ಬಿದ್ದಿದೆ.
Advertisement
23 ವರ್ಷದ ಥ್ರೋಬಾಲ್ ಆಟಗಾರ್ತಿ ತಷ್ಮಾ ಕುಟುಂಬ ಈಗ ಮಡಿಕೇರಿಯ ಗಂಜಿ ಕೇಂದ್ರದಲ್ಲಿ ನಿಟ್ಟುಸಿರು, ಕಣ್ಣೀರಿನೊಂದಿಗೆ ದಿನದೂಡುತ್ತಿದೆ. ತಷ್ಮಾ ಅವರ ಅಂಕಪಟ್ಟಿ, ಅಂತಾರಾಷ್ಟ್ರೀಯ ಕ್ರೀಡಾ ಸಾಧನೆಯ ಪ್ರಮಾಣಪತ್ರ, ಟ್ರೋಫಿಗಳು ಎಲ್ಲ ಅವರ ಮನೆಯ ಅವಶೇಷಗಳಡಿ ಹೂತುಹೋಗಿವೆ. ಮತ್ತದು ಕೈಗೆ ಸಿಗುವ ಕಿಂಚಿತ್ ಭರವಸೆಯೂ ಇಲ್ಲ. ಕಳೆದ ವರ್ಷವಷ್ಟೇ 25 ಲಕ್ಷ ರೂ. ಸಾಲ ಮಾಡಿ ಕಟ್ಟಿದ್ದ ಮನೆ ಕಣ್ಣೆದುರೇ ಗುರುತು ಸಿಗದಂತೆ ಇಲ್ಲವಾಗಿದೆ. ಹಿಂದಿನಿಂದ ಕುಸಿದು ಬೀಳುತ್ತಿದ್ದ ಗುಡ್ಡಕ್ಕೆ ಮನೆ ಬಲಿಯಾಗಿದ್ದುದ್ದನ್ನು ಕಣ್ಣಾರೆ ನೋಡುತ್ತಲೇ, ಕಣ್ಣೀರು ಸುರಿಸುತ್ತಲೇ ತಷ್ಮಾ ಕುಟುಂಬ ದೂರ ಓಡಿ ಹೋಗಿ ಜೀವವುಳಿಸಿಕೊಂಡಿದೆ. ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಊರಿನಲ್ಲಿ ನಡೆದ ಈ ದುರಂತದಲ್ಲಿಇಡೀ ಊರೇ ನಾಶವಾಗಿದೆ. ಮತ್ತೆ ಬದುಕು ಕಟ್ಟಿಕೊಳ್ಳಲು ಪರಿತಪಿಸುತ್ತಿರುವ ತಷ್ಮಾ ಕುಟುಂಬ ಸಹಾಯಕ್ಕಾಗಿ ಎದುರು ನೋಡುತ್ತಿದೆ.
ಮನೆ. ಬಾಲ್ಯದಲ್ಲೇ ಕ್ರೀಡಾಕೂಟದಲ್ಲಿ ಅಪಾರ ಆಸಕ್ತಿ. ತನ್ನ ನೆಚ್ಚಿನ ಥ್ರೋಬಾಲ್‌ನಲ್ಲಿ ಏನಾದರೂ ಸಾಧಿಸಬೇಕು ಎನ್ನುವ ಛಲ. ಪ್ರಾಥಮಿಕ ಶಿಕ್ಷಣವನ್ನು ಮಡಿಕೇರಿಯಲ್ಲಿ, ಪ್ರೌಢ ಶಿಕ್ಷಣವನ್ನು ಮದೆನಾಡುವಿನಲ್ಲಿ, ಪಿಯುಸಿ ಶಿಕ್ಷಣವನ್ನು ಸುಳ್ಯದ ಸರ್ಕಾರಿ ಕಾಲೇಜಿನಲ್ಲಿ ಪಡೆದ ತಷ್ಮಾ
ಅದಾಗಲೇ ಥ್ರೋಬಾಲ್‌ನಲ್ಲಿ ಗುರುತಿಸಿಕೊಂಡಿದ್ದರು. ಕ್ರೀಡಾ ಕೋಟಾದಡಿಯಿಂದಲೇ ಇವರಿಗೆ ಆಳ್ವಾಸ್‌ನಲ್ಲಿ ಪದವಿ ಶಿಕ್ಷಣಕ್ಕೆ ಅವಕಾಶ ಸಿಕ್ಕಿತ್ತು. ತಷ್ಮಾ ಬಳಿಕ ಹಿಂದಿರುಗಿ ನೋಡಿದ್ದೇ ಇಲ್ಲ. ರಾಜ್ಯ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಸಾಧನೆ ಮಾಡಿದ್ದರು. ಪದವಿ ಮುಗಿದ ಬಳಿಕ ಅನಿವಾರ್ಯ ಕಾರಣದಿಂದ ತಷ್ಮಾ ಕ್ರೀಡೆಯನ್ನು ತೊರೆಯಬೇಕಾಯಿತು. ಕಳೆದ 2 ವರ್ಷದಿಂದ ತಷ್ಮಾ ಕೊಡಗು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್‌ನ ಉದ್ಯೋಗಿಯಾಗಿದ್ದಾರೆ. ಬೆಟ್ಟ ಕುಸಿಯುವ ಮೊದಲು ಭೀಕರ ಶಬ್ದ: ತಮ್ಮ ಕಣ್ಣೆದುರೇ ನಡೆದ ಘನಘೋರ ದುರಂತವನ್ನು ತಷ್ಮಾ ಹೀಗೆ ವಿವರಿಸುತ್ತಾರೆ:
ಎಂದಿನಂತೆ ಸಂಜೆ ಕೆಲಸ ಮುಗಿಸಿ ಮನೆಗೆ ತಲುಪಿದ್ದೆ (ಆ.16). ಮಳೆ ಜೋರಾಗಿ ಸುರಿಯುತ್ತಿತ್ತು. ಮಡಿಕೇರಿ- ಮಂಗಳೂರು ಹೆದ್ದಾರಿಯ ಮದೆನಾಡುವಿನ ಸಮೀಪ ರಾಷ್ಟ್ರೀಯ ಹೆದ್ದಾರಿಗೆ ಬೆಟ್ಟ ಕುಸಿದಿತ್ತು. ಹೀಗಾಗಿ ಮರುದಿನ ಕೆಲಸಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಆ.17ಕ್ಕೆ ಬೆಳಗ್ಗೆ
10 ಗಂಟೆಯಾಗಿತ್ತು. ಆಗ ತಾನೇ ಅಮ್ಮ ಮಾಡಿದ ತಿಂಡಿ ತಿಂದು ಹೊರಗೆ ಕುಳಿತಿದ್ದೆ. ದೂರದಲ್ಲಿ ಭಾರೀ ಶಬ್ದ ಕೇಳಿಸುತ್ತಿತ್ತು. ಮಳೆ ಇರಬೇಕು ಅಂದುಕೊಂಡು ಮನೆಯ ಸಮೀಪ ಹರಿಯುತ್ತಿರುವ ಹಳ್ಳದ ಹತ್ತಿರ ಬಂದೆ. ಒಂದೇ ಸಮನೆ ಕಲ್ಲುಗಳು ನೀರಿನೊಂದಿಗೆ ಬರುತ್ತಿರುವುದನ್ನು
ಗಮನಿಸಿದೆ. ನೀರಿನ ಜತೆಗೆ ಅಷ್ಟೊಂದು ಕಲ್ಲುಗಳು ಬಂದಿರುವುದನ್ನು ಎಂದಿಗೂ ನೋಡಿಯೇ ಇರಲಿಲ್ಲ. ತಕ್ಷಣ ಮನೆಯವರಿಗೆ ತಿಳಿಸಿದೆ.
Related Articles
Advertisement
ತಾಯಿ ಕಾವೇರಿ ಕಾಪಾಡಿದಳು: ಎಲ್ಲ ದಾರಿ ಮುಚ್ಚಿದ ಬಳಿಕ ಮುಖ್ಯ ರಸ್ತೆಗೆ ಸೇರಲು ಇದ್ದ ಮಾರ್ಗ ತೋಚಲಿಲ್ಲ. ಅಲ್ಲೊಂದು ಕಾಲು ದಾರಿ ಇತ್ತು. ಅಲ್ಲಿ ಸಣ್ಣ ನೀರು ಹರಿಯುವ ಹಳ್ಳವಿತ್ತು. ಕಾವೇರಿ ಮಾತೆ ಈ ದಾರಿಯನ್ನು ಮುಚ್ಚಬೇಡ ಎಂದು ಮನದಲ್ಲೇ ಪ್ರಾರ್ಥಿಸಿ ನನ್ನ ಕುಟುಂಬದವರನ್ನು ಕರೆದುಕೊಂಡು ಬೇಗಬೇಗನೆ ದಾರಿಯತ್ತ ನಡೆದೆ. ಕೊನೆಗೂ ಆ ತಾಯಿ ಕೈ ಬಿಡಲಿಲ್ಲ. ಅಲ್ಲಿ ನೀರು ಹೆಚ್ಚಿರಲಿಲ್ಲ. ದಾಟಿಕೊಂಡೇ ಮುಖ್ಯ ರಸ್ತೆಗೆ ಬಂದೆವು. ಅದಾಗಲೇ ಮದೆನಾಡಿನ ಕೆಲವು ಯುವಕರು ನಮ್ಮನ್ನು ಚೇರಂಬಾಣೆಯ ನಿರಾಶ್ರಿತರ ಕೇಂದ್ರಕ್ಕೆ ಕರೆದುಕೊಂಡು ಹೋದರು. ಅಲ್ಲಿ 9 ದಿನ ಇದ್ದೆ. ಇದೀಗ ಮಡಿಕೇರಿಯ ನಿರಾಶ್ರಿತರ ಕೇಂದ್ರಕ್ಕೆ ನಮ್ಮನ್ನು ಸ್ಥಳಾಂತರಿಸಲಾಗಿದೆ. ಒಟ್ಟಾರೆ 60 ಜನ ಈಗ ನಿರಾಶ್ರಿತರ ಕೇಂದ್ರದಲ್ಲಿದ್ದೇವೆ.
ಅಣ್ಣನ ಸಾವಿನ ಬೆನ್ನಲ್ಲೇ ಆಘಾತ ತಷ್ಮಾ 2 ತಿಂಗಳ ಹಿಂದೆಯಷ್ಟೇ ತನ್ನ ಸಹೋದರನನ್ನು ಕಳೆದುಕೊಂಡಿದ್ದರು. ಇದೀಗ ಬದುಕನ್ನೇ ಕಳೆದುಕೊಂಡ ನೋವಿನಲ್ಲಿದ್ದಾರೆ. ಬಾಲ್ಯದಿಂದಲೂ ತಷ್ಮಾ ಕುಟುಂಬ ಮಡಿಕೇರಿಯಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಿದ್ದರು. ಕಳೆದ ಮೂರು ವರ್ಷದ ಹಿಂದೆ ಮದೆನಾಡುವಿನ ಎರಡನೇ ಮೊಣ್ಣಂಗೇರಿಯಲ್ಲಿ 2 ಲಕ್ಷ ರೂ.ವಿಗೆ ಜಮೀನು ಖರೀದಿಸಿದ್ದರು. 1 ವರ್ಷದ ಹಿಂದೆ ತಮ್ಮದೊಂದು ಸ್ವಂತ ಮನೆ ಇರಬೇಕು ಎನ್ನುವ ಕಾರಣಕ್ಕೆ 25 ಲಕ್ಷ ರೂ. ಸಾಲ ಮಾಡಿ ಮನೆ ಕಟ್ಟಿಸಿದ್ದರು. ಇದೀಗ ಎಲ್ಲವೂ ನೆಲಸಮವಾಗಿದೆ. ಇಡೀ ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಾದ ಸ್ಥಿತಿ ತಷ್ಮಾಗೆ ಎದುರಾಗಿದೆ. ನಿರಾಶ್ರಿತರ ಕೇಂದ್ರದಲ್ಲಿರುವ ನಮಗೆ ಸರ್ಕಾರದಿಂದ ಖರ್ಚಿಗೆಂದು 3,800 ರೂ. ನೀಡಿದ್ದಾರೆ. ಇದನ್ನು ಬಿಟ್ಟರೆ ಜನಪ್ರತಿನಿಧಿಗಳಿಂದ ಮನೆ ಕಟ್ಟಿಸಿಕೊಡುತ್ತೇವೆ ಎನ್ನುವ ಭರವಸೆ ಸಿಕ್ಕಿದೆ ಅಷ್ಟೆ. ಮುಂದಿನ ದಾರಿ ತೋಚುತ್ತಿಲ್ಲ.
● ತಷ್ಮಾ ಮುತ್ತಪ್ಪ, ಅಂ.ರಾ.ಥ್ರೋಬಾಲ್ ಕ್ರೀಡಾಪಟು ಹೇಮಂತ್ ಸಂಪಾಜೆ