Advertisement

ಬಿಸಿಲಿನ ತಾಪ ಹೆಚ್ಚಾದಂತೆ ತಾಟಿನಿಂಗು ವ್ಯಾಪಾರ ಜೋರು

09:23 PM Apr 26, 2019 | Lakshmi GovindaRaju |

ದೇವನಹಳ್ಳಿ: ಬೇಸಿಗೆಯ ಬಿಸಿಲು ಹೆಚ್ಚಾದಂತೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಮುಖ ನಗರ ದೇವನಹಳ್ಳಿಯ ಬೀದಿಗಳಲ್ಲಿ ತಾಟಿನಿಂಗು ಮಾರಾಟ ಬಲು ಜೋರಾಗಿ ನಡೆಯುತ್ತಿದ್ದು, ಎತ್ತ ಕಣ್ಣಾಯಿಸಿದರೂ ತಾಟಿನಿಂಗುಗಳೇ ಕಾಣುತ್ತಿವೆ.

Advertisement

ತಮಿಳುನಾಡಿನ ಸೇಲಂ, ಧರ್ಮಪುರಿ, ಹೊಸೂರು, ಪುತ್ತಕೂರು ಮುಂತಾದ ಭಾಗಗಳಲ್ಲಿ ಹೇರಳವಾಗಿ ತಾಟಿನಿಂಗನ್ನು ಬೆಳೆಯುತ್ತಾರೆ. ಇತ್ತೀಚೆಗೆ ತಾಳೆಹಣ್ಣು (ತಾಟಿನಿಂಗು)ಜಿಲ್ಲೆಗೆ ಹೆಚ್ಚಿನ ಪ್ರಮಾಣದಲ್ಲಿ ಸರಬರಾಜಾಗುತ್ತಿದೆ. ಬಿಸಿಲಿನ ತೀವ್ರತೆ ಹೆಚ್ಚಾಗುತ್ತಿರುವುದರಿಂದ ಬಾಯಾರಿಕೆಯು ಹೆಚ್ಚಾಗುತ್ತದೆ.

ಹಾಗಾಗಿ, ಜನರು ಎಳನೀರಿಗೆ ಪರ್ಯಾಯವಾಗಿ ತಾಟಿನಿಂಗು ಮೊರೆ ಹೋಗುವುದು ಸಹಜವಾಗಿದೆ. ಇದರಿಂದ, ತಾಟಿನಿಂಗುಗೆ ಬೇಡಿಕೆ ಹೆಚ್ಚಾಗಿ ಕಂಡುಬರುತ್ತಿದೆ. ಎಳ ನೀರಿನಷ್ಟೇ ಆರೋಗ್ಯಕರ ಗುಣಧರ್ಮವನ್ನು ಹೊಂದಿರುವ ತಾಟಿನಿಂಗುಗಳನ್ನು, ನಗರದ ಬೀದಿಗಳಲ್ಲಿ ತಳ್ಳುವ ಗಾಡಿಗಳ ಮೂಲಕ ಮಾರಾಟ ಮಾಡಲಾಗುತ್ತಿದೆ.

ತಮಿಳುನಾಡಿನ ತಾಟಿನಿಂಗು: ತಮಿಳುನಾಡಿನಲ್ಲಿ ಹೆಚ್ಚಾಗಿ ಬೆಳೆಯುವ ತಾಟಿನಿಂಗು ಬೇಸಿಗೆಯಲ್ಲಿ ಹೆಚ್ಚು ಮಾರಾಟವಾಗುತ್ತದೆ. ಬೇಸಿಗೆ ಪ್ರಾರಂಭದ ದಿನಗಳಿಂದ ನಿಧಾನವಾಗಿ ಮಾರುಕಟ್ಟೆಗಳಲ್ಲಿ ಲಗ್ಗೆಯಿಡುತ್ತದೆ. ಮಾರ್ಚ್‌, ಏಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ತಮಿಳುನಾಡಿನಿಂದ ನಗರಗಳಿಗೆ ತಂದು ಮಾರಾಟ ಮಾಡಲಾಗುತ್ತದೆ.

ಒಂದು ಕಾಯಿಗೆ 30 ರೂ.: ತಾಟಿನಿಂಗಿನ ತೊಳೆಗಳು ಸಾಕಷ್ಟು ಪ್ರಮಾಣದಲ್ಲಿದ್ದು, ಶರ್ಕರ, ರಂಜಕ, ಕಬ್ಬಿಣ, ವಿಟಮಿನ್‌ “ಸಿ’ನಿಂದ ಕೂಡಿರುತ್ತದೆ. ಇದು ದೇಹದ ಉಷ್ಣತೆಯನ್ನು ಕಡಿಮೆ ಮಾಡುತ್ತದೆ. 35 ಕಾಯಿಗಳು ಇರುವ ಒಂದು ಗೊಂಚಲಿಗೆ 250 ರಿಂದ 300 ರೂ.ಗೆ ಖರೀದಿಸುತ್ತಿದ್ದೇವೆ. ಒಂದು ಕಾಯಿ 30 ರೂ.ಗೆ ಮಾರಾಟ ಮಾಡುತ್ತೇವೆ ಎಂದು ವ್ಯಾಪಾರಸ್ಥರು ಹೇಳುತ್ತಾರೆ.

Advertisement

ಗ್ಯಾಸ್ಟ್ರಿಕ್‌ ಸಮಸ್ಯೆಗೆ ಮದ್ದು: ತಾಟಿನಿಂಗು ಸೇವನೆ ಹೊಟ್ಟೆಯುರಿ, ಗ್ಯಾಸ್ಟ್ರಿಕ್‌ ಸಮಸ್ಯೆಗಳಿಗೆ ಉತ್ತಮ ಮದ್ದಾಗಿದೆ. ಸಕ್ಕರೆ ಖಾಯಿಲೆ ಇರುವವರಿಗೆ ಇದೊಂದು ಉತ್ತಮ ಔಷಧಿಯಾಗಿದೆ. ಸಣ್ಣ ಗಾತ್ರದ ಕಾಯಿ ಎಳನೀರಿನಂತೆ ಕಂಡರೂ, ಇದನ್ನು ಕತ್ತರಿಸಿದರೆ ಒಳಗೆ ಎಳೆ ಕೊಬ್ಬರಿಯಂತೆ 3 ರಿಂದ 4 ತೊಳೆಗಳು ಇರುತ್ತವೆ. ಇದನ್ನು ತಿಂದರೆ ಎಳನೀರಿನ ಗಂಜಿಯನ್ನು ಸವಿದಂತೆ ಅನುಭವವಾಗುತ್ತದೆ. ತಾಟಿನಿಂಗಿನಲ್ಲಿರುವ ನೀರು ಸಿಹಿಯಾಗಿರುತ್ತದೆ. ಅದಕ್ಕಾಗಿ, ಜನರು ಬೇಸಿಗೆಯಲ್ಲಿ ಬಹಳ ಇಷ್ಟಪಟ್ಟು ತಿನ್ನುತ್ತಾರೆ.

ಆರೋಗ್ಯ ಸಮಸ್ಯೆಗೆ ಉತ್ತಮ: ಸಾಮಾನ್ಯವಾಗಿ ಕರಾವಳಿ ಪ್ರದೇಶಗಳಲ್ಲಿ ಬೆಳೆಯುವ ತಾಟಿನಿಂಗು ಬಳಸಿ ಬೆಲ್ಲ ತಯಾರಿಸುತ್ತಾರೆ. ಈ ಬೆಲ್ಲವನ್ನು ಬಾಣಂತಿಯರು ಸೇವಿಸಬಹುದು. ಮುಟ್ಟಿನ ತೊಂದರೆ ಇರುವವರಿಗೆ ಇದು ಒಳ್ಳೆಯ ಔಷಧಿಯಾಗಿದೆ. ಇದರಲ್ಲಿ ಪೊಟಸಿಯಮ್‌ ಮತ್ತು ನಾರಿನ ಅಂಶ ಹೆಚ್ಚಾಗಿದೆ. ಹಾಗಾಗಿ, ಕಿಡ್ನಿಯಲ್ಲಿನ ಕಲ್ಲುಗಳ ಸಮಸ್ಯೆ ನಿವಾರಣೆಗೆ ತುಂಬಾ ಸಹಕಾರಿಯಾಗಿದೆ. ಇದನ್ನು ದಿನನಿತ್ಯ ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿರಿಯರು ಹೇಳುತ್ತಾರೆ.

ಒಂದು ಕಾಯಿಗೆ 5ರೂ.ಲಾಭ: ಹೆಚ್ಚಾಗಿ ತಮಿಳುನಾಡಿನಿಂದ ತಾಟಿನಿಂಗು ಕಾಯಿಗಳನ್ನು ತರುತ್ತೇವೆ. ಒಂದು ವಾರಕ್ಕೆ ಒಂದು ಲೋಡ್‌ ತಾಟಿನಿಂಗು ತರಿಸುತ್ತೇವೆ. ಒಂದು ಕಾಯಿಗೆ 5 ರಿಂದ 6 ರೂ. ಲಾಭ ಸಿಗುತ್ತದೆ. 4ರಿಂದ 5 ವ್ಯಾಪಾರಸ್ಥರು ಲಾರಿಯಲ್ಲಿ ತರಿಸಿ ನಗರದಲ್ಲಿ ತಳ್ಳುವ ಗಾಡಿಗಳ ಮೂಲಕ ಮಾರಾಟ ಮಾಡುತ್ತೇವೆ. ಒಂದು ದಿನಕ್ಕೆ ಖರ್ಚು ಕಳೆದರೆ 400 ರೂ. ಲಾಭ ಸಿಗುತ್ತದೆ. ಎಲ್ಲೆಡೆ ಈ ಕಾಯಿಗೆ ಬೇಡಿಕೆಯಿದೆ ಎಂದು ವ್ಯಾಪಾರಸ್ಥ ಮುರುಗನ್‌ ತಿಳಿಸಿದರು.

ಬಾಯಾರಿಕೆ ನೀಗಿಸಲು ಸಹಕಾರಿ: ಹಲವಾರು ದಿನಗಳಿಂದ ತಾಟಿನಿಂಗುಗೆ ಬೇಡಿಕೆ ಇರಲಿಲ್ಲ. ದಿಢೀರನೆ ಹೆಚ್ಚಿನ ಬೇಡಿಕೆ ಬಂದಿದೆ. ಆಗಿನ ದಿನಗಳಲ್ಲಿ ಇದು 10 ರೂ.ಗೆ ಸಿಗುತ್ತಿತ್ತು. ಈಗ 30 ರೂ. ಇದೆ. ಬೇಸಿಗೆಯಲ್ಲಿ ಬಾಯಾರಿಕೆ ನೀಗುಸುವಲ್ಲಿ ಎಳನೀರಿನಂತೆ ತಾಟಿನಿಂಗು ಸಹ ಸಹಕಾರಿಯಾಗಿದೆ ಎಂದು ನಾಗರಿಕ ಕಾರಹಳ್ಳಿ ಕೆಂಪಣ್ಣ ಹೇಳಿದರು.

* ಎಸ್‌ ಮಹೇಶ್‌

Advertisement

Udayavani is now on Telegram. Click here to join our channel and stay updated with the latest news.

Next