ತಾವರಗೇರಾ: ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಪಪಂ ಕಚೇರಿ ವರೆಗಿನ ರಸ್ತೆ ಒತ್ತುವರಿಯನ್ನು ತೆರವುಗೊಳಿಸಿ ಒಂದು ವರ್ಷ ಗತಿಸಿದರೂ ರಸ್ತೆ ಸಂಚಾರಕ್ಕೆ ಮುಕ್ತವಾಗಿಲ್ಲ. ಇದರಿಂದಾಗಿ ಪಟ್ಟಣದ ಜನತೆ ರೋಸಿ ಹೋಗಿದ್ದಾರೆ.
ಒಂದು ವರ್ಷದ ಹಿಂದೆ ರಸ್ತೆಯ ಒತ್ತುವರಿ ತೆರವಾಗಿದೆ. ಆದರೆ ರಸ್ತೆ ಅಭಿವೃದ್ಧಿ ಮಾತ್ರ ಇನ್ನೂ ಕಸನಾಗಿಯೇ ಉಳಿದಿದೆ. 2018 ಡಿಸೆಂಬರ್ 31ರಂದು ಬೆಳಗಿನ ಜಾವ ಇದ್ದಕ್ಕಿದ್ದಂತೆ ಪಟ್ಟಣದ ಪ್ರಮುಖ ಬಜಾರ ರಸ್ತೆಯಲ್ಲಿ ಜೆಸಿಬಿ ಅಬ್ಬರಿಸಿ, ಒತ್ತುವರಿ ತೆರವುಗೊಳಿಸಲಾಯಿತು. ಇದಕ್ಕೆ ಆಗ ಕೆಲವರು ವಿರೋಧ ವ್ಯಕ್ತಪಡಿಸಿದ್ದರು. ಒತ್ತುವರಿ ತೆರುವುಗೊಳಿಸಲು ಕಾರ್ಯಚರಣೆಗೆ ರಸ್ತೆ ಇಕ್ಕೆಲಗಳ ಮನೆ ಹಾಗೂ ಅಂಗಡಿಗಳ 14 ಜನ ಮಾಲೀಕರು ತಕರಾರು ಅರ್ಜಿ ಸಲ್ಲಿಸಿ, ಧಾರವಾಡ ನ್ಯಾಯಾಲಯದ ಮೊರೆ ಹೋಗಿದ್ದರು. ಆಗ ನ್ಯಾಯಾಲಯ ಒತ್ತುವರಿ ತೆರವಿಗೆ ತಡೆಯಾಜ್ಞೆ ನೀಡಿತ್ತು. ಇದರಿಂದಾಗಿ ಸುಮಾರು 8 ತಿಂಗಳ ಕಾಲ ರಸ್ತೆ ಕಾಮಗಾರಿ ಸ್ಥಗಿತಗೊಂಡಿತ್ತು.
ನ್ಯಾಯಾಲಯ ಕರ್ನಾಟಕ ಪುರಸಭೆ ಕಾಯ್ದೆ 1964 ರ ನಿಯಮ 82(1)ರ ಪ್ರಕಾರ ಈ ಪ್ರಕರಣವನ್ನು ಜಿಲ್ಲಾ ಧಿಕಾರಿಗಳಿಗೆ ವಹಿಸಿತ್ತು. ಅದರಂತೆ ಅಕ್ಟೊಬರ್ 17ರಂದು ಜಿಲ್ಲಾ ಧಿಕಾರಿಗಳು ಆದೇಶ ನೀಡಿ 15 ದಿನಗಳೊಳಗಾಗಿ ರಸ್ತೆಯ ಎರಡು ಬದಿಯಲ್ಲಿ ಸ್ವಯಂ ಪ್ರೇರಿತವಾಗಿ ತೆರವುಗೊಳಿಸಬೇಕೆಂದು ಆದೇಶಿಸಿದ್ದರು. ಅದರಂತೆ ಕಟ್ಟಡ ಮಾಲೀಕರು ಒತ್ತುವರಿ ಜಾಗೆ ತೆರವುಗೊಳಿಸಿದ್ದಾರೆ. ಆದರೂ ಕೂಡ ಪಪಂ ವತಿಯಿಂದ ಕಾಮಗಾರಿ ಆರಂಭವಾಗದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಚರಂಡಿ ನೀರಲ್ಲಿ ಓಡಾಟ: ಇದು ಪಟ್ಟಣದ ಪ್ರಮುಖ ರಸ್ತೆ ಆಗಿರುವುದರಿಂದ ನಿತ್ಯ ಈ ರಸ್ತೆಯ ಎರಡು ಬದಿಯಲ್ಲಿರುವ ಅಂಗಡಿಗಳಲ್ಲಿ ಬಹುತೇಕ ಎಲ್ಲ ವ್ಯಾಪರ ವಹಿವಾಟು ನಡೆಯುತ್ತದೆ. ದ್ವಿಚಕ್ರ ವಾಹನಗಳು ಸೇರಿದಂತೆ ಲಾರಿ, ಆಟೋ, ಇನ್ನಿತರ ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತವೆ. ಚರಂಡಿ ನೀರಿನ ಸಿಂಚನ ವಾಗುವುದರಿಂದ ಜನ ಈ ರಸ್ತೆಯಲ್ಲಿ ಸಂಚರಿಸಲು ಹಿಂದೇಟು ಹಾಕುತ್ತಿದ್ದಾರೆ. ರಸ್ತೆಯ ಒತ್ತುವರಿ ತೆರವಾಯ್ತು, ಆದರೆ ಅಭಿವೃದ್ಧಿ ಕಾರ್ಯ ಮಾತ್ರ ಇನ್ನೂ ಪ್ರಾರಂಭವಾಗಿಲ್ಲ.
-ಎನ್. ಶಾಮೀದ್