ಮೈಸೂರು: ಮೈಸೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಜೆಡಿಎಸ್‌ನ ತಸ್ಲೀಮಾ, ಉಪ ಮೇಯರ್ ಆಗಿ ಕಾಂಗ್ರೆಸ್‌ನ ಶ್ರೀಧರ್ ಸಿ.ಆಯ್ಕೆಯಾಗಿದ್ದಾರೆ. ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಶನಿವಾರ ಚುನಾವಣೆ ನಡೆಯಿತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ತಸ್ಲೀಮಾ ಎರಡು ಸೆಟ್ ನಾಮಪತ್ರ ಸಲ್ಲಿಸಿದರು. ಬಿಜೆಪಿ ಅಭ್ಯರ್ಥಿಯಾಗಿ 65ನೇ ವಾರ್ಡ್ ಸದಸ್ಯೆ ಗೀತಾ ಯೋಗಾನಂದ ನಾಮಪತ್ರ ಸಲ್ಲಿಸಿದರು.
ಕೈ ಎತ್ತುವ ಮೂಲಕ ಮತ ದಾನ ಪ್ರಕ್ರಿಯೆ ಆರಂಭಿಸಲಾಯಿತು. ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಅಭ್ಯರ್ಥಿ ತಸ್ಲೀಮಾ ಪರ 47 ಮತ, ಬಿಜೆಪಿ ಅಭ್ಯರ್ಥಿ ಗೀತಾ ಯೋಗಾನಂದ ಅವರಿಗೆ 23 ಮತಗಳು ಲಭಿಸಿದವು. 47 ಮತ ಪಡೆದ ತಸ್ಲೀಮಾ ಮೇಯರ್‌ಆಗಿ ಆಯ್ಕೆಯಾಗಿದ್ದಾರೆಂದು ಘೋಷಿಸಲಾಯಿತು.
ಬಳಿಕ, ಉಪ ಮೇಯರ್ ಸ್ಥಾನದ ಚುನಾವಣಾ ಪ್ರಕ್ರಿಯೆ ಆರಂಭಿಸ ಲಾಯಿತು. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಕೂಟದ ಅಭ್ಯರ್ಥಿಯಾಗಿ ಸಿ.ಶ್ರೀಧರ್, ಬಿಜೆಪಿ ಅಭ್ಯರ್ಥಿಯಾಗಿ ಶಾಂತಮ್ಮ ನಾಮಪತ್ರ ಸಲ್ಲಿಸಿದರು. ಶ್ರೀಧರ್ 47 ಮತಗಳಿಸಿ ಉಪಮೇಯರ್ ಆಗಿ ಆಯ್ಕೆಯಾದರು. ಬಿಜೆಪಿಯ ಶಾಂತಮ್ಮ ಅವರಿಗೆ 23 ಸದಸ್ಯರು ಕೈ ಎತ್ತಿ ಬೆಂಬಲ ಸೂಚಿಸಿದರು.
ಸಂಸದ ಪ್ರತಾಪ್ ಸಿಂಹ, ಶಾಸಕ ಎಸ್.ಎ.ರಾಮದಾಸ್ ಗೈರು ಹಾಜರಾಗಿದ್ದರು. ಪಕ್ಷೇತರವಾಗಿ ಗೆದ್ದಿರುವ ಮಾ.ವಿ.ರಾಮಪ್ರಸಾದ್ ಬಿಜೆಪಿ ಅಭ್ಯರ್ಥಿ ಪರ ಕೈ ಎತ್ತಿ ಮತ ಚಲಾಯಿಸಿದರು. ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಗೈರಾಗಿ ದ್ದರು. ಜೆಡಿಎಸ್ ಶಾಸಕರಾದ ಜಿ.ಟಿ. ದೇವೇಗೌಡ, ಸಂದೇಶ್ ನಾಗರಾಜ್, ಮರಿತಿಬ್ಬೇಗೌಡ, ಕೆ.ಟಿ.ಶ್ರೀಕಂಠೇಗೌಡ ಹಾಜರಾಗಿ ಮತ ಚಲಾಯಿಸಿದರು.
ಮೈಸೂರು ಮಹಾನಗರ ಪಾಲಿಕೆ ಯಲ್ಲಿ ಕಳೆದ ವರ್ಷದ ಒಪ್ಪಂದ ದಂತೆ ಜೆಡಿಎಸ್- ಕಾಂಗ್ರೆಸ್ ದೋಸ್ತಿ ಮುಂದುವರಿದಿದ್ದು, ಮಾಜಿ ಸಚಿವ ಜಿ.ಟಿ.ದೇವೇ ಗೌಡರ ಸಲಹೆ-ಸೂಚನೆ ಪಡೆದೇ ಮೇಯರ್ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆ ಮಾಡಿದ್ದೇವೆ.
-ಸಾ.ರಾ.ಮಹೇಶ್, ಮಾಜಿ ಸಚಿವ
ಮೈಸೂರು ಜಿಲ್ಲೆಯಲ್ಲಿ ಜೆಡಿಎಸ್‌ಗೆ ಶಾಸಕ ಸಾ.ರಾ.ಮಹೇಶ್ ಅವರೇ ವರಿಷ್ಠರಾಗಿದ್ದಾರೆ. ಹೈಕಮಾಂಡ್ ಅವರಿಗೆ ಹೇಳಿದ್ದನ್ನು ಅವರು ನಮಗೆ ತಿಳಿಸ್ತಾರೆ. ನಾವು ಅದನ್ನು ಪಾಲಿಸುತ್ತೇವೆ. ಮೊದಲಿನಿಂದಲೂ ಹಾಗೆ ನಡೆದುಕೊಂಡು ಬಂದಿದೆ.
-ಜಿ.ಟಿ.ದೇವೇಗೌಡ, ಮಾಜಿ ಸಚಿವ