ಈ ಜನುಮವೆ ಆಹಾ ದೊರೆತಿದೆ ರುಚಿ ಸವಿಯಲು ಈ ಹಾಡು ಕೇಳಿದಾಗ ಪ್ರಕಾಶ್ ರೈ ಅವರ ಒಗ್ಗರಣೆ ಸಿನೆಮಾ ದೃಶ್ಯ ನೆನಪಾಗುವುದು. ಹಾಡಿನುದ್ದಕ್ಕೂ ತರತರದ ಭಕ್ಷ್ಯಗಳು ಹಾಡಿನ ಸಾಲಿನಲ್ಲಿ ಮತ್ತು ದೃಶ್ಯದಲ್ಲಿ ಕಾಣಸಿಗುತ್ತದೆ. ಇದು ಮಳೆಗಾಲದ ಹಚ್ಚ ಹಸುರ ನಡೆವೆ ಸವಿಯುವ ರುಚಿಯ ಬಗ್ಗೆ ಪ್ರೇಕ್ಷಕರಿಗೆ ತಿಳಿಸುತ್ತಾ ಹಾಡು ಸಾಗಲಿದೆ. ಇದನ್ನು ಕಂಡಾಗ ನನಗೆ ಮಲೆನಾಡ ರುಚಿ ತಟ್ಟನೆ ನೆನಪಾಯಿತು. ಮಲೆನಾಡು ಎಂದಾಗಲೇ ಮನಸ್ಸಿಗೆ ಮತ್ತು ಕಣ್ಣಿಗೆ ತಂಪು ಎಂದರೆ ತಪ್ಪಿಲ್ಲ. ಮನುಷ್ಯ ತನ್ನ ಜೀವನದಲ್ಲಿ ಒಮ್ಮೆಯಾದರೂ ಮಲೆನಾಡಿಗೆ ಹೋಗದಿದ್ದರೆ ಆತನು ತನ್ನ ಜೀವನದಲ್ಲಿ ಅಪರೂಪದ ಸ್ವರ್ಗವನ್ನು ಕಳೆದುಕೊಂಡ ಹಾಗೆ.
ಮಲೆನಾಡು ಎಂದರೇನೇ ಮಳೆಯ ನಾಡು. ಮಲೆನಾಡಿನ ಸೌಂದರ್ಯವನ್ನು ವರ್ಣಿಸಲು ಸಾಧ್ಯವಿಲ್ಲ. ಕೇವಲ ಅದನ್ನು ಕಣ್ಣಲ್ಲಿ ನೋಡಿ, ಮನ ತುಂಬಿ ಕೊಳ್ಳಬೇಕು ಅಷ್ಟೇ. ಅಷ್ಟು ಸುಂದರತೆಯ ಪ್ರತೀಕ ನಮ್ಮ ಮಲೆನಾಡು, ಮಳೆಗಳ ನಾಡು. ಹೆಸರೇ ಹೇಳುವಂತೆ ಮಳೆಗಳ ನಾಡು ಎಂದರೆ ಮಳೆ ಅಧಿಕವಾಗಿ ಬೀಳುವಂತ ಪ್ರದೇಶ. ಆ ಚಳಿಯಲ್ಲಿ, ಮಂಜಿನ ವಾತಾವರಣದಲ್ಲಿ ಸುತ್ತಲು ಗಿಡ ಮರಗಳಿಂದ ತುಂಬಿರುವ ಹಸುರಾದಂತಹ ಪ್ರಕೃತಿಯ ಮಡಿಲಲ್ಲಿ ಮಣ್ಣಿನ ಮನೆ, ಸುತ್ತಲು ಕಾಡು, ಅಗಲವಾದ ಅಂಗಳ, ದನ ಕರುಗಳ ಕೂಗು, ಹಕ್ಕಿ ಮರಿಗಳ ಜತೆಗೆ ಆಗಾಗ ಸದ್ದು ಮಾಡಿ ಗದರಿಸುವ ಝೀರುಂಡೆ ಹುಳು.
ಮಲೆನಾಡಲ್ಲಿ ಅಧಿಕ ಪ್ರಮಾಣದಲ್ಲಿ ಚಳಿ ಇದೆ. ಅದು ಬೇಸಗೆಯಾದರೂ, ಮಳೆಗಾಲವಾದರೂ ಚಳಿಗಾಲವಾದರೂ ಹೆಚ್ಚಾಗಿ ಮಳೆನಾಡಿನಲ್ಲಿ ಮಂಜಿನ ಒಂದು ವಾತಾವರಣ ಸರ್ವೇಸಾಮಾನ್ಯ. ಈ ಚಳಿಯಲ್ಲಿ ಬಾಯಿ ಚಪ್ಪರಿಸುವುದು ಸಾಮಾನ್ಯ. ತಿಂಡಿ ತಿನಿಸುಗಳ ವಿಚಾರದಲ್ಲಿ ಮಲೆನಾಡಿನಲ್ಲಿ ನೋಡುವುದಾದರೆ ಹೆಚ್ಚಾಗಿ ಕಡುಬಿನ ಪದಾರ್ಥಗಳು ಇರುತ್ತದೆ. ಮಾವು, ಕಳಲೆ, ಪತ್ರೊಡೆ, ಸಿಗಡಿ ಪಲ್ಯ, ಕಲ್ಲೇಡಿ, ಒಣಮೀನು, ಅಣಬೆ, ಹೊಳೆ ಮೀನು ಸಾರು ಹೀಗೆ ಇನ್ನಷ್ಟು ಪದಾರ್ಥಗಳಿವೆ. ಆದರೆ ಅದರಲ್ಲಿಯೇ ವಿಭಿನ್ನವಾದ ಅಂತಹ ಬೆಳಗಿನ ತಿಂಡಿ ಎಂದರೆ ಅದು ಹಲಸಿನ ದೋಸೆ.
ಮಲೆನಾಡಿನಲ್ಲಿ ದೋಸೆ ಮಾಡುವ ಹಿಂದಿನ ದಿನ ಅಂಬಲಿ ಮತ್ತು ಬಕ್ಕೆ ಎಂಬ ಎರಡು ರೀತಿಯ ಹಲಸಿನ ಹಣ್ಣಿನಲ್ಲಿ ಮಾಡುತ್ತಾರೆ. ಈ ಹಲಸಿನ ದೋಸೆಯನ್ನು ಅನೇಕ ಭಾಗದ ಜನರು ಬೆಳಗ್ಗಿನ ತಿಂಡಿಯಾಗಿ ಸವಿದರೂ ಮಲೆನಾಡಿನಲ್ಲಿ ಇದನ್ನು ಸವಿಯುವುದು ಒಂದು ರೀತಿ ವಿಶೇಷ ಅನುಭವ ನೀಡಲಿದೆ. ಚುಮು ಚುಮು ಚಳಿಯಲ್ಲಿ ಬಿಸಿ ಬಿಸಿ ದೋಸೆ ಸವಿಯುತ್ತಿದ್ದರೆ ಸ್ವರ್ಗಕ್ಕೆ ಮೂರೇ ಗೇಣು ಎನ್ನಬಹುದು.
-ವಿದ್ಯಾ
ಎಂ.ಜಿ.ಎಂ., ಉಡುಪಿ