Advertisement

ಸರ್ವ ಸಮಸ್ಯೆಗಳ ಮುಕ್ತಿಗೆ ಟಾಸ್ಕ್ಫೋರ್ಸ್‌

11:22 AM Oct 10, 2017 | Team Udayavani |

ಬೆಂಗಳೂರು: ನಗರವನ್ನು ಕಸ ಮುಕ್ತ, ಗುಂಡಿ ಮುಕ್ತ, ಕಟ್ಟಡ ಅವಶೇಷ ಮುಕ್ತ ಹಾಗೂ ಚರಂಡಿಗಳನ್ನು ಹೂಳು ಮುಕ್ತವಾಗಿಸಲು ಕಾರ್ಯಪಡೆ (ಟಾಸ್ಕ್ಫೋರ್ಸ್‌) ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, “ನಗರದಲ್ಲಿ ಎಲ್ಲೆಂದರಲ್ಲಿ ಕಟ್ಟಡ ಅವಶೇಷ, ಕಸ ಸುರಿಯುವುದನ್ನು ತಡೆಯಲು, ಚರಂಡಿಗಳಲ್ಲಿ ಹೂಳು ತುಂಬುವುದರಿಂದ ನೀರು ಸರಾಗವಾಗಿ ಹರಿಯಲು ತೊಂದರೆಯಾಗುದನ್ನು ತಪ್ಪಿಸಲು ವಿಚಕ್ಷಣ ದಳ ರಚನೆ ಮಾಡಲಾಗುವುದು ಎಂದರು.

ವಿಲೇವಾರಿ ಘಟಕಗಳಲ್ಲಿ ವೈಜ್ಞಾನಿಕ ತ್ಯಾಜ್ಯ ಸಂಸ್ಕರಣೆಗೆ ಆದ್ಯತೆ ನೀಡಲಾಗಿದ್ದು, ಕಸ ಸಾಗಣೆಯಾಗುವ ಹಳೆಯ ಕಲ್ಲುಕ್ವಾರಿ ಪ್ರದೇಶದಲ್ಲೂ ಸ್ವತ್ಛತೆ ಕಾಪಾಡಲು, ಆ ಪ್ರದೇಶದ ಅಭಿವೃದ್ಧಿ ಜತೆಗೆ ಸುತ್ತಮುತ್ತ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಲಾಗುವುದು. ಒಟ್ಟಾರೆ ಕಾರ್ಯಪಡೆಯೊಂದನ್ನು ರಚಿಸಿ ನಿರಂತರವಾಗಿ ಮೇಲ್ವಿಚಾರಣೆ ನಡೆಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಮುಂದಿನ ಎರಡು ವರ್ಷಗಳಲ್ಲಿ ನಗರದಲ್ಲಿರುವ 845 ಕಿ.ಮೀ. ಉದ್ದದ ಮಳೆ ನೀರು ಕಾಲುವೆ ಹೂಳು ತೆರವುಗೊಳಿಸಿ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸುವ ಮೂಲಕ ಮಳೆ ಸುರಿದಾಗ ಅನಾಹುತ ಉಂಟಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ 845 ಕಿ.ಮೀ. ಉದ್ದದ ಮಳೆ ನೀರು ಕಾಲುವೆಯಿದ್ದು, ಈ ಪೈಕಿ 345 ಕಿ.ಮೀ. ಉದ್ದದ ಕಾಲುವೆಯ ಹೂಳು ತೆಗೆದು, ಒತ್ತುವರಿ ತೆರವುಗೊಳಿಸಿ ಸಮಸ್ಯೆ ನಿವಾರಿಸಲಾಗಿದೆ. ಇನ್ನುಳಿದ 500 ಕಿ.ಮೀ. ಉದ್ದದ ಕಾಲುವೆಯಲ್ಲೂ ಅಪಾಯಕಾರಿ ಸ್ಥಳಗಳನ್ನು ಗುರುತಿಸಿ ದುರಸ್ತಿಪಡಿಸಲು ಕ್ರಿಯಾ ಯೋಜನೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ ಎಂದು ತಿಳಿಸಿದರು.

Advertisement

ಮಳೆ ನೀರು ಕಾಲುವೆಗಳ ಹೂಳು ತೆರವಿಗೆ ರೊಬೋಟಿಕ್‌ ಎಸ್ಕವೇಟರ್‌ ಯಂತ್ರ ಬಳಸಲಾಗುತ್ತಿದೆ. ಈಗಾಗಲೇ ಮೂರು ಯಂತ್ರಗಳನ್ನು ಗುತ್ತಿಗೆ ಆಧಾರದಲ್ಲಿ ಬಳಸಲಾಗುತ್ತಿದ್ದು, ಇನ್ನೂ ಎರಡು ಯಂತ್ರಗಳನ್ನು ಪಡೆದು ಬಳಸಲು ನಿರ್ಧರಿಸಲಾಗಿದೆ ಎಂದು ಹೇಳಿದರು.

ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ವಾರ್ಡ್‌ಗೆ 10 ಲಕ್ಷ ರೂ.: ಬಿಬಿಎಂಪಿಯ ಎಲ್ಲ 198 ವಾರ್ಡ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗೆ ತಲಾ 10 ಲಕ್ಷ ರೂ. ಅನುದಾನ ನೀಡಲಾಗುವುದು. ಈ ಜವಾಬ್ದಾರಿಯನ್ನು ಪೊಲೀಸ್‌ ಇಲಾಖೆಗೆ ವಹಿಸಲಾಗಿದ್ದು, ಇಲಾಖೆ ಅಧಿಕಾರಿಗಳೇ ಸೂಕ್ತ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆಗ ಕ್ರಮ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಬಾಕಿ ಬಿಲ್‌ ಪಾವತಿಗೆ ಸಾಲ: ಬಿಬಿಎಂಪಿಯಲ್ಲಿ ಗುತ್ತಿಗೆದಾರರಿಗೆ ಬಾಕಿಯಿರುವ 700 ಕೋಟಿ ರೂ. ಬಿಲ್‌ ಮೊತ್ತವನ್ನು ಸಾಲ ಪಡೆದು ಪಾವತಿಸುವಂತೆ ಬಿಬಿಎಂಪಿಗೆ ಸೂಚನೆ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಪಾಲಿಕೆಯಲ್ಲಿ ಈ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿಯು ಗುತ್ತಿಗೆದಾರರಿಗೆ 2,500 ಕೋಟಿ ರೂ. ಬಾಕಿ ಬಿಲ್‌ ಮೊತ್ತ ಸೇರಿದಂತೆ ಸುಮಾರು 8000 ಕೋಟಿ ರೂ. ಬಾಕಿ ಹೊರೆ ಹೊರಿಸಿ ಹೋಗಿತ್ತು. ಆ ಹೊರೆಯ ಬಹುತೇಕ ಮೊತ್ತವನ್ನು ನಾವು ತೀರಿಸಿದ್ದೇವೆ. ಗುತ್ತಿಗೆದಾರರಿಗೆ 700 ಕೋಟಿ ರೂ. ಬಿಲ್‌ ಮೊತ್ತ ಬಾಕಿಯಿದ್ದು, ಅದನ್ನು ಒಮ್ಮೆಗೆ ಪಾವತಿಸಲು ಸಾಲ ಪಡೆಯಲು ಅವಕಾಶ ನೀಡಲಾಗಿದೆ. ಇದರಿಂದ ಗುತ್ತಿಗೆದಾರರು ಹೊಸ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗಲಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next