ಕೇಂದ್ರ ಸರ್ಕಾರ ಈ ಬಾರಿ ಸಂಪೂರ್ಣ ಯಾಂತ್ರಿಕ ತೆರಿಗೆ ವಿಶ್ಲೇಷಣೆ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಿರುವುದು ತೆರಿಗೆದಾರರ ಹಿತದೃಷ್ಟಿಯಿಂದ ಅತ್ಯಂತ ಪ್ರಮುಖ ಸಂಗತಿಯಾಗಿದೆ. ಇದರಿಂದ ತೆರಿಗೆ ವಿಶ್ಲೇಷಣೆಯಲ್ಲಿ ಅಕ್ರಮಗಳು ಹಾಗೂ ಮಾನವ ಸಹಜ ದೋಷಗಳ ಪ್ರಮಾಣ ಕಡಿಮೆಯಾಗುವುದಲ್ಲದೇ, ತೆರಿಗೆ ವಿಶ್ಲೇಷಣೆ ಪ್ರಕ್ರಿಯೆ ದಕ್ಷ ಹಾಗೂ ತ್ವರಿತವಾಗುತ್ತದೆ.
ಈಗಿನ ತಂತ್ರಜ್ಞಾನ ಕ್ಷೇತ್ರದಲ್ಲಿ ಇಂಥದ್ದೊಂದು ಕ್ರಮ ಅತ್ಯಂತ ಪ್ರಶಂಸಾರ್ಹವಾದದ್ದು, ಇನ್ನುಳಿದಂತೆ ಮಧ್ಯಮ ವರ್ಗದ ತೆರಿಗೆದಾರರನ್ನು ಖುಷಿಪಡಿಸಲು ಮುಂದಾಗಿರುವ ಸರ್ಕಾರ 45 ಲಕ್ಷ ರೂ. ಮೌಲ್ಯದ ಮನೆ ಖರೀದಿದಾರರಿಗೆ ತೆರಿಗೆ ರಿಯಾಯಿತಿ ಘೋಷಿಸಿದೆ. ಇದರಿಂದ ಮಧ್ಯಮ ವರ್ಗದವರ ಮನೆ ಕನಸು ನನಸಾಗಲಿದೆ. ಸರ್ಕಾರದ ಎಲ್ಲರಿಗೂ ಸೂರು ಒದಗಿಸುವ ಯೋಜನೆಯ ಅಡಿಯಲ್ಲಿ ಮಹತ್ವದ ಹೆಜ್ಜೆಯೂ ಹೌದು.
ದೇಶದಲ್ಲಿ ಆರ್ಥಿಕ ಶಿಸ್ತನ್ನು ಕಾಪಾಡಿಕೊಳ್ಳಲು ಸರ್ಕಾರ ಈ ಬಾರಿ ಹೆಚ್ಚಿನ ಒತ್ತು ನೀಡುತ್ತಿದೆ. ಇದರೊಂದಿಗೆ ಸಹಜವಾಗಿಯೇ, ಮೂಲಸೌಕರ್ಯ, ಅರೋಗ್ಯ ಮತ್ತು ಶಿಕ್ಷಣ ಕ್ಷೇತ್ರಕ್ಕೂ ಒತ್ತು ನೀಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇ. 3.3 ಕ್ಕೆ ಇಳಿಸುವ ಗುರಿ ಹೊಂದಲಾಗಿದ್ದು, ಈ ಹಿಂದೆ ಇದು ಶೇ. 3.4 ಇರಲಿದೆ ಎಂದು ಅಂದಾಜು ಮಾಡಲಾಗಿತ್ತು.
3 ಕೋಟಿ ಸಣ್ಣ ವ್ಯಾಪಾರಿಗಳಿಗೆ ಪಿಂಚಣಿ ಘೋಷಿಸಿರುವ ಕೇಂದ್ರ ಸರ್ಕಾರದ ಕ್ರಮ ಅತ್ಯಂತ ಮಹತ್ವದ್ದಾಗಿದ್ದು, ಇದು ಸಹಜವಾಗಿಯೇ ದೇಶದ ವ್ಯಾಪಾರೋದ್ಯಮಕ್ಕೆ ಉತ್ತೇಜನ ನೀಡಲಿದೆ. ಸ್ಟಾರ್ಟಪ್‌ಗ್ಳು ದೇಶವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುತ್ತಿದ್ದು, ಇವುಗಳಿಗೆ ಪೂರಕ ವಾತಾವರಣವನ್ನು ಒದಗಿಸುವ ನಿಟ್ಟಿನಲ್ಲಿ ಆದಾಯ ತೆರಿಗೆ ಪರಿಶೀಲನೆಯಿಂದ ವಿನಾಯಿತಿ ನೀಡಲಾಗಿದೆ.
ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಯನ್ನು ಸುಲಭಗೊಳಿಸಲು ಕೇಂದ್ರ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದ್ದು, ರಿಟರ್ನ್ಸ್ ಸಲ್ಲಿಕೆಗೆ ಪ್ಯಾನ್ ಕಡ್ಡಾಯವಲ್ಲ ಎಂಬ ಆದೇಶ ಹೊರಡಿಸಿದೆ.
ಈವರೆಗೆ ತೆರಿಗೆ ಸಂಬಂಧಿ ಬಹುತೇಕ ಎಲ್ಲ ವಹಿವಾಟುಗಳಿಗೂ ಪ್ಯಾನ್ ಕಡ್ಡಾಯವಾಗಿತ್ತು. ಆದರೆ ಈಗ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಿರುವುದರಿಂದ ಪ್ಯಾನ್ ಅನ್ನು ರಿಟರ್ನ್ಸ್ ಸಲ್ಲಿಕೆಯಲ್ಲಿ ನೀಡಲೇಬೇಕೆಂದಿಲ್ಲ. ಆಧಾರ್ ನೀಡಿದರೂ ತೆರಿಗೆ ರಿಟರ್ನ್ಸ್ ಸಲ್ಲಿಸಬಹುದು.
* ರಮೇಶ ಕಟ್ಟ, ತೆರಿಗೆ ಸಲಹೆಗಾರರು