ಔರಾದ: ತಾಲೂಕಿನಲ್ಲಿ ಎರಡು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ಠಾವರಾನಾಯ್ಕ ತಾಂಡಾ ಗ್ರಾಮದ ಕೆರೆ ಒಡೆದು ಹೊಲಗಳಿಗೆ ನೀರು ನುಗ್ಗಿದ ಪರಿಣಾಮ ಅಪಾರ ಹಾನಿಯಾಗಿದ್ದು, ರಸ್ತೆ ಹಾಳಾಗಿ ಗ್ರಾಮ ಸಂಚಾರವೂ ಸ್ಥಗಿತವಾಗಿದೆ.
ತಾಲೂಕಿನ ಕೆರೆ, ಹಳ್ಳ ಕೊಳ್ಳಗಳಲ್ಲಿ ಭರಪೂರ ನೀರು ತುಂಬಿ ಮುಂಗಾರು ಮಳೆ ಎರಡು ದಿನಗಳಲ್ಲಿಯೇ ತಾಲೂಕಿನಲ್ಲಿ ಇತಿಹಾಸ ನಿರ್ಮಿಸಿದೆ. ಈ ವರ್ಷ ಸಕಾಲಕ್ಕೆ ಮಳೆಯಾಗಿದ್ದು, ಸರಿಯಾದ ಸಮಯಕ್ಕೆ ಬಿತ್ತನೆ ಮಾಡಿ ಉತ್ತಮ ಇಳುವರಿ ಪಡೆಯಬಹುದು ಎಂದು ಲೆಕ್ಕಚಾರ ಹಾಕುತ್ತಿದ್ದ ಅನ್ನದಾತರ ಹೊಲಗದ್ದೆಗಳಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ಎರಡೇ ವರ್ಷದಲ್ಲಿ ಒಡೆದ ಕರೆ: ತಾಲೂಕಿನ ಠಾವರನಾಯ್ಕ ತಾಂಡಾದಲ್ಲಿ ಕೆರೆ ನಿರ್ಮಿಸಿದ ಎರಡು ವರ್ಷಗಳಲ್ಲಿಯೇ ಒಡೆದು ರೈತರ ಹೊಲಗಳಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಹಾಗಾಗಿ ಕೆರೆ ಕಾಮಗಾರಿಯು ಗ್ರಾಮಸ್ಥರು ಹಾಗೂ ರೈತರಲ್ಲಿ ಸಂಶಯದ ಮೂಡಿಸಿದೆ. ಕೆರೆ ಒಡೆದ ಪರಿಣಾಮ ಖೀರಾಬಾಯಿ ವಿಲಾಜಿ ಜಾಧವ ಎನ್ನುವವರ 5.12 ಗುಂಟೆ ಹೊಲದ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಅಲ್ಲದೇ 20 ಎಕರೆ ಜಮೀನಿಗೆ ನೀರು ನುಗ್ಗಿ ಅಪಾರ ಹಾನಿಯಾಗಿದೆ.
ನೆಲಕ್ಕುರುಳಿದ ವಿದ್ಯುತ್ ಕಂಬ: ಗುರುವಾರ ರಾತ್ರಿ ಬಿರುಗಾಳಿ ಸಹಿತ ಮಳೆಗೆ ಠಾವರನಾಯ್ಕ ತಾಂಡಾದಲ್ಲಿನ ವಿದ್ಯುತ್ ಕಂಬಗಳು ನೆಲಕ್ಕುರುಳಿ ತಾಂಡಾ ನಿವಾಸಿಗಳು ಕತ್ತಲೆಯಲ್ಲಿ ಕಾಲ ಕಳೆಯಬೇಕಾಗಿದೆ. ನಿಡೋದಾ, ಇಟಗ್ಯಾಳ, ಕಮಲನಗರ, ಮುರುಗ್ ಗ್ರಾಮಗಳಲ್ಲೂ ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಳೆಯ ಅಬ್ಬರಕ್ಕೆ ಠಾವರನಾಯ್ಕ ತಾಂಡಾಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕೂಡ ಕೊಚ್ಚಿಕೊಂಡು ಹೋಗಿದೆ. ನೀಡೋದಾ ಗ್ರಾಮಕ್ಕೆ ಸಂಚಾರ ಕಲ್ಪಿಸುವ ಸೇತುವೆ ಮೇಲಿಂದ ನೀರು ಹರಿದ ಹಿನ್ನೆಲೆಯಲ್ಲಿ ಶುಕ್ರವಾರ ತಾಲೂಕಿನ ಎರಡು ಗ್ರಾಮಗಳ ನಿವಾಸಿಗಳು ಸಂಚಾರಕ್ಕೆ ಪರದಾಡಬೇಕಾಯಿತು.
ರಾವರನಾಯ್ಕ ತಾಂಡಾದ ಹೊಲವೊಂದರಲ್ಲಿನ ಬಾವಿ ಮುಚ್ಚಿವೆ. ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಪೈಪ್‌ಲೈನ್ ಕೂಡ ನೀರಿನ ರಭಸಕ್ಕೆ ಕಿತ್ತುಕೊಂಡು ಹೋಗಿದೆ. ಇದರಿಂದ ತಾಂಡಾ ನಿವಾಸಿಗಳು ಕುಡಿಯುವ ನೀರಿಗಾಗಿ ಅಲೆಯುವ ಸ್ಥಿತಿ ಬಂದಿದೆ.