Advertisement

ತೌಕ್ತೇ ಅಬ್ಬರ ; ಕರಾವಳಿ ಗಡಗಡ

07:40 PM May 16, 2021 | Team Udayavani |

ಕಾರವಾರ: ಕರಾವಳಿಯಲ್ಲಿ ಶನಿವಾರ ತೌಕ್ತೆ ಚಂಡಮಾರುತದ ಪ್ರಭಾವ ಜೋರಾಗಿದ್ದು, ಇಲ್ಲಿಯೂ ಭಾರೀ ಗಾಳಿ-ಮಳೆಯಾಗಿದೆ. ಇದರ ನಡುವೆ ಹಲವೆಡೆ ಕಡಲ್ಕೊರೆತಗಳು ಉಂಟಾಗಿದ್ದು, ಮನೆಗಳಿಗೂ ನೀರು ನುಗ್ಗಿ ಅವಾಂತರ ಸೃಷ್ಟಿಸಿದೆ. ಅಲ್ಲದೇ ವ್ಯಕ್ತಿಯೊಬ್ಬನನ್ನು ಬಲಿ ಪಡೆದಿದೆ.

Advertisement

ತೌಕ್ತೆ ಚಂಡಮಾರುತ ಹಾಗೂ ಅದರೊಟ್ಟಿಗೆ ಭಾರೀ ಮಳೆಯಾಗುವ ಸಾಧ್ಯತೆ ಬಗ್ಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದ ಕಾರಣ ಕಡಲತೀರದ ನಿವಾಸಿಗಳಿಗೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿತ್ತು. ಹವಾಮಾನ ಮುನ್ಸೂಚನೆಯಂತೆ ಕರಾವಳಿಯಾದ್ಯಂತ ಶನಿವಾರ ಭಾರೀ ಮಳೆಯಾಗಿದೆ. ಶುಕ್ರವಾರ ರಾತ್ರಿಯಿಂದಲೇ ಕೆಲವೆಡೆ ಮಳೆ ಸುರಿದಿದ್ದು, ಗದ್ದೆಗಳಲ್ಲೆಲ್ಲ ನೀರು ನಿಂತು ನಷ್ಟವುಂಟಾಗಿದೆ.

ಇನ್ನು ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಗಾಳಿ ರಭಸದಿಂದ ಬೀಸುತ್ತಿರುವ ಕಾರಣ ಅಲೆಗಳು ರೌದ್ರಾವತಾರ ತಾಳಿದ್ದು, ಕಡಲಂಚಿನ ಅನೇಕ ಗ್ರಾಮಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಕಡಲಂಚಿನ ಮನೆಗಳ ನಿವಾಸಿಗಳು ಸಾಮಾನು-ಸರಂಜಾಮು ಉಳಿಸಿಕೊಳ್ಳಲು, ಮನೆಯಿಂದ ನೀರು ಹೊರಹಾಕಲು ಶ್ರಮಪಡುತ್ತಿದ್ದಾರೆ.

ಭಟ್ಕಳ ತಾಲೂಕಿನ ಜಾಲಿ ಸಮುದ್ರ ತೀರವನ್ನು ಡೇಂಜರ್‌ ಝೋನ್‌ ಎಂದು ಘೋಷಿಸಲಾಗಿದ್ದು, ಅಲ್ಲಿನ ನಿವಾಸಿಗಳಿಗೆ ಮುಂಜಾಗ್ರತೆ ವಹಿಸುವಂತೆ ಡಿಸಿ ಸೂಚಿಸಿದ್ದಾರೆ. ಬಂದರ್‌, ಬೆಳಕೆ ಸೇರಿದಂತೆ ಇತರೆಡೆ ಕಡಲಿನ ಅಬ್ಬರ ಜೋರಾಗಿದ್ದು, ಸಮುದ್ರ ಕೊರೆತ ಉಂಟಾಗಿದೆ. ಕರಿಕಲ್‌ ಭಾಗದಲ್ಲಿ ರಕ್ಕಸ ಗಾತ್ರದ ಅಲೆಗಳು ನುಗ್ಗಿವೆ. ಮುರುಡೇಶ್ವರ ಕಡಲತೀರದಲ್ಲಿದ್ದ ಗೂಡಂಗಡಿಗಳಿಗೆ ಅಲೆಗಳು ಅಪ್ಪಳಿಸಿವೆ. ಇನ್ನು ಜಾಲಿಕೋಡಿ ಸಮುದ್ರ ತೀರದಲ್ಲಿ ಲಂಗರು ಹಾಕಿದ್ದ ದೋಣಿ ರಕ್ಷಿಸಲು ಹೋದ ಲಕ್ಷ್ಮಣ ನಾಯ್ಕ (60) ಅಲೆ ಅಪ್ಪಳಿಸಿ ಇನ್ನೊಂದು ದೋಣಿ ಬಡಿದು ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ. ಹೊನ್ನಾವರ ತಾಲೂಕಿನ ಮಂಕಿ ಪಾವಿನಕುರ್ವಾ, ಅಪ್ಸರಕೊಂಡ ಭಾಗದ ನಿವಾಸಿಗಳ ಕಷ್ಟ ಹೇಳತೀರದಾಗಿದೆ.

ಸಮೀಪದ ಗ್ರಾಮಗಳಿಗೆ ಕಡಲ ಅಲೆಗಳು ನುಗ್ಗಿದ್ದು, ನಾಳೆ ಏನಾಗುತ್ತದೆಯೋ ಎಂಬ ಆತಂಕ ಜನರಲ್ಲಿದೆ. ಕುಮಟಾ ಫಿಶ್‌ ಮಾರ್ಕೆಟ್‌, ಚಿತ್ರರಂಜನ್‌ ಟಾಕೀಸ್‌, ವನ್ನಳ್ಳಿ, ಹೊಲನಗದ್ದೆ ಭಾಗಗಳ ಮನೆಗಳಿಗೆ ನೀರು ನುಗ್ಗಿದೆ. ವನ್ನಳ್ಳಿ ಬೀಚ್‌ ರಸ್ತೆ ಮೇಲೆ ರಕ್ಕಸ ಗಾತ್ರದ ಅಲೆಗಳು ಬಡಿಯುತ್ತಿದ್ದು, ಸಮೀಪದ ನಿವಾಸಿಗಳು ಮನೆಯಿಂದ ಹೊರ ಬಂದು ಪಟ್ಟಣ ಪ್ರದೇಶದ ಸಂಬಂಧಿಗಳ ಮನೆ ಸೇರಲು ಕೆಲವರು ಮುಂದಾಗಿದ್ದಾರೆ. ರಾತ್ರಿ ಅಲೆಗಳ ಭೀಕರತೆ ಇನ್ನಷ್ಟು ಹೆಚ್ಚಾಗುವ ಕಾರಣ ಕೆಲವರು ಮನೆಗಳ ಸಾಮಾನು, ಸರಂಜಾಮುಗಳ ಕಥೆ ಏನೆಂದು ದಿಕ್ಕು ತೋಚದೆ ಕುಳಿತುಕೊಂಡಿದ್ದಾರೆ.

Advertisement

ಗೋಕರ್ಣದ ದುಬ್ಬನಶಶಿ, ಮೇನ್‌ ಬೀಚ್‌ ಪ್ರದೇಶಗಳಲ್ಲೂ ಅಲೆಗಳ ಅಬ್ಬರ ಜೋರಾಗಿದೆ. ಅಂಕೋಲಾದ ಹಾರವಾಡದಲ್ಲಿ ಭಾರೀ ಗಾತ್ರದ ಅಲೆಗಳು ದಡಕ್ಕೆ ಅಪ್ಪಳಿಸುತ್ತಿದ್ದು, ಸಮೀಪದ ಗಾಳಿ ಮರಗಳು, ಕಲ್ಲುಗಳು ಸಮುದ್ರದ ಪಾಲಾಗುತ್ತಿವೆ. ಕಾರವಾರದ ಟ್ಯಾಗೋರ್‌ ಕಡಲತೀರದಲ್ಲಂತೂ ಅಲೆಗಳು ಮಕ್ಕಳ ಪಾರ್ಕ್ ವರೆಗೆ ಬಡಿದಿದ್ದು, ಇದರಿಂದ ಇನ್ನಷ್ಟು ಆತಂಕ ಎದುರಾಗಿದೆ. ದೇವಬಾಗದಲ್ಲೂ ಸಮುದ್ರ ಅಪ್ಪಳಿಸುತ್ತಿವೆ. ಒಟ್ಟಾರೆಯಾಗಿ ಜನರಿಗೆ ಇದೀಗ ತೌಕ್ತೆ ಆತಂಕ ಹುಟ್ಟಿಸಿದೆ. ಸದ್ಯ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದ ಭೀತಿ ಇನ್ನಷ್ಟು ಹೆಚ್ಚಾಗಿದ್ದು, ಕರಾವಳಿ ತೀರದ ಜನ ಜಾಗೃತಿ ವಹಿಸುವ ಅನಿವಾರ್ಯತೆ ಇದೆ.

Advertisement

Udayavani is now on Telegram. Click here to join our channel and stay updated with the latest news.

Next