚರ ಕಚೇರಿಗಳು ಇಲ್ಲಿ ಕಾರ್ಯಾರಂಭಿಸುವ ಕಡೆ ಜನಪ್ರತಿನಿಧಿಗಳು ಇಚ್ಚಾಶಕ್ತಿ ವ್ಯಕ್ತಪಡಿಸಬೇಕೆನ್ನುವುದು ಹಿರಿಯ ನಾಗರಿಕರ ಆಗ್ರಹವಾಗಿದೆ.
ನೇಮಕಾತಿ ಆಗುತ್ತಿಲ್ಲ
ಕೆಪಿಎಸ್‌ಸಿಯಿಂದ ನೇಮಕಾತಿ ಆಗುತ್ತಿಲ್ಲ . ಈ ಕಾರಣಕ್ಕೆ ತೊಡಕಾಗಿ, ಸಿಬಂದಿ ಕೊರತೆಯಿದೆ. ನೇಮಕಾತಿಗಾಗಿ ಎದುರು ನೋಡುತ್ತಿದ್ದೇವೆ. ಮಂಗಳೂರು ವಿಭಾಗದಲ್ಲೇ ಸಿಬಂದಿ ಕೊರತೆಯಿದೆ.
–ಮೀರಾ ಸುರೇಶ್ ಪಂಡಿತ್, ಜಂಟಿ ಕಮಿಷನರ್, ವಾಣಿಜ್ಯ ಇಲಾಖೆ, ಮಂಗಳೂರು ವಿಭಾಗ
– ಬಾಲಕೃಷ್ಣ ಭೀಮಗುಳಿ