ಬೆಳಗಾವಿ: ಟಾಟಾ ಏಸ್-ಬೊಲೇರೋ ಮಧ್ಯೆ ಸವದತ್ತಿ-ಧಾರವಾಡ ಮಾರ್ಗದ ಪುರಸಭೆ ಕಸ ವಿಲೇವಾರಿ ಸಂಕೀರ್ಣದ ಹತ್ತಿರ ಸಂಭವಿಸಿದ ಭೀಕರ ಅಪಘಾತದಲ್ಲಿ 6 ಜನ ಸ್ಥಳದಲ್ಲಿ ಮೃತಪಟ್ಟು, 10ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಶುಕ್ರವಾರ ರಾತ್ರಿ ಸವದತ್ತಿ ಬಳಿ ಸಂಭವಿಸಿದೆ.
ಮೃತ ದುರ್ದೈವಿಗಳು ಸವದತ್ತಿ ಬಳಿಯ ಚಿಂಚನೂರು-ಜಕಬಾಳ ಗ್ರಾಮದ ಕೂಲಿ ಕಾರ್ಮಿಕರು ಎಂದು ತಿಳಿದು ಬಂದಿದ್ದು, ಧಾರವಾಡ ತಾಲೂಕಿನ ಮೊರಬ ಗ್ರಾಮದ ಜಮೀನುಗಳಲ್ಲಿ ಕೂಲಿ ಕೆಲಸ ಮುಗಿಸಿಕೊಂಡು ಟಾಟಾ ಏಸ್ ವಾಹನದಲ್ಲಿ ತಮ್ಮ ಗ್ರಾಮಕ್ಕೆ ಮರಳುತ್ತಿದ್ದಾಗ ಈ ದುರ್ಘಟನೆ ಸಂಭವಿಸಿದೆ. ಎರಡು ವಾಹನ ಸೇರಿ 25ರಿಂದ 30 ಜನರಿದ್ದರು ಎನ್ನಲಾಗಿದೆ.
ಅಪಘಾತಕ್ಕೀಡಾದ ಬೊಲೇರೋ ವಾಹನ ಸವದತ್ತಿ ಕಡೆಯಿಂದ ಧಾರವಾಡಕ್ಕೆ ಹೊರಟಿತ್ತು. ಮೃತ 6 ಕಾರ್ಮಿಕರಲ್ಲಿ ಐವರ ಹೆಸರುಗಳು ತಿಳಿದು ಬಂದಿದ್ದು, ಅವರನ್ನು ಚಿಂಚನೂರ ಗ್ರಾಮದ ಯಲ್ಲವ್ವ ಯಲ್ಲಪ್ಪ ಮುರಕಿಭಾವಿ (65), ತಾರವ್ವ ಹುರಳಿ (35) ಹಾಗೂ ರುಕ್ಮವ್ವ ವಡಕಣ್ಣವರ (35), ಹನಮವ್ವ ಮಯಪ್ಪ ಬೊಮ್ಮಣ್ಣವರ (58) ಹಾಗೂ ಯಲ್ಲವ್ವ ಹೊನ್ನಪ್ಪ ಬೊಮ್ಮನಹಳ್ಳಿ (56) ಎಂದು ಗುರ್ತಿಸಲಾಗಿದೆ. ಟಾಟಾ ಏಸ್ ಚಾಲಕ ಕೂಡ ಸಾವನ್ನಪ್ಪಿದ್ದಾನೆ. ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ :ಬಿಎಸ್‌ವೈ ಜನತೆಕಣ್ಣೊರೆಸುವ ಮುಖ್ಯಮಂತ್ರಿ: ಕಟೀಲ್
ಸುದ್ದಿ ತಿಳಿದ ತಕ್ಷಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಮತ್ತು ಸವದತ್ತಿ ಠಾಣೆ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸವದತ್ತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.