ಟ್ಯಾಟು ಇತ್ತೀಚಿನ ಟ್ರೆಂಡ್. ಈ ಹಿಂದೆ ಹಚ್ಚೆ ಹಾಕಿಕೊಳ್ಳುವ ಸಂಪ್ರದಾಯವಿತ್ತು. ಹಣೆಗೆ, ಕೈಗೆ ಹಚ್ಚೆ ಹಾಕಿಕೊಳ್ಳುತ್ತಿದ್ದರು. ಆದರೆ ಕಾಲ ಬದಲಾದಂತೆ ಟ್ಯಾಟು ಟ್ರೆಂಡ್ ಹುಟ್ಟಿಕೊಂಡಿದೆ. ಇದು ಹಚ್ಚೆಗಿಂತಲೂ ಹೆಚ್ಚು ಆಕರ್ಷಕವಾಗಿದ್ದು, ವಿವಿಧ ಬಣ್ಣಗಳಲ್ಲಿಯೂ ಟ್ಯಾಟು ಹಾಕಿಕೊಳ್ಳಬಹುದರಿಂದ ಇದು ಬಹಳಷ್ಟು ಜನಪ್ರಿಯವಾಗಿದೆ. ಸೆಲೆಬ್ರಿಟಿಗಳಿಂದ ಹಿಡಿದು, ಸಾಮಾನ್ಯ ಜನರವರೆಗೂ ಈ ಟ್ಯಾಟು ಇಂದು ಜನಪ್ರಿಯವಾಗಿದೆ. ತಮ್ಮ ಇಷ್ಟದ ವ್ಯಕ್ತಿಯ ಹೆಸರು ಹಾಕಿಕೊಳ್ಳುವುದು, ಚಿಹ್ನೆ, ಅಥವಾ ಕಪಲ್ಸ್‌ಗಳು ಕಪಲ್ ಟ್ಯಾಟೂ ಹಾಕಿಕೊಳ್ಳುವುದು ಇಂದಿನ ಟ್ರೆಂಡ್. ಸಾಮಾನ್ಯವಾಗಿ ಕುತ್ತಿಗೆ, ಕೈ, ಕಾಲುಗಳಿಗೆ ಇನ್ನು ಕೆಲವರು ಮೈ ಪೂರ್ತಿ ಟ್ಯಾಟೂ ಚಿತ್ತಾರವನ್ನು ಬಿಡಿಸುತ್ತಾರೆ. ಆದರೆ ನೀವು ನೆನಪಿಟ್ಟುಕೊಳ್ಳಿ. ಟ್ಯಾಟು ಉದ್ಯಮ ಇಂದು ಆಧಾಯದ ದಂಧೆಯಾಗಿದೆ. ಇಂದು ಗಲ್ಲಿ ಗಲ್ಲಿಯಲ್ಲಿ ಟ್ಯಾಟು ಹಾಕುವವರು ಸಿಗುತ್ತಾರೆ. ಕೆಲವರು ಕಡಿಮೆ ಬೆಲೆಗೆ ಟ್ಯಾಟು ಹಾಕಿಸಿಕೊಂಡರೆ ಇನ್ನು ಕೆಲವರು ಹೆಚ್ಚಿನ ಬೆಲೆ ತೆರುತ್ತಾರೆ. ಟ್ಯಾಟೂ ಹಾಕಿಸುವಾಗ ಕಡಿಮೆಯೆಂದರೂ 100ಕ್ಕಿಂತ ಹೆಚ್ಚು ಸಲ ಸೂಜಿಯಿಂದ ಚುಚ್ಚುತ್ತಾರೆ. ಇನ್ನು ದೊಡ್ಡ ಹಚ್ಚೆಯಾದರೆ 500ಕ್ಕೂ ಹೆಚ್ಚು ಸಲ ಚುಚ್ಚುತ್ತಾರೆ. ಇದರಿಂದ ಸಾಂಕ್ರಾಮಿಕ ರೋಗ ಹರಡುವ ಸಾಧ್ಯತೆ ಇದೆ. ಟ್ಯಾಟೂ ಚುಚ್ಚುವಾಗ ಸೂಜಿ ಟ್ಯಾಟೂ ಹಾಕಿಸಿಕೊಳ್ಳುವವರ ರಕ್ತದೊಂದಿಗೆ ಸಂಪರ್ಕ ಹೊಂದುತ್ತದೆ, ಇನ್ನು ಟ್ಯಾಟೂ ಹಾಕಲು ಬೇರೆ-ಬೇರೆ ಬಗೆಯ ಸೂಜಿಗಳನ್ನು ಬಳಸಲಾಗುವುದು.
ಕಡಿಮೆ ಬೆಲೆಯಲ್ಲಿ ಟ್ಯಾಟೂ ಹಾಕಿಸುತ್ತಾರೆ ಎಂದು ಬೀದಿ ಬದಿಯಲ್ಲಿ ಹಾಕಿಸಿದರೆ ಏಡ್ಸ್, ಹೆಪಟೈಟಿಸ್ ಬಿ ಮುಂತಾದ ರೋಗ ಹರಡುವ ಸಾಧ್ಯತೆ ಇದೆ. ಇದರಿಂದ ಟ್ಯಾಟೂ ಹಾಕಿಸುವವರು ಆರೋಗ್ಯದ ಕಡೆ ತುಂಬಾ ಗಮನ ಕೊಡಬೇಕು.
ಸೂರ್ಯನ ಕಿರಣಗಳಿಗೆ ಒಡ್ಡಬಾರದು: ಟ್ಯಾಟೂ ಹಾಕಿಸಿದ ಬಳಿಕ ಕೆಲ ದಿನಗಳ ಕಾಲ ಟ್ಯಾಟೂವನ್ನು ಸೂರ್ಯನ ಪ್ರಖರ ಕಿರಣಗಳಿಗೆ ಒಡ್ಡಬಾರದು. ಟ್ಯಾಟೂ ಹಾಕಿಸಿಕೊಂಡ ನಂತರ ಆ ಸ್ಥಳದಲ್ಲಿ ಕೊಂಚ ತುರಿಕೆಯುಂಟಾದರೂ ಯಾವುದೇ ಕಾರಣಕ್ಕೂ ಉಜ್ಜಕೂಡದು. ಚರ್ಮ ಸಿಪ್ಪೆ ಬಿಟ್ಟಿದೆಯೆಂದು ಅದನ್ನು ಕೈಗಳಿಂದ ಕೀಳಕೂಡದು. ಇನ್ನು ಆ ಭಾಗಕ್ಕೆ ಯಾವುದೇ ಕ್ರೀಮ್ ಆಗಲಿ, ಲೋಷನ್ ಆಗಲಿ ಹಚ್ಚಲು ಹೋಗಬೇಡಿ.
ಈಜಾಡಬೇಡಿ: ನೀವು ಈಜು ಪ್ರೇಮಿಯಾಗಿದ್ದರೆ ಟ್ಯಾಟು ಹಾಕಿಕೊಂಡ ಬಳಿಕ ನೀವು ಸಾರ್ವಜನಿಕ ಈಜುಕೊಳದಲ್ಲಿ ಈಜಾಡಲು ಹೋಗಬೇಡಿ. ಈ ನೀರಿನಲ್ಲಿ ಸೋಂಕು ತಗಲುವ ಸಾಧ್ಯತೆ ಇರುವುದರಿಂದ ನೀವು ಈಜಾಡುವುದನ್ನು ನಿಲ್ಲಿಸುವುದು ಉತ್ತಮ.
1. ನೀರು ಸುರಿಯಬೇಡಿ:
ನೀವು ಟ್ಯಾಟು ಹಾಕಿದ 10 ದಿನಗಳವರೆ ಟ್ಯಾಟೂ ಮೇಲೆ ನೇರವಾಗಿ ನೀರನ್ನು ಸುರಿಯಬೇಡಿ. ತಣ್ಣೀರಿನಿಂದ ಹಗುರುವಾಗಿ ತೊಳೆದು ಮೃದುವಾದ ಟಿಶ್ಯೂ ಪೇಪರಿನಲ್ಲಿ ಸ್ವತ್ಛಗೊಳಿಸಿ ವ್ಯಾಸಲೀನ್ ಹಚ್ಚಿಕೊಳ್ಳಿ.
2. ಸನ್ ಸ್ಕ್ರೀನ್ ಲೋಷನ್ ಹಚ್ಚದಿರಿ
ನೀವು ಟ್ಯಾಟೂ ಹಾಕಿಕೊಂಡ ಬಳಿಕ ನೀವು ಇದರ ಮೇಲೆ ಸನ್ ಸ್ಕ್ರೀನ್ ಲೋಷನ್ ಹಚ್ಚಬೇಡಿ. ಚರ್ಮ ಗುಣವಾಗಲು ಕನಿಷ್ಠ ಎರಡರಿಂದ ಮೂರು ದಿನಗಳಾದರು ಅಗತ್ಯವಾಗಿ ಬೇಕಾಗುತ್ತದೆ.
3. ಟ್ಯಾಟೂ ಬೇಡ ಎಂದೆನಿಸಿದರೆ:
ಕೆಲವರು ಟ್ಯಾಟೂ ಹಾಕಿಕೊಳ್ಳುತ್ತಾರೆ, ದಿನಗಳೆದಂತೆ ಅದು ಬೇಡವೆನಿಸುತ್ತದೆ. ಆದರೆ ಟ್ಯಾಟೂ ಹಾಕುವ ನೋವಿಗಿಂತ ಅದನ್ನು ತೆಗಿಸುವ ನೋವೇ ಜಾಸ್ತಿ ಇರುತ್ತದೆ. ಒಂದು ವೇಳೆ ನೀವು ಟ್ಯಾಟೂವನ್ನು ಸಂಪೂರ್ಣವಾಗಿ ತೆಗೆಯಬೇಕೆಂದು ನಿರ್ಧರಿಸಿದರೆ ನೀವು ಚರ್ಮ ವೈದ್ಯರನ್ನು ಸಂಪರ್ಕಿಸಿ, ಬಳಿಕ ಚಿಕಿತ್ಸೆ ಪಡೆಯುವುದು ಉತ್ತಮ.
4. ಟ್ಯಾಟೂ ಹಾಕುವಾಗ ಗಮನಿಸಬೇಕಾದ ಅಂಶಗಳು:
ತಾತ್ಕಾಲಿಕ ಟ್ಯಾಟೂ ಹಾಕಿಸಿಕೊಳ್ಳುವುದಾದರೆ ಅಲರ್ಜಿ ಬಗ್ಗೆ ಗಮನಕೊಡಿ. ಟ್ಯಾಟೂ ಹಾಕಿಸಿದ ಬಳಿಕ ತುರಿಕೆ ಕಾಣಿಸಿಕೊಂಡರೆ ತಕ್ಷಣ ತೆಗೆಯಬಹುದಾದಂಥ ಟ್ಯಾಟೂ ಬಳಸಿ. ಶಾಶ್ವತ ಟ್ಯಾಟೂ ಅಂತಾದರೆ ಅದನ್ನು ಹಾಕಿಸಿಕೊಳ್ಳಲು ನೀವು 18 ವರ್ಷ ಮೀರಿರಬೇಕು. ತ್ವಚೆ ಸಮಸ್ಯೆ, ಹೃದಯ ಸಂಬಂಧಿ ಕಾಯಿಲೆ, ಮಧುಮೇಹವಿದ್ದರೆ ಟ್ಯಾಟೂ ಹಾಕಿಸಿಕೊಳ್ಳುವ ಮುನ್ನ ನಿಮ್ಮ ವೈದ್ಯರ ಸಲಹೆ ಪಡೆದುಕೊಳ್ಳಬೇಕು. ಟ್ಯಾಟೂ ಹಾಕಿಸಿಕೊಳ್ಳಬೇಕು ಎಂದು ನಿರ್ಧರಿಸಿದ್ದರೆ ಹೆಪಟೈಟಿಸ್ ಹಾಗೂ ಟೆಟಾನಸ್ ಇಂಜೆಕ್ಷನ್ ಪಡೆದುಕೊಳ್ಳುವುದು ಉತ್ತಮ.
ಟ್ಯಾಟೂ ಹಾಕಿಸಲು ಪರಿಣಿತ ಕಲಾವಿದರ ಬಳಿ ಹೋಗಿ. ಅವರು ಈ ಸಂಬಂಧ ಪ್ರಮಾಣಪತ್ರ ಹೊಂದಿದ್ದಾರೆಯೇ ಎಂದು ಪರೀಕ್ಷಿಸಿದ ಬಳಿಕವಷ್ಟೇ ಹಾಕಿಸಿ.
– ಪೂರ್ಣಿಮಾ ಪೆರ್ಣಂಕಿಲ