ಪಣಂಬೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಚಂಡಮಾರುತ ಏಳುವ ಸಾಧ್ಯತೆಗಳಿವೆ. ಈ ಚಂಡಮಾರುತಕ್ಕೆ “ತೌಕ್ತೇ’ ಎಂದು ಹೆಸರಿಡಲಾಗಿದ್ದು, ಮೀನುಗಾರರಿಗೆ ಸಮುದ್ರಕ್ಕಿಳಿಯದಂತೆ ಸೂಚಿಸಲಾಗಿದೆ.
ಮೇ.16ರ ಸುಮಾರಿಗೆ ಪೂರ್ವ ಮಧ್ಯ ಅರಬ್ಬಿ ಸಮುದ್ರದಲ್ಲಿ ಬಿರುಗಾಳಿಯಾಗಿ ತೀವೃವಾಗಲಿದೆ. ಈ ಎಚ್ಚರಿಕೆ ಹಿನ್ನೆಲೆಯಲ್ಲಿ ಭಾರತೀಯ ಮೀನುಗಾರಿಕೆ ದೋಣಿಗಳು ಮೀನುಗಾರಿಕೆಗೆ ಇಳಿಯದಂತೆ ಕೋಸ್ಟ್ ಗಾರ್ಡ್ ಕರ್ನಾಟಕ ಸೂಚನೆ ನೀಡಿದೆ.
ಗಸ್ತು ತಿರುಗುತ್ತಿದ್ದ ಐಸಿಜಿ ಹಡಗುಗಳು ಮತ್ತು ಸಿಜಿ ಡಾರ್ನಿಯರ್ ವಿಮಾನಗಳು ವಿಎಚ್‌ಎಫ್ ಚಾನೆಲ್‌ನಲ್ಲಿ ಸಮುದ್ರದಲ್ಲಿರುವ ಮೀನುಗಾರರಿಗೆ ಹವಾಮಾನ ಎಚ್ಚರಿಕೆ ನೀಡಿ ಹತ್ತಿರದ ತೀರಕ್ಕೆ ಮರಳುತ್ತಿವೆ.
ತೌಕ್ತೇ ಚಂಡಮಾರುತದಿಂದ ಕರ್ನಾಟಕದ ಕರಾವಳಿ, ಕೇರಳ, ತಮಿಳುನಾಡು, ಲಕ್ಷದ್ವೀಪಗಳಲ್ಲಿ 16ರ ವರೆಗೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಗಂಟೆಗೆ 40-50 ಕಿಮೀ ವೇಗದಲ್ಲಿ ಗಾಳಿ ಬೀಸಲಿದೆ. ಮೇ 20ರಂದು ಗುಜರಾತ್‌ನ ಕಛ್ ಅಥವಾ ಆ ರಾಜ್ಯದ ಉತ್ತರ ಭಾಗ ವನ್ನು ಹಾದು ಒಮಾನ್‌ನತ್ತ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಚಂಡಮಾರುತ ವಿಭಾಗದ ಸುನೀತಾ ದೇವಿ ಹೇಳಿದ್ದಾರೆ. ಪಾಕ್‌ನ ದಕ್ಷಿಣ ಭಾಗದಲ್ಲೂ ಚಂಡಮಾರುತದ ಪ್ರಕೋಪ ಕಾಣಿಸುವ ಸಾಧ್ಯತೆ ಇದೆ.