Advertisement

ತೈಲೋತ್ಪನ್ನ: ಜನರಿಗೆ ತೆರಿಗೆ ಹೊರೆ

11:05 PM Mar 27, 2021 | Team Udayavani |

ಆದಾಯ, ವೆಚ್ಚ, ತೈಲೋತ್ಪನ್ನಗಳು ಮತ್ತು ಇತರ ಅಗತ್ಯ ವಸ್ತುಗಳ ಬೆಲೆ ಏರಿಕೆ…ಇವು ಇದೀಗ ಜನಸಾಮಾನ್ಯರ ದೈನಂದಿನ ಚರ್ಚೆಯ ವಿಷಯಗಳು. ಬೇಸಗೆಯ ಸುಡುಬಿಸಿಲಿನ ಝಳಕ್ಕಿಂತಲೂ ಬೆಲೆ ಏರಿಕೆಯ ಬಿಸಿ ಶ್ರೀಸಾಮಾನ್ಯರನ್ನು ಹೆಚ್ಚು ತಟ್ಟತೊಡಗಿದೆ. ಕಳೆದ ವರ್ಷವಿಡೀ ಕೊರೊನಾದಿಂದಾಗಿ ಕಂಗೆಟ್ಟಿದ್ದ ಜನಸಾಮಾನ್ಯರು ಮೈಕೊಡವಿ ಎದ್ದುನಿಲ್ಲುವ ಪ್ರಯತ್ನದಲ್ಲಿರುವಾಗಲೇ ಬೆಲೆ ಏರಿಕೆ ಹೊಡೆತ ನೀಡಿದೆ. ಬೆಲೆ ಏರಿಕೆಗೆ ಸರಕಾರ ಬೆಟ್ಟು ಮಾಡುತ್ತಿರುವುದು ಕಚ್ಚಾ ತೈಲ ಬೆಲೆ ಹೆಚ್ಚಳದತ್ತ. ವಾಸ್ತವವಾಗಿ ಕಳೆದ ಏಳು ವರ್ಷಗಳಲ್ಲಿ ಸರಕಾರವು ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ತೆರಿಗೆಯನ್ನು ಸಾಮಾನ್ಯ ಜನರ ಆದಾಯಕ್ಕಿಂತ ಹಲವು ಪಟ್ಟು ಹೆಚ್ಚಿ ಸುವ ಮೂಲಕ ಭಾರೀ ಪ್ರಮಾಣದ ರಾಜಸ್ವವನ್ನು ಸಂಗ್ರಹಿಸಿತು. ಕಳೆದ 6 ವರ್ಷಗಳಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ನಿಂದ ತೆರಿಗೆ ಸಂಗ್ರಹವು ಶೇ. 300ರಷ್ಟು ಹೆಚ್ಚಾಗಿದೆ ಎಂದು ಕೇಂದ್ರ ಸರಕಾರವೇ ಲೋಕಸಭೆಗೆ ತಿಳಿಸಿದೆ.

Advertisement

ಎಷ್ಟಿತ್ತು? ಎಷ್ಟಾಯಿತು?
2014ರ ಮೇ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದಾಗ ಒಂದು ಲೀಟರ್‌ ಪೆಟ್ರೋಲ್‌ ಮೇಲಿನ ತೆರಿಗೆ 10.38 ರೂ. ಮತ್ತು ಈಗ ಅದು 32.90 ರೂ.ಗಳಿಗೆ ಏರಿಕೆಯಾಗಿದೆ. 2014ರ ಮೇ ತಿಂಗಳಲ್ಲಿ ಡೀಸೆಲ್‌ ಮೇಲೆ ಸರಕಾರ ಲೀ. ಗೆ 4.52 ರೂ. ತೆರಿಗೆ ವಿಧಿಸುತ್ತಿತ್ತು. ಅದು ಈಗ 31.80 ರೂ. ಗಳಿಗೆ ಏರಿಕೆಯಾಗಿದೆ. 2014ರ ಮೇಯಲ್ಲಿ ಲೀಟರ್‌ ಪೆಟ್ರೋಲ್‌ ಬೆಲೆ 71.41 ರೂ. ಮತ್ತು ಡೀಸೆಲ್‌ ಲೀ. ಗೆ 56.71 ರೂ. ಇದ್ದರೆ, ಈಗ ರಾಜಧಾನಿ ದಿಲ್ಲಿಯಲ್ಲಿ ಪೆಟ್ರೋಲ್‌ ಬೆಲೆ ಲೀ. ಗೆ 91.17 ರೂ. ಗಳಿಗೆ ಮತ್ತು ಡೀಸೆಲ್‌ ಬೆಲೆ ಲೀ. ಗೆ 81.47 ರೂ. ಗಳಿಗೆ ಏರಿಕೆಯಾಗಿದೆ. ಈ ಅವಧಿಯಲ್ಲಿ ಪೆಟ್ರೋಲ್‌ ಸುಮಾರು ಶೇ. 30ರಷ್ಟು ಮತ್ತು ಡೀಸೆಲ್‌ ಸುಮಾರು ಶೇ. 45ರಷ್ಟು ದುಬಾರಿಯಾಗಿದೆ. ಆದರೆ ಅದರ ಮೇಲಿನ ತೆರಿಗೆ ಶೇ. 220ರಷ್ಟು (ಪೆಟ್ರೋಲ…) ಮತ್ತು ಶೇ. 600ರಷ್ಟು (ಡೀಸೆಲ…) ಹೆಚ್ಚಾಗಿದೆ.

ನಿಮ್ಮ ಆದಾಯ ಮತ್ತು ಸರಕಾರದ ಆದಾಯ
ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ಅಬಕಾರಿ ಸುಂಕದ ಮೂಲಕ ಕೇಂದ್ರ ಸರಕಾರ 2014-15ರಲ್ಲಿ ಒಟ್ಟು 72,160 ಕೋ. ರೂ. ಗಳಿಸಿದೆ. ಆದರೆ 2020-21ರ 10 ತಿಂಗಳುಗಳ ಅವಧಿಯಲ್ಲಿ ಸರಕಾರ 2.94 ಲಕ್ಷ ಕೋಟಿ ರೂ. ಗಳಿಸಿದೆ. ಮತ್ತೂಂದೆಡೆ ಜನರ ಆದಾಯ 2014 ಮತ್ತು 2021ರ ನಡುವೆ ಶೇ. 36ರಷ್ಟು ಮಾತ್ರವೇ ಹೆಚ್ಚಾಗಿದೆ. ಸರಕಾರದ ಅಂಕಿ-ಅಂಶಗಳ ಪ್ರಕಾರ 2014-15ರಲ್ಲಿ ತಲಾ ಆದಾಯವು ವಾರ್ಷಿಕವಾಗಿ 72,889 ರೂ.ಗಳಾಗಿದ್ದರೆ ಇದು 2020-21ರಲ್ಲಿ 99,155 ರೂ.ಗಳಿಗೆ ಏರಿಕೆಯಾಗಿದೆ.

ಜನಸಾಮಾನ್ಯರಿಗೆ ಪೆಟ್ಟು
ದೇಶದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ನ ಬಳಕೆ ಸಾರಿಗೆ ಮತ್ತು ಕೃಷಿ ಕ್ಷೇತ್ರಗಳಲ್ಲಿ ಹೆಚ್ಚಿದೆ. ದೇಶದಲ್ಲಿ ಇವೆ ರಡೂ ಜನಸಾಮಾನ್ಯರಿಗೆ ಸಂಬಂಧಿಸಿದ ಕ್ಷೇತ್ರಗಳಾಗಿವೆ. ಆದ್ದರಿಂದ ಪೆಟ್ರೋಲ್‌, ಡೀಸೆಲ್‌ ಬೆಲೆ ಹೆಚ್ಚಳ ಈ ವರ್ಗದ ಜನತೆಯ ಮೇಲೆ ಭಾರೀ ಹೊಡೆತವನ್ನು ನೀಡುತ್ತದೆ. ಡೀಸೆಲ್‌ ಬೆಲೆ ಏರಿಕೆಯಾದರೆ ಅದು ಕೃಷಿ ಕ್ಷೇತ್ರಕ್ಕೆ ಕೊಡಲಿಯೇಟೇ ಸರಿ. ಇದು ಜನಸಾಮಾನ್ಯರ ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ.

ತಲಾ ಆದಾಯದಲ್ಲಿ ಇಳಿಕೆ!
ಕಳೆದ ಒಂದು ವರ್ಷದಲ್ಲಿ ದೇಶದ ತಲಾ ಆದಾಯವು ಸುಮಾರು ಶೇ. 9ರಷ್ಟು ಕಡಿಮೆಯಾಗಿದೆ. 2019-20ರಲ್ಲಿ ತಲಾ ಆದಾಯವು ವಾರ್ಷಿಕ 1.08 ಲಕ್ಷ ರೂಪಾಯಿಗಳಾಗಿತ್ತು. ಇದು 2020-21ರಲ್ಲಿ 99,155 ರೂ.ಗಳಿಗೆ ಇಳಿಕೆಯಾಗಿದೆ. ಅದೇ ಸಮಯದಲ್ಲಿ ಕೇಂದ್ರ ಸರಕಾರವು 2019ರ ಎಪ್ರಿಲ್‌ನಿಂದ 2020ರ ಮಾರ್ಚ್‌ ನಡುವೆ ಪೆಟ್ರೋಲ್‌ ಮತ್ತು ಡೀಸೆಲ್‌ ತೆರಿಗೆಯಿಂದ 2.39 ಲಕ್ಷ ಕೋಟಿ ರೂ. ಗಳಿಸಿದೆ. 2020-21ರ ಮೊದಲ 10 ತಿಂಗಳುಗಳಲ್ಲಿ 2.94 ಲಕ್ಷ ಕೋಟಿ ರೂ. ಅಂದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷದ 10 ತಿಂಗಳಲ್ಲಿ ಸರಕಾರ ಪೆಟ್ರೋಲ್‌ ಮತ್ತು ಡೀಸೆಲ್‌ನಿಂದ ಶೇ. 23ರಷ್ಟು ಹೆಚ್ಚು ಆದಾಯ ಗಳಿಸಿದೆ.

Advertisement

ಕಚ್ಚಾ ತೈಲ ಅಗ್ಗ; ಇಂಧನ ತುಟ್ಟಿ
ಕಚ್ಚಾ ತೈಲ ಬೆಲೆ ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆಯ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. 2014ರ ಮೇ ತಿಂಗಳಲ್ಲಿ ಎನ್‌ಡಿಎ ಅಧಿಕಾರಕ್ಕೆ ಬಂದಾಗ ಕಚ್ಚಾ ತೈಲದ ಬೆಲೆ ಬ್ಯಾರಲ್‌ಗೆ 106.85 ಡಾಲರ್‌ಗಳಷ್ಟಿತ್ತು. ಬಳಿಕದ ವರ್ಷಗಳಲ್ಲಿ ಅದು 63 ಡಾಲರ್‌ಗೆ ಇಳಿಕೆಯಾಗಿತ್ತು. ಆದರೆ ಕಚ್ಚಾ ತೈಲದ ಬೆಲೆ ಕಡಿಮೆಯಾದರೂ ಇಂಧನ ದರವನ್ನು ಸರಕಾರ ಕಡಿಮೆ ಮಾಡದೇ ತೆರಿಗೆ ಹೆಚ್ಚಿಸುತ್ತಲೇ ಹೋಯಿತು.

Advertisement

Udayavani is now on Telegram. Click here to join our channel and stay updated with the latest news.

Next