ಬೆಂಗಳೂರು: ವಾಣಿಜ್ಯ ತೆರಿಗೆ, ಅಬಕಾರಿ ತೆರಿಗೆ, ಮುದ್ರಣ ಮತ್ತು ನೋಂದಣಿ ಶುಲ್ಕ ಮೂಲದಿಂದ ರಾಜ್ಯದ ತೆರಿಗೆ ಸಂಗ್ರಹ ಉತ್ತಮವಾಗಿದೆ. ಹೊಸ ವಾಹನ ಖರೀದಿ ಪ್ರಮಾಣ ಇಳಿಕೆಯಿಂದ ವಾಹನ ನೋಂದಣಿ ಆದಾಯ ತುಸು ಕಡಿಮೆ ಯಿದೆ. ಆರ್ಥಿಕ ವರ್ಷದ ಅಂತ್ಯದ ವೇಳೆಗೆ ನಿಗದಿತ ತೆರಿಗೆ ಸಂಗ್ರಹವಾಗುವ ವಿಶ್ವಾಸವಿದೆ.
ವಿಧಾನಸೌಧದಲ್ಲಿ ಬುಧವಾರ ವಾಣಿಜ್ಯ ತೆರಿಗೆ ಇಲಾಖೆ, ಅಬಕಾರಿ ಇಲಾಖೆ, ಸಾರಿಗೆ ಇಲಾಖೆ, ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಪ್ರಗತಿ ಪರಿಶೀಲನ ಸಭೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ವಿವರ ನೀಡಿದರು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಈವರೆಗೆ ಬಹುತೇಕ ತೆರಿಗೆ ಮೂಲದ ಆದಾಯ ಉತ್ತಮವಾಗಿದೆ. ವಾಣಿಜ್ಯ ತೆರಿಗೆ ಇಲಾಖೆಯಿಂದ ಪ್ರಸಕ್ತ ವರ್ಷದಲ್ಲಿ 76,046 ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಿದ್ದು, ಈವರೆಗೆ 33,618 ಕೋಟಿ ರೂ. ಸಂಗ್ರಹವಾಗಿದೆ. ಇದು ವಾರ್ಷಿಕ ಗುರಿಯ ಶೇ. 44.2ರಷ್ಟಿದೆ ಎಂದು ಹೇಳಿದರು.
ಕಳೆದ ವರ್ಷ ಇದೇ ಅವಧಿಯ ತೆರಿಗೆ ಸಂಗ್ರಹಕ್ಕೆ ಹೋಲಿಸಿದರೆ ಶೇ. 20.3ರಷ್ಟು ಹೆಚ್ಚಳವಾಗಿದೆ. ಜಿಎಸ್‌ಟಿ ಸಂಗ್ರಹದಲ್ಲೂ ಶೇ.14.3ರಷ್ಟು ಬೆಳವಣಿಗೆ ಯಾಗಿದೆ. ಜಿಎಸ್‌ಟಿ ಜಾರಿಯಾದಾಗ 4.51 ಲಕ್ಷ ವ್ಯಾಪಾರ- ವಹಿ ವಾಟುದಾರರು ನೋಂದಣಿ ಮಾಡಿಕೊಂಡಿದ್ದರು. ಈಗ ಜಿಎಸ್‌ಟಿಯಡಿ ನೋಂದಾಯಿಸಿ ಕೊಂಡವರ ಸಂಖ್ಯೆ 8,16,573ಕ್ಕೆ ಏರಿಕೆಯಾಗಿದೆ. ಆ ಮೂಲಕ ಜಿಎಸ್‌ಟಿ ಯಡಿ ನೋಂದಾಯಿಸಿಕೊಂಡವರ ಸಂಖ್ಯೆ ಶೇ. 100ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದರು.
ಆರ್ಥಿಕ ಸಂಕಷ್ಟದಿಂದ ಸ್ವಲ್ಪ ಹಿನ್ನಡೆ ಯಾಗಿದ್ದರೂ ಇತರ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದ ತೆರಿಗೆ ಸಂಗ್ರಹ ಉತ್ತಮ ಸ್ಥಿತಿ ಯಲ್ಲಿದೆ. ಜಿಎಸ್‌ಟಿ ಪಾವತಿಯಲ್ಲಿ ನಿರ್ಲಕ್ಷ್ಯ ತೋರಿದ 64,000ಕ್ಕೂ ಹೆಚ್ಚು ಸಂಸ್ಥೆಗಳ ಪರವಾನಿಗೆ ರದ್ದುಪಡಿಸಲಾಗಿದೆ. ನಿಯಮಿತ ತಪಾಸಣೆ, ಮೇಲ್ವಿಚಾರಣೆ ಮೂಲಕ ತೆರಿಗೆ ಸಂಗ್ರಹದಲ್ಲಿ ವ್ಯತ್ಯಯವಾಗದಂತೆ ಎಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ಅಬಕಾರಿ ತೆರಿಗೆ ಆದಾಯ ಹೆಚ್ಚಳ
ಅಬಕಾರಿ ಇಲಾಖೆಯಲ್ಲಿ ಪ್ರಸಕ್ತ ಆರ್ಥಿಕ ವರ್ಷದಲ್ಲಿ 20,950 ಕೋಟಿ ರೂ. ತೆರಿಗೆ ಸಂಗ್ರಹ ಗುರಿಯಿದ್ದು, ಕಳೆದ ಎ.1ರಿಂದ ಆ.30ರ ವರೆಗೆ 9,145.36 ಕೋಟಿ ರೂ. ಸಂಗ್ರಹವಾಗಿದೆ. ಆ ಮೂಲಕ ಶೇ.43.65ರಷ್ಟು ಗುರಿ ಸಾಧನೆಯಾಗಿದೆ ಎಂದು ಯಡಿಯೂರಪ್ಪ ಮಾಹಿತಿ ನೀಡಿದರು.