ಇಲ್ಲಿಯವರೆಗೆ ಊಟದ ಮೆನು ಲೀಸ್ಟ್‌ನಲ್ಲಿ ಕಾಣುತ್ತಿದ್ದ “ಮಜ್ಜಿಗೆ ಹುಳಿ’ ಹೆಸರು ಈಗ ಚಿತ್ರವೊಂದರ ಶೀರ್ಷಿಕೆಯಾಗಿ ತೆರೆಮೇಲೆ ಬರುತ್ತಿದೆ. ಹೌದು, “ಮಜ್ಜಿಗೆ ಹುಳಿ’ ಚಿತ್ರದ ಶೀರ್ಷಿಕೆಗೆ “ಒಳ್ಳೆಯ ಬಾಡೂಟ ಗುರು’ ಎಂಬ ಅಡಿಬರಹವಿದೆ. ಇದೊಂದು ಪಕ್ಕಾ ರೊಮ್ಯಾಂಟಿಕ್ ಕಾಮಿಡಿ ಶೈಲಿಯ ಚಿತ್ರ ಎಂಬುದು ಚಿತ್ರತಂಡದ ಮಾತು. ಇತ್ತೀಚೆಗೆ ಚಿತ್ರತಂಡ ಟ್ರೇಲರ್ ಮತ್ತು ಆಡಿಯೋ ಬಿಡುಗಡೆ ಮಾಡಿದೆ.
ಲಹರಿ ವೇಲು ಚಿತ್ರದ ಆಡಿಯೋ ಮತ್ತು ಸಂಗೀತ ನಿರ್ದೇಶಕ ಗುರುಕಿರಣ್ ಅವರು ಲಿರಿಕಲ್ ವೀಡಿಯೋ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ. “ಮಜ್ಜಿಗೆ ಹುಳಿ’ ಚಿತ್ರಕ್ಕೆ ರವೀಂದ್ರ ಕೊಟಕಿ ಕಥೆ, ಚಿತ್ರಕಥೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಗ್ಗೆ ಹೇಳಿಕೊಳ್ಳುವ ರವೀಂದ್ರ ಕೊಟಕಿ, “ನವ ಜೋಡಿಗಳು ಮೊದಲ ರಾತ್ರಿ ಸುಖ ಅನುಭಸಲು ಹೋಟೆಲ್‌ಗೆ ಬಂದಾಗ ಅವರ ಬದುಕಲ್ಲಿ ಏನೆಲ್ಲಾ ಘಟನೆಗಳು ಸಂಭವಿಸುತ್ತವೆ ಎಂಬುದನ್ನೇ ಚಿತ್ರದಲ್ಲಿ ಹಾಸ್ಯಮಯವಾಗಿ ತೋರಿಸಲಾಗಿದೆ.
ಒಂದು ರಾತ್ರಿ ಕೋಣೆಯೊಳಗೆ ನಡೆಯುವ ಚಿತ್ರದ ಕಥೆಯಲ್ಲಿ 28 ಪಾತ್ರಗಳು ಬರುತ್ತವೆ.ಬಾಡೂಟ ಅಂತ ಬಂದವರಿಗೆ “ಮಜ್ಜಿಗೆ ಹುಳಿ’ ಸಿಗುವುದು ಗ್ಯಾರೆಂಟಿ ಎನ್ನುತ್ತಾರೆ ಅವರು. “ಕೊಳ್ಳೆಗಾಲ’ ಚಿತ್ರದಲ್ಲಿ ಒರಟಾಗಿ ಅಭಿನಯಿಸಿದ್ದ ವೆಂಕಟೇಶ್ ದೀಕ್ಷಿತ್ ಈ ಚಿತ್ರದ ನಾಯಕನಾಗಿದ್ದು, ತಮ್ಮ ಎರಡನೇ ಚಿತ್ರದಲ್ಲಿ ಮುಗ್ಧ ಮನಸ್ಸಿನ, ಸೂಕ್ಷ್ಮ ಸ್ವಭಾವದ ಹುಡುಗನಾಗಿ ಕಾಣಿಸಿಕೊಂಡಿದ್ದಾರೆ.
ರೂಪಿಕಾ ಇಲ್ಲಿ ಬೋಲ್ಡ್ ಹುಡುಗಿಯ ಪಾತ್ರದಲ್ಲಿ ನಟಿದ್ದಾರೆ. ಉಳಿದಂತೆ ಸುಚೇಂದ್ರ ಪ್ರಸಾದ್, ಯತಿರಾಜ್, ಮಾನಸ ಗೌಡ, ಕುರಿ ಸುನಿಲ್ ಇತರರು ನಟಿಸಿದ್ದಾರೆ. ಇನ್ನು ಚಿತ್ರದ ಒಂದು ಸಾಲು ಕಥೆಯನ್ನು ಕೇಳಿದ ನಿರ್ದೇಶಕ ಯೋಗರಾಜ ಭಟ್, ಚಿತ್ರದ ಆರಂಭ ಮತ್ತು ಅಂತ್ಯಕ್ಕೆ ಹಿನ್ನೆಲೆ ಧ್ವನಿ ನೀಡಿದ್ದಾರೆ. ಚಿತ್ರದ ಹಾಡುಗಳಿಗೆ ಸಂಜೀವ ರಾವ್ ಸಂಗೀತ ಸಂಯೋಜಿಸಿದ್ದಾರೆ. ಟೈಟಲ್ ಹಾಡಿಗೆ ಗುರುಕಿರಣ್ ಮತ್ತೂಂದು ಟಪ್ಪಾಂಗುಚ್ಚಿ ಹಾಡನ್ನು “ಟಗರು’ ಖ್ಯಾತಿಯ ಅಂಥೋನಿ ದಾಸ್ ಹಾಡಿದ್ದಾರೆ.
ಇನ್ನುಳಿದ ಹಾಡುಗಳಿಗೆ ಸುನಿತಾ, ಸಂಜೀವ್, ದೀಪ್ತಿ ಪ್ರಶಾಂತ್ ಧ್ವನಿಯಾಗಿದ್ದಾರೆ. ತೆಲುಗು ಮೂಲದ ಎಸ್. ರಾಮಚಂದ್ರ, ಎ.ಆರ್ ಗಂಗಾಧರ್ ದಸ್ಕತ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಸದ್ಯ ಸೆನ್ಸಾರ್ ಮುಂದೆ ಹೋಗಲು ಸಿದ್ಧವಾಗಿರುವ ಚಿತ್ರ, ಎಲ್ಲಾ ಅಂದುಕೊಂಡಂತೆ ನಡೆದರೆ ಮಾರ್ಚ್ ವೇಳೆಗೆ ತೆರೆಗೆ ಬರಲಿದೆ.