ಹರಪನಹಳ್ಳಿ: ನಾಗರ ಪಂಚಮಿ ದಿನ ಮನೆ ಮನೆಗೆ ತೆರಳಿ ಸಹೋದರಿಯೊಬ್ಬರು ತವರಿನ ಉಡುಗೊರೆ ನೀಡುವ ಕಾರ್ಯ ಮಾಡಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ದಿ| ಎಂ.ಪಿ. ಪ್ರಕಾಶ್ ಅವರ ಹಿರಿಯ ಪುತ್ರಿ, ಕ್ಷೇತ್ರದ ಮಾಜಿ ಶಾಸಕ ದಿ|ಎಂ.ಪಿ.ರವೀಂದ್ರ ಅವರ ಸಹೋದರಿ, ಕೆಪಿಸಿಸಿ ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು ನಾಗರ ಪಂಚಮಿ ದಿನ ತಾಲೂಕಿನ ಹಿರೇಮೇಗಳಗೆರೆ ಗ್ರಾಮದ ಸುಮಾರು 1250ಕ್ಕೂ ಹೆಚ್ಚು ಪ್ರತಿ ಮನೆ ಮೆನಗೆ ತೆರಳಿ ಮಹಿಳೆಯರಿಗೆ ಉಂಡಿ, ಕುಪ್ಪಸ, ಅರಿಷಿಣ ಕುಂಕುಮ, ಬಳೆ ವಿತರಿಸಿದ್ದಾರೆ.
ಪಂಚಮಿ ಮಹಿಳೆಯರಿಗೆಂದೇ ರೂಪಿಸಿದ ಹಬ್ಬವಾಗಿದ್ದು, ಎರಡು ಮೂರು ದಿನ ಅವಳ ಸಡಗರ ಸಂಭ್ರಮ ಅನಿರ್ವಚನೀಯ. ರೊಟ್ಟಿ ಹಬ್ಬ, ಹಾಲು ಹಾಕಲು ಸುಮಾರು 4-5 ದಿನಗಳ ಮೊದಲೇ ಸಿದ್ದತೆ ಆರಂಭವಾಗುತ್ತದೆ. ಮನೆಯಲ್ಲಿ ಉಂಡಿ-ಚಕ್ಕುಲಿ ಮೊದಲಾದ ಭಕ್ಷಗಳ ಘಮಘಮವಿರುತ್ತದೆ. ಹೀಗಾಗಿ ಮನೆಯ ಹೆಣ್ಣು ಮಕ್ಕಳಿಗೆ ಬಿಡುವೆಂಬುದೇ ಇಲ್ಲ. ಹೊಸ ಬಟ್ಟೆ ತೊಟ್ಟು ಕೈಯಲ್ಲಿ ಪೂಜಾ ಸಾಮಗ್ರಿ, ನೈವೇದ್ಯಕ್ಕೆ ಭಕ್ಷಗಳೊಂದಿಗೆ ನಾಗರ ಕಟ್ಟೆಗೆ ಹೋಗಿ ಹಾಲು ಎರೆಯುವ ಪ್ರಕ್ರಿಯೆ ನಡೆಯುತ್ತದೆ. ಇಂತಹ ಸಂಭ್ರಮದಲ್ಲಿ ನಾನು ಭಾಗಿಯಾಗಬೇಕು ಎನ್ನುವ ಉದ್ದೇಶದಿಂದ ಎಲ್ಲ ಮನೆಗೂ ತೆರಳಿ ಉಡಿ ತುಂಬಿದ್ದೇನೆ. ಬೇರೆ ಯಾವುದೇ ಉದ್ದೇಶದಿಂದ ಈ ಕಾರ್ಯ ಮಾಡುತ್ತಿಲ್ಲ ಎಂದು ಎಂ.ಪಿ.ಲತಾ ಮಲ್ಲಿಕಾರ್ಜುನ್ ಇದೇ ವೇಳೆ ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಎಲ್.ಹನುಮಂತಪ್ಪ, ಮಾಜಿ ಉಪಾಧ್ಯಕ್ಷ ದೊಡ್ಡಜ್ಜರ ಹನುಮಂತಪ್ಪ, ಅಂಗಡಿ ಚಂದ್ರಪ್ಪ, ಎಲ್.ಗಂಗಾಧರಪ್ಪ, ಕಂಚೀಕೆರೆ ಕೆಂಚಪ್ಪ, ತಾ.ಪಂ ಮಾಜಿ ಸದಸ್ಯೆ ಕಂಚೀಕೆರೆ ಜಯಲಕ್ಷ್ಮಿ, ರವಿ ಯುವ ಶಕ್ತಿ ಪಡೆ ಅಧ್ಯಕ್ಷ ಯಡಿಹಳ್ಳಿ ಉದಯಶಂಕರ್, ಕಾರ್ಯದರ್ಶಿ ಮತ್ತೂರು ಬಸವರಾಜ್, ಜೀಷಾನ್, ಇರ್ಫಾನ್ ಮುದಗಲ್, ಗಾಯತ್ರಮ್ಮ, ಪುರಸಭೆ ಮಾಜಿ ಸದಸ್ಯೆ ಕವಿತಾ ಸುರೇಶ್, ವೆಂಕಟೇಶ್ ಮತ್ತಿತರರು ಇದ್ದರು.
ಹರಪನಹಳ್ಳಿ ತಾಲೂಕು ಈಚೆಗೆ ದಾವಣಗೆರೆ ಜಿಲ್ಲೆಯಿಂದ ಬೇರ್ಪಟ್ಟು ಬಳ್ಳಾರಿ ಜಿಲ್ಲೆಗೆ ಸೇರಿಕೊಂಡಿದೆ. ಹಿರೇಮೇಗಳಗೆರೆ ಗ್ರಾಮ ದಾವಣಗೆರೆ ನಗರದಿಂದ ಕೂಗಳೆತೆ ದೂರದಲ್ಲಿದೆ. ಸುಮಾರು 180 ಕಿಮೀ ದೂರದ ಬಳ್ಳಾರಿಗೆ ಹೋಗಬೇಕು ಎಂಬ ಭಾವನೆ ಇಲ್ಲಿಯ ಜನರ ಮನಸ್ಸಿನಲ್ಲಿ ಮನೆ ಮಾಡಿದೆ. ನಾವು ಈ ಹಿಂದೆ ಕೂಡ ಬಳ್ಳಾರಿ ಜಿಲ್ಲೆಯಲ್ಲಿದ್ದು, ಇದೀಗ ಪುನಃ ಮಾತೃ ಜಿಲ್ಲೆ ಮಡಿಲು ಸೇರಿಕೊಂಡಿದ್ದೇವೆ ಎಂಬ ಭಾವನೆ ಇಲ್ಲಿಯ ಜನರಲ್ಲಿ ಮೂಡಿಸಲು ಹಾಗೂ ಸಹೋದರ ರವೀಂದ್ರನ ಸ್ಥಾನದಲ್ಲಿ ನಿಂತು ಹಿರೇಮೇಗಳಗೆರೆ ಗ್ರಾಮದಲ್ಲಿ ಮಹಿಳೆಯರಿಗೆ ತವರಿನ ಉಡುಗೊರೆ ನೀಡುವ ಮೂಲಕ ಬೆಸೆಯುವ ಕಾರ್ಯ ಮಾಡಿದ್ದೇನೆ
.•ಎಂ.ಪಿ.ಲತಾ ಮಲ್ಲಿಕಾರ್ಜುನ್, ಕೆಪಿಸಿಸಿ ರಾಜ್ಯ ಮಹಿಳಾ ಕಾರ್ಯದರ್ಶಿ