ಶ್ರೀರಂಗಪಟಣ: ಟಾಸ್ಕ್ ಫೋರ್ಸ್ ನೌಕರರ ವೇತನ ಬಿಡುಗಡೆಗೆ ಆಗ್ರಹಿಸಿ ಸೋಮವಾರ ತಾಲೂಕಿನ ಕೆಆರ್‌ಎಸ್ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಕೆಆರ್‌ಎಸ್‌ನ ಕಾವೇರಿ ನೀರಾವರಿ ನಿಗಮದ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರ ಹಾಗೂ ನಿಗಮದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಹಲವು ವರ್ಷಗಳಿಂದ ಕೆಲಸ ನಿರ್ವಸುತ್ತಿರುವ ಟಾಸ್ಕ್ ಫೋರ್ಸ್ ನೌಕರರಿಗೆ ಕಳೆದ 4 ತಿಂಗಳಿಂದ ಸಂಬಳ ನೀಡಿಲ್ಲ. ಇದರಿಂದ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಅಧಿಕಾರಿಗಳಿಗೆ ಸಮಸ್ಯೆ ಹೇಳಿದರೂ ಸ್ಪಂದಿಸುತ್ತಿಲ್ಲ ಎಂದು ಗ್ರಾಪಂ ಸದಸ್ಯ ಮಂಜುನಾಥ್ ದೂರಿದರು.
ಕೆಆರ್‌ಎಸ್ ವಿವಿಧೆಡೆ 130 ಮಂದಿ ಟಾಸ್ಕ್ ಫೋರ್ಸ್ ನೌಕರರಿದ್ದಾರೆ. ಹಲವು ವರ್ಷಗಳಿಂದ ಸಕಾಲಕ್ಕೆ ಸಂಬಳ ಸಿಗುತ್ತಿಲ್ಲ. ಪ್ರತಿ ತಿಂಗಳು ಸಂಬಳ ಕೊಡಿಸುವಂತೆ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಆದಷ್ಟು ಶೀಘ್ರ ನಮ್ಮ ಬೇಡಿಕೆ ಈಡೇರಿಸಬೇಕು. ಇಲ್ಲದಿದ್ದರೆ ಉಪವಾಸ ಸತ್ಯಾಗ್ರಹ ನಡೆಸುತ್ತೇವೆ ಎಂದು ಕಾರ್ಮಿಕ ಮುಖಂಡ ಚಲುವರಾಜು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ನಿಗಮದ ಕಚೇರಿ ಅಧೀಕ್ಷಕ ದೇವರಾಜು ಅವರಿಗೆ ಮನವಿ ಸಲ್ಲಿಸಿದರು. ಗ್ರಾಪಂ ಮಾಜಿ ಉಪಾಧ್ಯಕ್ಷ ಕೆ.ರಾಜು, ಸದಸ್ಯರಾದ ರವಿಶಂಕರ್, ಜಗದೀಶ್‌ಸಿಂಗ್, ಪಿ.ರಾಜು, ವೈರಮುಡಿ, ರಮೇಶ, ರವಿ. ಸುನಂದಮ್ಮ, ಶೀಲಾ ಭಾಗವಸಿದ್ದರು.