Advertisement

ಯುವಶಕ್ತಿಗೆ “5ಜಿ’ಸ್ಪೀಡ್‌; ಉದ್ಯೋಗ ಸೃಷ್ಟಿಯ ದೂರದೃಷ್ಟಿಯ ಕ್ರಮ

07:27 PM Feb 01, 2023 | Team Udayavani |

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನವೋದ್ಯಮಗಳ ಅಭಿವೃದ್ಧಿಗೆ ಮಹತ್ತರ ಕೊಡುಗೆ ನೀಡಿದೆ. ಈ ಬಾರಿಯ ದೇಶದ ಅಮೃತಕಾಲದ ಆಯವ್ಯಯದಲ್ಲೂ ಯುವಸಮೂಹ ಉದ್ಯಮಗಳಲ್ಲಿ ತೊಡಗಿಸಿಕೊಳ್ಳಲು ಅನುವಾಗುವ ನಿಟ್ಟಿನಲ್ಲಿ, ಅಪ್ಲಿಕೇಶನ್‌ ಅಭಿವೃದ್ಧಿಗೆ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ 100 ಪ್ರಯೋಗಾಲಯ, ಕೃತಕ ಬುದ್ಧಿಮತ್ತೆ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಘೋಷಿಸಿದೆ.

Advertisement

ಈಗಾಗಲೇ ಭಾರತ ನವೋದ್ಯಮಗಳ ಸ್ಥಾಪನೆಯಲ್ಲಿ ಮುಂದಿದ್ದು, ದೇಶದ ಯುವಜನತೆಗೆ ಉದ್ಯೋಗ ಸೃಷ್ಟಿಸುವುದಷ್ಟೇ ಅಲ್ಲ, ಅವರನ್ನು ಉದ್ಯಮಿಗಳನ್ನಾಗಿಸಬೇಕು ಎನ್ನುವ ಸದುದ್ದೇಶದಿಂದ ಹಲವು ಯೋಜನೆಗಳನ್ನು ಕೈಗೊಂಡಿದೆ.ನವೋದ್ಯಮಿಗಳ ಉನ್ನತಿಗಾಗಿ ಸರ್ಕಾರದ ಮುಂದುವರಿದ ಯೋಜನೆಗಳ ಭಾಗವಾಗಿ 5ಜಿ ಸೇವೆ ಬಳಸಿ ಅಪ್ಲಿಕೇಶನ್‌ ಅಭಿವೃದ್ಧಿಪಡಿಸಲು 100 ಲ್ಯಾಬ್‌ಗಳ ಸ್ಥಾಪನೆಗೆ ಪ್ರಸ್ತಾಪಿಸಲಾಗಿದೆ. ಇದರಿಂದ ದೇಶದ ಸಾವಿರಾರು ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲೇ, ಉದ್ಯಮ ಸ್ಥಾಪನೆಯ ತರಬೇತಿ ಪಡೆಯಲು ನೆರವಾಗಲಿದೆ

ಯಾವೆಲ್ಲ ಅಪ್ಲಿಕೇಶನ್‌ ಅಭಿವೃದ್ಧಿ? :ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಸ್ಥಾಪನೆಗೊಳ್ಳಲಿರುವ 100 ಲ್ಯಾಬ್‌ಗಳಲ್ಲಿ ವಿದ್ಯಾರ್ಥಿಗಳು 5ಜಿ ಸೇವೆಗಳನ್ನು ಬಳಸಲಿದ್ದಾರೆ. ಈ ಮೂಲಕ ಸ್ಮಾರ್ಟ್‌ ತರಗತಿಗಳ ಅಪ್ಲಿಕೇಶನ್‌, ಕೃಷಿ ಚಟುವಟಿಕೆಗಳಿಗೆ ಪೂರಕವಾಗುವ ಅಪ್ಲಿಕೇಶನ್‌, ಅತ್ಯಾಧುನಿಕ ಸಾರಿಗೆ ವ್ಯವಸ್ಥೆ ಹಾಗೂ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ಅಪ್ಲಿಕೇಶನ್‌ ಮತ್ತು ಆರೋಗ್ಯ ಸಂರಕ್ಷಣೆಗೆ ಪೂರಕವಾಗುವ ಅಪ್ಲಿಕೇಶನ್‌ಗಳನ್ನು ಅಭಿವೃದ್ಧಿ ಪಡಿಸಲಿದ್ದಾರೆ.

ಉದ್ಯೋಗ ಸಮರ್ಥ್ಯ ಹೆಚ್ಚಳಕ್ಕೆ ಅನುವು : ಪ್ರಸ್ತಾಪಿತ ಯೋಜನೆಯು ವಿದ್ಯಾರ್ಥಿಗಳಿಗೆ ಸಂಶೋಧನೆ, ನಾವೀನ್ಯತೆಯ ಹೊಸ ಮಜಲುಗಳನ್ನು ಸೃಷ್ಟಿಸಿಕೊಡಲಿದೆ. ಅಲ್ಲದೇ, ಹೊಸ ಅವಕಾಶಗಳ ಅನಾವರಣ, ಉದ್ಯಮಗಳ ಮಾದರಿ ಹಾಗೂ ಉದ್ಯೋಗ ಸಾಮರ್ಥ್ಯವನ್ನು ಅರಿತುಕೊಳ್ಳಲು ಅನುವು ಮಾಡಿಕೊಡಲಿದೆ.

“ಲ್ಯಾಬ್‌’ ನಲ್ಲೇ ವಜ್ರ ಬೆಳೆಯಿರಿ
– 5 ವರ್ಷದ ಅವಧಿಗೆ ಐಐಟಿಗೆ ಅನುದಾನ
– ಎಲ್‌ಜಿಡಿ ಸಂಶೋಧನೆ, ಅಭಿವೃದ್ಧಿಗೆ ಸಹಕಾರಿ
– ಡೈಮಂಡ್‌ ಸೀಡ್ಸ್‌ ಕಸ್ಟಮ್ಸ್‌ ಶುಲ್ಕ ಇಳಿಕೆ
ತಂತ್ರಜ್ಞಾನ, ನಾವೀನ್ಯತೆಯ ಜತೆಗೆ ಹೇರಳ ಉದ್ಯೋಗವಕಾಶವನ್ನು ಒದಗಿಸಲಿರುವ ಪ್ರಯೋಗಾಲಯ ನಿರ್ಮಿತ ವಜ್ರ ಕ್ಷೇತ್ರದ ಕಾರ್ಯಚಟುವಟಿಕೆ ವಿಸ್ತರಿಸಲು ಸರ್ಕಾರ ಆಸಕ್ತಿ ವಹಿಸಿದೆ. ಈ ನಿಟ್ಟಿನಲ್ಲಿ ದೇಶದಲ್ಲಿ ಯಾವುದಾದರೂ ಒಂದು ಐಐಟಿಗೆ 5 ವರ್ಷಗಳ ಅವಧಿಗೆ ಲ್ಯಾಬ್‌ ನಿರ್ಮಿತ ವಜ್ರಗಳ (ಎಲ್‌ಜಿಡಿ) ಸಂಶೋಧನೆ, ಅಭಿವೃದ್ಧಿ ಹಾಗೂ ಉತ್ಪಾದನೆಗಾಗಿ ಅನುದಾನ ನೀಡುವುದಾಗಿ ಘೋಷಿಸಿದೆ.

Advertisement

ನೈಸರ್ಗಿಕವಾಗಿ ವಜ್ರ ಉತ್ಪಾದನೆಗೆ ಸಹಕಾರಿಯಾಗುವ ಭೂ ವೈಜ್ಞಾನಿಕ ಪ್ರಕ್ರಿಯೆಗಳನ್ನು ಅನುಕರಿಸಿ, ನಿರ್ದಿಷ್ಟ ತಂತ್ರಜ್ಞಾನವನ್ನು ಬಳಸಿ, ನೈಸರ್ಗಿಕ ವಜ್ರಗಳಲ್ಲಿರುವ ಎಲ್ಲಾ ಅಂಶಗಳನ್ನೂ ಒಳಗೊಂಡಿರುವಂಥ ವಜ್ರಗಳನ್ನೇ ಕೃತಕವಾಗಿ ಪ್ರಯೋಗಾಲಯಗಳಲಿ ತಯಾರಿಸಲಾಗುತ್ತದೆ. ಈ ವಜ್ರಗಳು ಪರಿಸರ ಸ್ನೇಹಿಯೂ ಆಗಿದ್ದು, ಈ ಕ್ಷೇತ್ರ ಅಪಾರ ಉದ್ಯೋಗವಕಾಶವನ್ನೂ ಸೃಷ್ಟಿಸಿಕೊಡಲಿದೆ. ಪ್ರಯೋಗಾಲಯ ನಿರ್ಮಿತ ವಜ್ರಗಳ ತಯಾರಿಕೆಗೆ ಡೈಮಂಡ್‌ ಸೀಡ್ಸ್‌ ಹಾಗೂ ಕೆಲವು ನಿರ್ದಿಷ್ಟ ತಂತ್ರಜ್ಞಾನದ ಅಗತ್ಯವಿದ್ದು, ಅವುಗಳನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ಈ ಆಮದು ಅವಲಂಬನೆಯನ್ನು ತಗ್ಗಿಸಲು ಸರ್ಕಾರ ಉದ್ದೇಶಿಸಿದ್ದು, ಎಲ್‌ಜಿಡಿ ತಯಾರಿಕೆಗೆ ಬೇಕಿರುವ ಎಲ್ಲಾ ಸಂಶೋಧನೆ ಮತ್ತು ಅಭಿವೃದ್ಧಿ ಕಾರ್ಯಚಟುವಟಿಕೆಗೆ ಅನುವು ಮಾಡಿಕೊಡಲು ಐಐಟಿಗೆ ಅನುದಾನ ನೀಡಲಾಗುತ್ತಿದೆ.ಅಲ್ಲದೇ, ಡೈಮಂಡ್‌ ಸೀಡ್ಸ್‌ಗಳ ಕಸ್ಟಮ್ಸ್‌ ಶುಲ್ಕವನ್ನು ಇಳಿಕೆ ಮಾಡುವುದರ ಕುರಿತು ಶುಲ್ಕ ಪರಿಶೀಲನೆಯ ಪ್ರಸ್ತಾಪವನ್ನೂ ಘೋಷಿಸಲಾಗಿದೆ.

ಅಂಕಿ ಅಂಶ
100
ಸ್ಥಾಪನೆಗೊಳ್ಳಲಿರುವ ಲ್ಯಾಬ್‌ಗಳು
5 ವರ್ಷ
ಐಐಟಿಗೆ ನೀಡಲಿರುವ ಅನುದಾನ ಅವಧಿ

 

Advertisement

Udayavani is now on Telegram. Click here to join our channel and stay updated with the latest news.

Next