Advertisement

ತೌಕ್ತೆ ಚಂಡ ಮಾರುತ ಪ್ರಭಾವ: ಕಾಪು ಲೈಟ್ ಹೌಸ್ ಸುತ್ತಮುತ್ತಲಿನಲ್ಲಿ ಆತಂಕ

03:07 PM May 15, 2021 | Team Udayavani |

ಕಾಪು : ಅರಬ್ಬಿ ಸಮುದ್ರದಲ್ಲಿ ತೌಕ್ತೆ ಚಂಡ ಮಾರುತದ ಪರಿಣಾಮ ಕಡಲು ರೌದ್ರಾವತಾರ ತಾಳಿದೆ. ಕಾಪು ಲೈಟ್ ಸಮೀಪದಲ್ಲಿ ಕಡಲು ವಿಸ್ತಾರಗೊಂಡಿದ್ದು ಸಮುದ್ರ ತೀರದ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ.

Advertisement

ಸಮುದ್ರ ವಿಸ್ತಾರಗೊಂಡು ಸಮುದ್ರ ಕೊರೆತದ ಭೀತಿ ಎದುರಾಗಿದ್ದು, ಲೈಟ್ ಹೌಸ್ ನ ಸುತ್ತಲೂ ಸಮುದ್ರದ ನೀರು ಆವರಿಸಿಕೊಂಡಿದೆ.

ಕಾಪು ಬೀಚ್ ಸುತ್ತಮುತ್ತಲಿನ ಲೈಟ್ ಹೌಸ್ ವಾರ್ಡ್, ಕೋಟೆ ಕೊಪ್ಪಲ, ಸುಬ್ಬಯ್ಯ ತೋಟ, ಬೈರುಗುತ್ತು ತೋಟ, ಗರಡಿ ವಾರ್ಡ್, ಲಕ್ಷ್ಮೀ ನಗರ ವ್ಯಾಪ್ತಿಯ 30 ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ.

ಘಟನಾ ಪ್ರದೇಶಕ್ಕೆ ಕಾಪು ಶಾಸಕ ಲಾಲಾಜಿ ಮೆಂಡನ್, ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ತಹಶೀಲ್ದಾರ್ ಪ್ರತಿಭಾ ಆರ್., ಪುರಸಭೆ ಮುಖ್ಯಾಧಿಕಾರಿ ವೆಂಕಟೇಶ ನಾವಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಬಾಲಾಜಿ, ಕಾಪು ಗ್ರಾ.ಪಂ. ಮಾಜಿ ಅಧ್ಯಕ್ಷ ವಿಕ್ರಂ ಕಾಪು, ಪುರಸಭೆ ಇಂಜಿನಿಯರ್ ಪ್ರತಿಮಾ, ಗಂಗಾಧರ್ ಸುವರ್ಣ, ನವೀನ್ ಅಮೀನ್, ಗ್ರಾಮ ಕಾರಣಿಕ ವಿಜಯ್ ಮೊದಲಾದವರು ಭೇಟಿ ನೀಡಿದರು.

Advertisement

ಶಾಸಕ ಲಾಲಾಜಿ‌ ಆರ್. ಮೆಂಡನ್ ಮಾತನಾಡಿ, ಕಾಪು ಬೀಚ್ ಮತ್ತು ಲೈಟ್ ಹೌಸ್ ವಾರ್ಡ್ ನಲ್ಲಿ ಕಳೆದ ಮಳೆಗಾಲದಲ್ಲೂ ಇದೇ ರೀತಿಯ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಬಾರಿ ಮತ್ತೆ ಸಮುದ್ರದಿಂದ ಉಕ್ಕಿದ ನೀರು ಎಲ್ಲೆಡೆ ಹರಿಯುತ್ತಿದೆ. ಚಂಡ ಮಾರುತದ ಪರಿಣಾಮದಿಂದಾಗಿ ಈ ರೀತಿಯಾಗಿದ್ದು ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲು ಕ್ರಮ ತೆಗೆದುಕೊಳ್ಳಲಾಗಿದೆ. ಇಲ್ಲಿನ‌ ಸಮಸ್ಯೆ ಪತಿಹರಿಸಲು ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಲಾಗುವುದು. ಜನರ ಪ್ರಾಣ ರಕ್ಷಣೆಯೇ ನಮ್ಮ ಮುಖ್ಯ ಗುರಿಯಾಗಿದೆ ಎಂದರು.‌

ಕಾಪು ತಹಸೀಲ್ದಾರ್ ಪ್ರತಿಭಾ ಆರ್‌. ಮಾತನಾಡಿ, ಜನರ ಪ್ರಾಣ ರಕ್ಷಣೆಗೆ ಪೂರಕವಾಗಿ ತೊಂದರೆಗೊಳಗಾದ ಪ್ರದೇಶದ ಜನರನ್ನು ಸುರಕ್ಷಿತ ಪ್ರದೇಶಗಳಿಗೆ ರವಾನಿಸಲಾಗುವುದು‌. ಕಾಪು ಸುನಾಮಿ ಸೆಂಟರ್ ನಲ್ಲಿ ಗಂಜಿ ಕೇಂದ್ರ ಪ್ರಾರಂಭಿಸಲಾಗಿದ್ದು, ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲೂ ಗಂಜಿ ಕೇಂದ್ರಗಳ ಪ್ರಾರಂಭಕ್ಕೆ ಸೂಚನೆ ನೀಡಲಾಗಿದೆ. ಜನ – ಜಾನುವಾರುಗಳ‌ ರಕ್ಷಣೆಗೆ ವಿಶೇಷ ಒತ್ತು‌ ನೀಡಲಾಗುವುದು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next