ಮುಂಬಯಿ: ಕಳೆದ ಡಿ. 17ರಂದು ಕೋಲ್ಕತ್ತಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ 25 ಕಿ.ಮೀ.ಗಳ ಕಲ್ಕತ್ತಾ ಟಾಟಾ ಸ್ಟೀಲ್ ಮ್ಯಾರಥಾನ್‌ನಲ್ಲಿ ಅಂತಾರಾಷ್ಟ್ರೀಯ ಕ್ರೀಡಾಪಟು,ತುಳು-ಕನ್ನಡಿಗ ಶಿವಾನಂದ ಶೆಟ್ಟಿ ಅವರು ತೃತೀಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.
40ರಿಂದ45 ವಯೋಮಿತಿಯ ವಿಭಾಗದಲ್ಲಿ ಶಿವಾನಂದ ಶೆಟ್ಟಿ ಅವರು ಈ ಸಾಧನೆ ಗೈದಿದ್ದು, 25 ಕಿ.ಮೀ. ದೂರವನ್ನು 1 ಗಂಟೆ 41 ನಿಮಿಷ 50 ಸೆಕೆಂಡ್‌ಗಳಲ್ಲಿ ಕ್ರಮಿಸಿ ತೃತೀಯ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಸ್ಪರ್ಧೆಯಲ್ಲಿ 500 ಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಅದೇ, ಒಟ್ಟಾರೆಯಾಗಿ ಮ್ಯಾರಥಾನ್‌ನಲ್ಲಿ ಭಾಗವಹಿಸಿದ 5,000 ಸ್ಪರ್ಧಿಗಳಲ್ಲಿ ಶಿವಾನಂದ್ ಅವರು 80ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಡಿ. 24ರಂದು ಬಾಂದ್ರಾ ಫೋರ್ಟ್‌ನಲ್ಲಿ ನಡೆದ 10ಕೆ ಇನ್-ಟೆನ್ ಸಿಟಿ ಮ್ಯಾರಥಾನ್‌ನಲ್ಲಿ ಇವರು ಮೊದಲನೇ ಪ್ರಶಸ್ತಿ ಪಡೆದುಕೊಂಡಿದ್ದಾರೆ. 40ರಿಂದ 50 ವಯೋಮಿತಿಯ ವಿಭಾಗದಲ್ಲಿ 10 ಕಿ.ಮೀ. ದೂರವನ್ನು 38 ನಿಮಿಷ 38 ಸೆಕೆಂಡುಗಳಲ್ಲಿ ಕ್ರಮಿಸಿ ಮೊದಲನೇ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.
ಡಿ.31ರಂದು ಲಾತೂರ್‌ನಲ್ಲಿ ನಡೆದ 10ಕೆ ಲಾತೂರ್ ಮ್ಯಾರಥಾನ್‌ನಲ್ಲೂ ಶಿವಾನಂದ ಶೆಟ್ಟಿ ಅವರು ತೃತೀಯ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ.
ಜ. 7ರಂದು ಸೋಲಾಪುರದಲ್ಲಿ ನಡೆದ 21 ಕಿ.ಮೀ.ಗಳ ಸೋಲಾಪುರ ಹಾಫ್ ಮ್ಯಾರಥಾನ್‌ನಲ್ಲಿ 30 ರಿಂದ 40 ವಯೋಮಿತಿಯ ವಿಭಾಗದಲ್ಲಿ ಶಿವಾನಂದ್ ಅವರು ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಮೂಲತಃ ಬಜ್ಪೆ ಕಾವೂರು ವಸಂತ ಶೆಟ್ಟಿ ಮತ್ತು ನಿಡ್ಡೋಡಿ ನಂದಬೆಟ್ಟು ಲೀಲಾವತಿ ಶೆಟ್ಟಿ ದಂಪತಿಯ ಪುತ್ರ. ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಮ್ಯಾರಥಾನ್ ಕ್ರೀಡಾಳುವಾಗಿರುವ ಇವರು 2006ರಿಂದ 250ಕ್ಕಿಂತಲೂ ಅಧಿಕ ಸ್ಪರ್ಧೆಗಳಲ್ಲಿ ಪಾಲ್ಗೊಂಡಿದ್ದಾರೆ.