Advertisement

ತೌಕ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿ : ಉಡುಪಿ ಜಿಲ್ಲಾಡಳಿತಕ್ಕೆ ಬೊಮ್ಮಾಯಿ ಸೂಚನೆ

07:34 PM May 15, 2021 | Team Udayavani |

ಬೆಂಗಳೂರು : ಉಡುಪಿ ಜಿಲ್ಲೆಯ ಕರಾವಳಿಗೆ ಅಪ್ಪಳಿಸಿರುವ ತೌಕ್ತೆ ಚಂಡಮಾರುತವನ್ನು ಸಮರ್ಥವಾಗಿ ಎದುರಿಸಿ. ಚಂಡಮಾರುತದಿಂದ ಯಾವುದೇ ಅಪಾಯ ಆಗದಂತೆ ಮುನ್ನೆಚ್ಚರಿಕೆ ವಹಿಸಿ. SDRF ನಿಧಿಯಿಂದ ನೀಡಲಾಗಿರುವ 60 ಕೋಟಿ ರೂಪಾಯಿ ಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಳ್ಳುವಂತೆ ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ಉಡುಪಿ ಜಿಲ್ಲಾಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಶನಿವಾರ ಬೆಂಗಳೂರಿನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಉಡುಪಿ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನಪ್ರತಿನಿಧಿಗಳ ಜತೆ ನಡೆಸಿದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು.

ತೌಕ್ತೆ ಚಂಡಮಾರುತ ನಾಲ್ಕು ದಿನಗಳ ಕಾಲ ತನ್ನ ಪ್ರಭಾವ ಬೀರುವ ಸಾಧ್ಯತೆಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಹೀಗಾಗಿ ಕರಾವಳಿ ಪ್ರದೇಶದಲ್ಲಿ ಕಟ್ಟೆಚ್ಚರ ವಹಿಸಿ. ತಗ್ಗು ಪ್ರದೇಶದಿಂದ ಸಾರ್ವಜನಿಕರನ್ನು ಸ್ಥಳಾಂತರಗೊಳಿಸಿ. ಸ್ಥಳಾಂತರಗೊಳಿಸಿದ ಜನರಿಗೆ ಆಹಾರ ಮತ್ತು ಇತರೆ ವಸ್ತುಗಳನ್ನು ಪೂರೈಕೆ ಮಾಡಿ ಎಂದು ಅಧಿಕಾರಿಗಳಿಗೆ ಆದೇಶಿಸಿದರು.

ಬೆಂಗಳೂರಿನಿಂದ ಚಂಡಮಾರುತ ಅನಾಹುತ ತಪ್ಪಿಸಲು ಮತ್ತು ಅಪಾಯದಲ್ಲಿ ಸಿಲುಕಿದ್ದ ಜನರನ್ನ ರಕ್ಷಣೆ ಮಾಡಲು ತಂಡವನ್ನು ಕಳುಹಿಸಲಾಗುವುದು. ಪೊಲೀಸ್ ಇಲಾಖೆ, ಕರಾವಳಿ ರಕ್ಷಣಾ ಪಡೆ, ಅಗ್ನಿಶಾಮಕ ಸಿಬ್ಬಂದಿ ಪರಸ್ಪರ ಸಮನ್ವಯದಿಂದ ಕೆಲಸ ನಿರ್ವಹಿಸಿ ಅನಾವುತಗಳು ಸಂಭವಿಸಿದಂತೆ ಕಾರ್ಯ ಮಾಡುವಂತೆ ಬಸವರಾಜ್ ಬೊಮ್ಮಾಯಿ ಸೂಚಿಸಿದರು.

ಇದನ್ನೂ ಓದಿ :ಸಸಿಹಿತ್ಲು ಬೀಚ್‌ನ ದುಸ್ಥಿತಿಗೆ ರಾಜ್ಯ ಸರಕಾರವೇ ಹೊಣೆ : ಅಭಯಚಂದ್ರ ಜೈನ್

Advertisement

ಈಗಾಗಲೇ SDRF ನಿಧಿಯಿಂದ 60 ಕೋಟಿ ಹಣವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಆ ಹಣವನ್ನು ಸದ್ಬಳಕೆ ಮಾಡಿಕೊಂಡು ಕೆಲಸ ಮಾಡುವಂತೆ ಅವರು ಸೂಚನೆ ನೀಡಿದರು.

ಕೋವಿಡ್ ನಿಯಂತ್ರಣಕ್ಕೆ ಗಮನಹರಿಸಿ

ಜಿಲ್ಲೆಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚು ಆದ್ಯತೆ ನೀಡಿ. ಖಾಸಗಿ ಆಸ್ಪತ್ರೆಗಳಿಂದ ಸರ್ಕಾರಕ್ಕೆ ಬರಬೇಕಾದ ಬೆಡ್ ಗಳನ್ನು ಪಡೆಯಿರಿ. ಆಕ್ಸಿಜನ್ ಪೂರೈಕೆ ಯನ್ನು ಸಮರ್ಪಕವಾಗಿ ಕೈಗೊಳ್ಳಿ. ಆಮ್ಲಜನಕವನ್ನು ಅಗತ್ಯಕ್ಕೆ ಅನುಗುಣವಾಗಿ ಬಳಕೆಮಾಡಿ. ಚಿಕಿತ್ಸೆ ಪಡೆದು ಗುಣಮುಖರಾಗಿರುವ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ನಲ್ಲಿ ದಾಖಲು ಮಾಡಿ. ಇಂಥವರಿಂದ ತೆರವಾದ ICU ಮತ್ತು HDU ಬೆಡ್ ಗಳನ್ನು ಗಂಭೀರವಾಗಿ ಸೋಂಕಿತಗೊಂಡ ವ್ಯಕ್ತಿಗಳಿಗೆ ಬಳಕೆಮಾಡಿ ಎಂದು ಅವರು ಸೂಚಿಸಿದರು.

ತೌಕ್ತೆ ಚಂಡಮಾರುತದ ಬಗ್ಗೆ ಎಚ್ಚರ ಇರಲಿ. ಕರಾವಳಿ ಅಷ್ಟೇ ಅಲ್ಲದೇ ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಹಾಸನ ಜಿಲ್ಲೆಯಲ್ಲಿ ಚಂಡಮಾರುತ ಪ್ರಭಾವ ಉಂಟಾಗುವ ಸಾಧ್ಯತೆ ಇದೆ. ಯಾವುದೇ ರೀತಿಯ ಅನಾಹುತ, ಆಪತ್ತು ಎದುರಾದರೂ ಅದನ್ನು ನಿವಾರಿಸಲು ಸಿದ್ಧತೆ ಮಾಡಿಕೊಳ್ಳಿ.

– ಬಸವರಾಜ ಬೊಮ್ಮಾಯಿ,
ಉಡುಪಿ ಜಿಲ್ಲಾ ಉಸ್ತುವಾರಿ ಹಾಗೂ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರು.

Advertisement

Udayavani is now on Telegram. Click here to join our channel and stay updated with the latest news.

Next