Advertisement

ತೌಖ್ತೇಗೆ ಏಳು ಜಿಲ್ಲೆಗಳು ಹೈರಾಣ : ನೆರವಾಗಲು ಸಚಿವರಿಗೆ ಸಿಎಂ ಬಿಎಸ್‌ವೈ ಸೂಚನೆ

03:32 AM May 17, 2021 | Team Udayavani |

ಮಂಗಳೂರು/ ಬೆಂಗಳೂರು : ಈ ವರ್ಷದ ಮೊದಲ ಚಂಡಮಾರುತ ತೌಖ್ತೇ ಅಬ್ಬರಕ್ಕೆ ರಾಜ್ಯದಲ್ಲಿ ನಾಲ್ವರು ಅಸುನೀಗಿದ್ದಾರೆ. ಕರಾವಳಿಯ 3 ಜಿಲ್ಲೆ ಸೇರಿ ಒಟ್ಟು 7 ಜಿಲ್ಲೆಗಳಲ್ಲಿ ಅದು ಹಾನಿ ಉಂಟು ಮಾಡಿದೆ. ಕೆಲವು ಕಡೆ ಜನಜೀವನ ಅಸ್ತವ್ಯಸ್ತಗೊಂಡಿದೆ. ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

Advertisement

ಮುನ್ನೆಚ್ಚರಿಕೆಯಾಗಿ ಕರಾವಳಿ ಜಿಲ್ಲೆಗಳಲ್ಲಿ 516 ಮಂದಿಯನ್ನು ಸ್ಥಳಾಂತರಿಸಲಾಗಿದೆ. 10 ಪರಿಹಾರ ಕೇಂದ್ರಗಳಲ್ಲಿ 253 ಮಂದಿ ಆಶ್ರಯ ಪಡೆದಿದ್ದಾರೆ. ಜಾನುವಾರು ಹಾನಿ, ಕೃಷಿ – ತೋಟಗಾರಿಕೆ ಬೆಳೆ ನಷ್ಟ, ರಸ್ತೆ ಮತ್ತಿತರ ಮೂಲ ಸೌಕರ್ಯದ ಹಾನಿಯ ಪ್ರಮಾಣ ಇನ್ನಷ್ಟೇ ಗೊತ್ತಾಗಬೇಕಿದೆ.

ಚಂಡಮಾರುತದಿಂದ ರವಿವಾರ ಉತ್ತರ ಕನ್ನಡದ ಕರಾವಳಿಯಲ್ಲಿ ಭಾರೀ ಹಾನಿಯಾಗಿದೆ. 2.87 ಹೆಕ್ಟೇರ್‌ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ. ಉಡುಪಿ ಜಿಲ್ಲೆಯಲ್ಲಿ ಮೆಸ್ಕಾಂಗೆ ಭಾರೀ ಹಾನಿಯಾಗಿದೆ. 36 ಮನೆಗಳು ತೊಂದರೆಗೀಡಾಗಿವೆ.
ಸಿಎಂ ಬಿಎಸ್‌ವೈ ಅವರು ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಡಿಸಿಗಳು ಮತ್ತು ಉಸ್ತುವಾರಿ ಸಚಿವರ ಜತೆಗೆ ಮಾತನಾಡಿದ್ದಾರೆ. ಮೀನುಗಾರರ ರಕ್ಷಣೆಗೆ ಕ್ರಮ ಕೈಗೊಳ್ಳುವಂತೆ, 3 ಜಿಲ್ಲೆಗಳಲ್ಲಿ ಪರಿಹಾರ ಕಾರ್ಯವನ್ನು ಕ್ಷಿಪ್ರವಾಗಿ ನಡೆಸುವಂತೆ ಆದೇಶಿಸಿದ್ದಾರೆ.

ಇನ್ನೂ 2 ದಿನ ಪ್ರಭಾವ
ಚಂಡಮಾರುತದ ಪ್ರಭಾವ ಇನ್ನೂ 2 ದಿನ ಕರ್ನಾಟಕದಲ್ಲಿ ಇರಲಿದೆ. ವಿಶೇಷವಾಗಿ ಕರಾವಳಿ, ಮಲೆನಾಡು ಮತ್ತು ಉತ್ತರ ಒಳನಾಡಿನಲ್ಲಿ 2-3 ದಿನ ಮಳೆ ಮುಂದುವರಿಯಲಿದೆ. ಈ ಮಧ್ಯೆ ರಾಜ್ಯದಲ್ಲಿ ತಾಪಮಾನ ಬಹುತೇಕ ಎಲ್ಲ ಕಡೆ ಕನಿಷ್ಠ 2ರಿಂದ ಗರಿಷ್ಠ 12 ಡಿಗ್ರಿ ಸೆ.ವರೆಗೆ ಕುಸಿದಿದ್ದು, ಸಾಮಾನ್ಯವಾಗಿ ಚಳಿಗಾಲದಲ್ಲಿ ಕಂಡುಬರುವ ಉಷ್ಣಾಂಶ ದಾಖಲಾಗಿದೆ.

ಗುಜರಾತ್‌: 1.5 ಲಕ್ಷ ಮಂದಿ ಸುರಕ್ಷಿತ ಸ್ಥಳಕ್ಕೆ
ತೌಖ್ತೇ ದಡಕ್ಕಪ್ಪಳಿಸಲಿರುವ ಗುಜರಾತ್‌ನಲ್ಲಿ ಪರಿಸ್ಥಿತಿ ಎದುರಿಸಲು ಆಡಳಿತ ಸಜ್ಜಾಗಿದೆ. ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ನಿರ್ವಹಣ ದಳದ 54 ತಂಡಗಳು ಸನ್ನದ್ಧ ಸ್ಥಿತಿಯಲ್ಲಿವೆ. ಈಗಾಗಲೇ 1.5 ಲಕ್ಷ ಮಂದಿಯನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ಅಗತ್ಯ ಬಿದ್ದರೆ ಸೇನೆಯನ್ನು ಪರಿಹಾರ ಮತ್ತು ರಕ್ಷಣ ಕಾರ್ಯಾಚರಣೆಗೆ ಬಳಕೆ ಮಾಡಲಾಗುತ್ತದೆ.
ಈ ಬಗ್ಗೆ ಕೇಂದ್ರಕ್ಕೆ ಕೋರಿಕೆ ಸಲ್ಲಿಸಲಾಗಿದೆ ಎಂದು ಸಿಎಂ ವಿಜಯ ರೂಪಾಣಿ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next