Advertisement
ತುಂಬೆ ಡ್ಯಾಂನಲ್ಲಿ ನೀರಿನ ಮಟ್ಟ ಇಳಿಕೆಯಾಗುತ್ತಿದೆ. ಮೇ 6ರಂದು 4.09 ಮೀ.ನಷ್ಟಿದ್ದ ನೀರಿನ ಮಟ್ಟವೆ ಮೇ 7ರಂದು 4.03ಮೀ.ಗೆ ಇಳಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಮಳೆ ಬಾರದಿದ್ದರೆ, ರೇಷನಿಂಗ್ ನಿಯಮದಲ್ಲಿಯೂ ಬದಲಾವಣೆ ಮಾಡಲು ಮನಪಾ ನಿರ್ಧರಿಸಿದೆ. ಪಾಲಿಕೆ ಅಧಿಕಾರಿಗಳು ಹೇಳುವ ಪ್ರಕಾರ ಎರಡು ದಿನಗಳಿಗೊಮ್ಮೆ ಆಯಾ ಕ್ಷೇತ್ರದ ಹೆಚ್ಚಿನ ಭಾಗಗಳಿಗೆ ನೀರು ಬರುತ್ತಿದೆ. ರೇಷನಿಂಗ್‌ಗೂ ಮುನ್ನ ನೀರು ಬರುತ್ತಿಲ್ಲ ಎಂದು ದೂರು ಬರುತ್ತಿತ್ತು. ಆದರೆ ಈಗ ಅಂತಹ ದೂರುಗಳು ಕಡಿಮೆಯಾಗಿದೆ ಎನ್ನುತ್ತಾರೆ.
ಈ ಹಿಂದೆ ಇದೇ ರೀತಿ ನೀರಿನ ರೇಷನಿಂಗ್ ಸಮಯದಲ್ಲಿ ಬಾವಿಯಿಂದ ಟ್ಯಾಂಕರ್ ಮೂಲಕ ನೀರು ತುಂಬಿಸಿ ನೀರು ಸರಬರಾಜು ಮಾಡಲಾಗುತ್ತಿತ್ತು. ಆದರೆ ಈ ಬಾರಿ ಆ ಪ್ರಯೋಗ ನಡೆಸಲೂ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಬಾವಿಗಳಲ್ಲಿರುವ ನೀರು ಕಲುಷಿತಗೊಂಡಿದೆ. ಒಳಚರಂಡಿ ನೀರು ಸೇರಿಕೊಂಡು ನೀರಿನ ಬಣ್ಣ ಬದಲಾಗಿದ್ದು, ವಾಸನೆ ಬರುತ್ತಿದೆ. ಇದೇ ಕಾರಣಕ್ಕೆ ನೀರಿನ ಮೂಲವೇ ಪಾಲಿಕೆಗೆ ತಲೆನೋವಾಗಿ ಪರಿಣಮಿಸಿದೆ. ಇನ್ನು, ಕೆರೆಯ ನೀರನ್ನು ಕುಡಿಯುವ ಉದ್ದೇಶಕ್ಕೆ ಉಪಯೋಗಿಸಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ಕೆಲವು ಕೆರೆಗಳಲ್ಲಿ ನೀರಿನ ಮಟ್ಟ ಇಳಿಕೆ ಕಂಡರೂ ಇನ್ನೂ ಕೆಲವು ಕೆರೆಗಳಲ್ಲಿ ನೀರಿದೆ. ಆ ನೀರನ್ನು ಕುಡಿಯುವ ಉದ್ದೇಶಕ್ಕೆ ಉಪಯೋಗ ಮಾಡುವ ನಿಟ್ಟಿನಲ್ಲಿ ಪಾಲಿಕೆ ಆಡಳಿತವೂ ಚಿಂತನೆ ಮಾಡಿಲ್ಲ. ನಗರದ ಬಹುತೇಕ ಕೆರೆಗಳಲ್ಲಿ ಇರುವುದು ಶುದ್ಧ ನೀರಲ್ಲ. ಶುದ್ಧೀಕರಣ ಘಟಕಗಳನ್ನು ಅಳವಡಿಸದೆ ನೀರು ಸರಬರಾಜು ಮಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ನೀರಿರುವ ಕೆರೆಗಳು ಉಪಯೋಗಕ್ಕೆ ಇಲ್ಲದಂತಾಗಿದೆ. ಮೂಲ್ಕಿ: ನೀರಿನ ಪ್ರಮಾಣ ಕಡಿಮೆ
ದಿನದಿಂದ ದಿನಕ್ಕೆ ತಾರಕಕ್ಕೆ ಏರುತ್ತಿರುವ ಮೂಲ್ಕಿ ನಗರದ ಕುಡಿಯುವ ನೀರಿನ ಸಮಸ್ಯೆ ಮತ್ತೆ ಜನರು ಆತಂಕಕ್ಕೆ ಈಡಾಗಿದ್ದಾರೆ. ಬಾವಿಗಳಲ್ಲಿ ಒರತೆ ಕಡಿಮೆಯಾಗಿ ನೀರಿನ ಪ್ರಮಾಣ ಕಡಿಮೆಯಾಗಿದೆ.ರವಿವಾರವೂ ಖಾಸಗಿಯವರ ನೀರಿನ ಸರಬರಾಜು ವ್ಯವಸ್ಥೆಯಲ್ಲಿ ನೀರಿಲ್ಲದೆ ವ್ಯತ್ಯಯ ಮುಂದುವರಿದಿದೆ. ಹಲವು ಹೊಟೇಲ್ ಮತ್ತು ವಸತಿ ಸಮುಚ್ಚಯಗಳಲಗಲಿ ನೀರಿನ ಬವಣೆ ಹೆಚ್ಚಾಗಿದೆ. ಬಹಳಷ್ಟು ಶುಭ ಸಮಾರಂಭಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಪಾವತಿಯ ಆಧಾರದಿಂದಲೂ ನೀರು ಸಿಗದಿ ರುವುದು ಪರಿಸ್ಥಿತಿಗೆ ಜನ ಕಂಗಾಲಾಗಿದ್ದಾರೆ. ಚುನಾವಣೆ ಕರ್ತವ್ಯವಿರುವ ಕಾರಣ ಅಧಿಕಾರಿಗಳು ನೀರಿನ ಸಮ ಸ್ಯೆಗೆ ಸರಿಯಾಗಿ ಸ್ಪಂದಿಸಲಾಗುತ್ತಿಲ್ಲ.
Related Articles
Advertisement